

ಬೆಂಗಳೂರು: ಸರಿಸುಮಾರು ಐದು ದಶಕಗಳ ಹಿಂದೆ ತಮ್ಮ ಜಮೀನು ಸ್ವಾಧೀನಪಡಿಸಿಕೊಂಡಿದ್ದನ್ನು ಪ್ರಶ್ನಿಸಿ ವ್ಯಕ್ತಿಯೋರ್ವ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ತಿಪ್ಪಸಂದ್ರದ ನಿವಾಸಿ ವೇಣು ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಸ್ವಾಧೀನಕ್ಕೆ ಪಡೆದು 53 ವರ್ಷ ಕಳೆದಿದೆ. ಈ ಮೂಲಕ ವಿಳಂಬ ಪ್ರವೃತ್ತಿ ತೋರಿಸಿದ್ದಾರೆ. ಇದರಿಂದಾಗಿ ಅರ್ಜಿದಾರರ ಹಕ್ಕು ಕ್ಷೀಣಿಸಿದೆ. ಅರ್ಜಿಯನ್ನು ವಜಾಗೊಳಿಸಿ ನಿವೇಶನವನ್ನು ಹರಾಜು ಮಾಡುವುದಕ್ಕೆ ಬಿಡಿಎಗೆ ಅವಕಾಶ ನೀಡಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಸ್ತಾವಿತ ಜಮೀನನ್ನು 1970ರ ಸೆ.22ರಂದು ಸ್ವಾಧೀನಕ್ಕಾಗಿ ಪ್ರಾಥಮಿಕ ಅಧಿಸೂಚನೆ ಮತ್ತು 1971ರ ಜು.15ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಬೆಂಗಳೂರು ನಗರ ಸುಧಾರಣಾ ಕಾಯ್ದೆ-1945ರ ಅಡಿಯಲ್ಲಿ ಪ್ರಾರಂಭಿಸಲಾದ ಭೂಸ್ವಾಧೀನ ಪ್ರಕ್ರಿಯೆಯಂತೆ ತಿಪ್ಪಸಂದ್ರದಲ್ಲಿರುವ ಜಮೀನನ್ನು ಬಿಡಿಎ ಸ್ವಾಧೀನಕ್ಕೆ ಪಡೆದುಕೊಂಡಿತ್ತು.
2023ರ ಸೆ.16ರಂದು ಬಿಡಿಎ ಎಚ್‌ಎಎಲ್ 3ನೇ ಹಂತದ ರಚನೆಗೆ ಇ-ಹರಾಜಿಗೆ ನಿವೇಶನವನ್ನು ಪಟ್ಟಿ ಮಾಡಿತ್ತು. ಈ ಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ಅರ್ಜಿದಾರರು 1995ರ ಅ.4ರಂದು ಖರೀದಿಸಿರುವುದಾಗಿ ತಿಳಿಸಿ, 2023ರ ಸೆ.29ರಂದು (25 ವರ್ಷಗಳ ನಂತರ) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನಿವೇಶನ ತನ್ನ ಸ್ವಾಧೀನದಲ್ಲಿದ್ದು, ತನ್ನ ಹೆಸರಿನಲ್ಲಿ ಬಳಕೆಗೆ ಖಾತಾ ಸಹ ಇದೆ. ಬಿಡಿಎ ಈ ಆಸ್ತಿಯನ್ನು ಎಂದಿಗೂ ಸ್ವಾಧೀನಪಡಿಸಿಕೊಂಡಿಲ್ಲ ಎಂದು ಅರ್ಜಿದಾರರ ಪರ ವಕೀಲರು ಆಕ್ಷೇಪಿಸಿದ್ದರು.
ಇದಕ್ಕೆ ಆಕ್ಷೇಪಿಸಿದ್ದ ಬಿಡಿಎ ಪರ ವಕೀಲರು, ಅರ್ಜಿದಾರರ ಹೆಸರಿನಲ್ಲಿ ಯಾವುದೇ ದಾಖಲೆಗಳಿಲ್ಲ. ಸ್ವಾಧೀನ ಪ್ರಕ್ರಿಯೆ ಪ್ರಶ್ನಿಸುವಲ್ಲಿ ಸಾಕಷ್ಟು ವಿಳಂಬವಾಗಿದೆ. ಸ್ವಾಧೀನ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ದೀರ್ಘಕಾಲದವರೆಗೂ ಪ್ರಶ್ನಿಸಲು ಸಾಧ್ಯವಿಲ್ಲ. ಹೀಗಾಗಿ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು.