

| ಪಂಕಜ ಕೆ.ಎಂ. ಬೆಂಗಳೂರು
ಕೋವಿಡ್ ಸಾಂಕ್ರಾಮಿಕ ವೇಳೆ ಸೋಂಕಿನಿಂದ ರಕ್ಷಣೆ ಪಡೆಯಲು ಅನಿವಾರ್ಯವಾದ ಮಾಸ್ಕ್ ಇದೀಗ ಜನರಿಗೆ ಕಿರಿಕಿರಿ ತರುತ್ತಿದೆ. ಬೇಸಿಗೆಯ ಬಿಸಿಲ ತಾಪಕ್ಕೆ ಬಸವಳಿದಿರುವ ಮಂದಿಗೆ ಮಾಸ್ಕ್ ನಿಂದ ನಾನಾ ಚರ್ಮದ ಸಮಸ್ಯೆ ಕಾಡಲಾರಂಭಿಸಿದೆ.
ಮಾಸ್ಕ್ ಆದೇಶ ರಾಜ್ಯದಲ್ಲಿ ಹಿಂಪಡೆದಿಲ್ಲ: ದೇಶದಲ್ಲಿ ಕೋವಿಡ್ 3ನೇ ಅಲೆ ಬಹುತೇಕ ಕ್ಷೀಣಿಸಿದೆ. ಇದರಿಂದ ಈಗಾಗಲೆ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಕಡ್ಡಾಯ ಮಾಸ್ಕ್ ಧರಿಸುವ ಆದೇಶವನ್ನು ಅಲ್ಲಿನ ಸರ್ಕಾರಗಳು ಹಿಂಪಡೆದಿವೆ. ಆದರೆ, ಕರ್ನಾಟಕದಲ್ಲಿ ಇನ್ನೂ ಆದೇಶ ಹಿಂಪಡೆದಿಲ್ಲ.
ಮಾಸ್ಕ್ ನಿಂದಾಗುತ್ತಿರುವ ಸಮಸ್ಯೆಗಳು: ದೀರ್ಘ ಕಾಲ ಹಾಗೂ ಬಿಸಿಲಿನಲ್ಲಿ ಮಾಸ್ಕ್ ಧರಿಸುವುದರಿಂದ ಮಾಸ್ಕ್ನಿಂದ ಆವೃತವಾದ ಮುಖದ ಭಾಗದಲ್ಲಿ ಅಲರ್ಜಿ, ತುರಿಕೆ, ಚರ್ಮ ಕೆಂಪಾಗುವಿಕೆ, ಚರ್ಮದ ಉರಿ, ಮೊಡವೆ, ಗುಳ್ಳೆಗಳು, ಕಲೆಗಳು ಉಂಟಾಗುವುದು ಸೇರಿ ನಾನಾ ಸಮಸ್ಯೆ ಕಾಡುತ್ತಿವೆ. ಮಾಸ್ಕ್ನ ಅಂಚು ಚರ್ಮದ ನಡುವೆ ಸಂಘರ್ಷ ಉಂಟಾದಾಗ ಚರ್ಮದಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಬಿಸಿಲಿನಿಂದಾಗಿ ಬೆರವುದುರಿಂದ ಚರ್ಮಕ್ಕೆ ಹಾನಿ ಉಂಟು ಮಾಡುತ್ತದೆ. ಹಾಗೆಂದು ಮಾಸ್ಕ್ ಧರಿಸಿದ ಎಲ್ಲರಿಗೂ ಈ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಸೂಕ್ಷ್ಮ ಚರ್ಮ ಉಳ್ಳವರಲ್ಲಿ, ಬಿಗಿಯಾದ ಮಾಸ್ಕ್ ಧರಿಸಿದವರಲ್ಲಿ ಸಾಮಾನ್ಯ ಎನ್ನುತ್ತಾರೆ ಇಎಸ್ಐ ಆಸ್ಪತ್ರೆಯ ಚರ್ಮರೋಗ ತಜ್ಞ ಡಾ. ಗಿರೀಶ್.
38 ಕೋವಿಡ್ ಕೇಸ್, ಒಬ್ಬರ ಸಾವು: ರಾಜ್ಯದಲ್ಲಿ ಸೋಮವಾರ ಕೇವಲ 5,083 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 38 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರು ನಗರದಲ್ಲಿ ಸೋಂಕಿತ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,500ಕ್ಕೆ ಇಳಿಕೆಯಾಗಿದೆ. ಗುಣಮುಖರ ಒಟ್ಟು ಸಂಖ್ಯೆ 39.04 ಲಕ್ಷ ಮೀರಿದೆ. ಈವರೆಗೂ 40,055 ಸೋಂಕಿತರು ಮೃತರಾಗಿದ್ದಾರೆ.
ಸದ್ಯ ಕೋವಿಡ್ ಪರೀಕ್ಷೆಗಳ ಸಂಖ್ಯೆ ಕಡಿಮೆಯಾಗಿದ್ದು, ಕೇವಲ ರೋಗ ಲಕ್ಷಣಗಳನ್ನು ಆಧರಿಸಿ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದ ಸೋಂಕು ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಹಾಗೆಂದು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಜನರು (5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹೊರತುಪಡಿಸಿ) ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೂಕ್ತ. | ಡಾ. ಎಂ.ಕೆ ಸುದರ್ಶನ್ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಕೋವಿಡ್ ಹೊಸ ತಳಿ ಕಾಣಿಸಿಕೊಂಡಲ್ಲಿ ನಾಲ್ಕನೇ ಅಲೆ ಬರಬಹುದು. ಸದ್ಯ ಸೋಂಕು ತಗ್ಗಿದ್ದರೂ ಇನ್ನೂ ಕೆಲ ಕಾಲ ಮಾಸ್ಕ್ ಧರಿಸುವಿಕೆ ಕಡ್ಡಾಯಗೊಳಿಸಬೇಕು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮೂಲಕ ಈಗಾಗಲೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. | ಡಾ.ವಿ.ರವಿ ವೈರಾಣು ತಜ್ಞ, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ
ನೆಲಮಂಗಲ: ಮಾಸ್ಕ್ ಬಳಕೆ ನಿಷೇಧಿಸುವ ಕುರಿತು ಶೀಘ್ರದಲ್ಲೇ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಕರೊನಾ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ ಬಳಸಿದ ಮಾಸ್ಕ್ಗಳನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆೆ. ಈ ಸಮಸ್ಯೆ ಪರಿಹರಿಸಲು ದೇಶದ 4-5 ರಾಜ್ಯಗಳಲ್ಲಿ ಈಗಾಗಲೆ ಮಾಸ್ಕ್ ಬಳಕೆ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ನಿಷೇಧಿಸುವ ಕುರಿತು ತಾಂತ್ರಿಕ ಸಲಹಾ ಸಮಿತಿ ಹಾಗೂ ಮುಖ್ಯಮಂತ್ರಿ ಜತೆ ರ್ಚಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ಚೀನಾ ಮತ್ತು ಕೆಲವು ದೇಶದಲ್ಲಿ ಹೊಸ ತಳಿ ಕಾಣಿಸಿಕೊಂಡಿರುವುದು ವರದಿಯಾಗಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಅಭಿಪ್ರಾಯವನ್ನು ನಾವು ಗಮನಿಸುತ್ತಿದ್ದೇವೆ. ಜಿನೋಮಿಕ್ ಸಿಕ್ವೆನ್ಸಿಂಗ್ ಈಗಲೂ ನಡೆಯುತ್ತಿದೆ ಎಂದರು.