ಜನರ ಸಂಕಷ್ಟಗಳಿಗೆ ಗ್ಯಾರಂಟಿಯಿಂದ ಮುಕ್ತಿ

RAJEGOWDA (2)
Published on

ಕೊಪ್ಪ: ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕು ಮತ್ತು ಖಾಂಡ್ಯ ಹೋಬಳಿಗೆ ಗ್ಯಾರಂಟಿ ಯೋಜನೆಗಾಗಿ ಪ್ರತಿ ವರ್ಷ 250 ಕೋಟಿ ರೂ. ಅನುದಾನ ಖರ್ಚು ಮಾಡಲಾಗುತ್ತಿದೆ ಎಂದು ಶಾಸಕ ಟಿ.ಡಿ ರಾಜೇಗೌಡ ಹೇಳಿದರು.

ಗ್ಯಾರಂಟಿ ಯೋಜನೆಗಳ ನಡುವೆಯೂ ಅಗತ್ಯ ಕಾಮಗಾರಿಗಳು ಅಭಿವೃದ್ಧಿ, ಯೋಜನೆಗಳು ನಡೆಯುತ್ತಿವೆ. ಸರ್ಕಾರದ ಏಳಿಗೆಯನ್ನು ಸಹಿಸದ ವಿಪಕ್ಷಗಳು ಸರ್ಕಾರ ಮತ್ತು ನನ್ನ ಮೇಲೆ ಸದಾ ಟೀಕೆಗಳನ್ನು ಮಾಡುತ್ತಿವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕರೊನಾ ಸಮಯದಲ್ಲಿ ಅದೆಷ್ಟೋ ಜನ ಹಸಿವಿನಿಂದ ಕಂಗೆಟ್ಟಿದ್ದರು. ಔಷಧ ಮಾತ್ರೆಗಳಿಲ್ಲದೆ ತೊಂದರೆ ಅನುಭವಿಸಿದ್ದರು. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಬಡವರ ಸಂಕಷ್ಟ ಪರಿಹರಿಸಿದೆ ಎಂದರು.

ಬಿಜೆಪಿ ಸಮಯದಲ್ಲಾದ ಅಭಿವೃದ್ಧಿ, ಕಾಂಗ್ರೆಸ್ ಅಧಿಕಾರದಲ್ಲಾದ ಅಭಿವೃದ್ಧಿಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಬಿಜೆಪಿ ಅವಧಿಯಲ್ಲಿ ಹಲವು ಭ್ರಷ್ಟಾಚಾರಗಳು ನಡೆದಿದ್ದವು. ನನ್ನ ಕ್ಷೇತ್ರದ ಅಭಿವೃದ್ಧಿ ಮತದಾರರಿಗೆ ತಿಳಿದಿದೆ. ವಿಪಕ್ಷಗಳ ಆರೋಗ್ಯಕರ ಟೀಕೆಗಳನ್ನು ಸ್ವಾಗತಿಸುತ್ತೇನೆ. ಅನಾವಶ್ಯಕ ಟೀಕೆಗಳಿಗೆ ಉತ್ತರಿಸುವುದಿಲ್ಲ ಎಂದು ತಿಳಿಸಿದರು.

ಕೊಪ್ಪದಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಜಯಪುರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಶೃಂಗೇರಿಯ ನೂರು ಹಾಸಿಗೆಗಳ ಆಸ್ಪತ್ರೆಯ ಶಂಕುಸ್ಥಾಪನೆ ಜು.7ರಂದು ಉದ್ಘಾಟನೆಯಾಗಬೇಕಿತ್ತು. ಜುಲೈನಲ್ಲಿ ಅತಿಯಾದ ಮಳೆಯ ಕಾರಣದಿಂದ ಜಿಲ್ಲಾಧಿಕಾರಿಗಳು ರೆಡ್ ಅಲರ್ಟ್ ಘೋಷಿಸಿದ್ದ ಕಾರಣ ಈ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದರು.

ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್.ರವೀಂದ್ರ, ಮುಖಂಡರಾದ ಎಚ್.ಎಂ.ಸತೀಶ್, ಎಚ್.ಎಸ್.ಇನೇಶ್, ಕೆ.ಟಿ.ಮಿತ್ರ, ಅನ್ನಪೂರ್ಣಾ ನರೇಶ್, ಓಣಿತೋಟ ರತ್ನಾಕರ್, ಸಂದೇಶ್, ವಿಜಯ್‌ಕುಮಾರ್, ಸತೀಶ್ ಪೂಜಾರಿ, ಜೇಸುದಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net