ಛಲವಾದಿಗೆ ಬಿರಿಯಾನಿ ಸಂಕಷ್ಟ: ಶೈಕ್ಷಣಿಕ ಉದ್ದೇಶದ ಭೂಮಿ ದುರ್ಬಳಕೆ ಆರೋಪ | ಕಾಂಗ್ರೆಸ್ ದೂರು

ರಸಅ
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಹೊಸಕೋಟೆಯಲ್ಲಿ ಶೈಕ್ಷಣಿಕ ಉದ್ದೇಶಕ್ಕೆ ಪಡೆದ ನಿವೇಶನದಲ್ಲಿ ಧಮ್ ಬಿರಿಯಾನಿ ಕೇಂದ್ರ ನಡೆಸಲು ಅವಕಾಶ ನೀಡಿರುವ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪರಿಷತ್ ಸದಸ್ಯತ್ವವನ್ನೇ ರದ್ದುಗೊಳಿಸಿ ಎಂದು ಕಾಂಗ್ರೆಸ್ ನಿಯೋಗ ರಾಜ್ಯಪಾಲರನ್ನು ಒತ್ತಾಯಿಸಿದೆ.

ವಿಧಾನಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹ್ಮದ್ ನೇತೃತ್ವದಲ್ಲಿ ಪರಿಷತ್ ಸದಸ್ಯರು ಮಂಗಳವಾರ ರಾಜ್ಯಪಾಲ ಥಾವರಚಂದ್ ಗೆಹಲೋತ್ ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಭಾರತ ನ್ಯಾಯ ಸಂಹಿತೆ 316, 318 ಸೆಕ್ಷನ್ ಅಡಿ ಮೋಸ ಹಾಗೂ ನಂಬಿಕೆದ್ರೋಹ ಮಾಡಿರುವ ಕಾರಣಕ್ಕೆ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿರುವ ಕೈ ನಾಯಕರು, ನಾರಾಯಣಸ್ವಾಮಿ ಪಡೆದಿರುವ ನಿವೇಶನದಲ್ಲಿ ಧಮ್ ಬಿರಿಯಾನಿ ಹೋಟೆಲ್ ಇದ್ದು ಯಾವ್ಯಾವ ಬಿಜೆಪಿ ನಾಯಕರಿಗೆ ತಿನ್ನಿಸಿದ್ದಾರೋ ಗೊತ್ತಿಲ್ಲ. ಬಿಜೆಪಿಯವರು ದೇಶಕ್ಕೆಲ್ಲಾ ನೀತಿಪಾಠ ಮಾಡುತ್ತಾರೆ. ಸತ್ಯಹರಿಶ್ಚಂದ್ರರಂತೆ ನಡೆದುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಸಲೀಂ ಅಹ್ಮದ್, ಶೈಕ್ಷಣಿಕ ಉದ್ದೇಶಕ್ಕೆ ಪಡೆದ ನಿವೇಶನದಲ್ಲಿ ಧಮ್ ಬಿರಿಯಾನಿ ಹೋಟೆಲ್ ನಡೆಯುತ್ತಿದೆ. ಈ ವಿಚಾರವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದೇವೆ. ಅವರು ಅಧಿಕಾರಿಗಳನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ. ಇದರ ಬಗ್ಗೆ ಲೋಕಾಯುಕ್ತಕ್ಕೂ ಮನವಿ ಸಲ್ಲಿಸಿದ್ದೇವೆ. ರಾಜ್ಯಪಾಲರು ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಿದರು. ಇದರ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದಾಗ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಪರಿಷತ್ ಸದಸ್ಯ ಸುದಾಮ್ ದಾಸ್ ಮಾತನಾಡಿ, ಸಿಎ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದ್ದರೆ ಮರಳಿ ಪಡೆಯಬೇಕು ಎಂದು 2023 ಅಕ್ಟೋಬರ್​ನಲ್ಲಿ ಹೈಕೋರ್ಟ್ ತೀರ್ಪು ನೀಡಿತ್ತು. ನಾರಾಯಣಸ್ವಾಮಿ ಅವರ ಅಕ್ರಮಗಳು ಒಂದೊಂದಾಗಿ ಹೊರಗೆ ಬರುತ್ತಿವೆ. ಗಾಜಿನ ಮನೆಯಲ್ಲಿ ಕುಳಿತು ಕಲ್ಲೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಕುಟುಕಿದರು.

ಎಂಎಲ್​ಸಿ ವಸಂತ ಕುಮಾರ್ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರ ಮಗ ರಾಹುಲ್ ಖರ್ಗೆ ಅವರ ಸಿದ್ಧಾರ್ಥ ವಿಹಾರ ಸಂಸ್ಥೆಗೆ ಏರೋಸ್ಪೇಸ್ ಪಾರ್ಕ್ ನಲ್ಲಿ ಸಿಎ ನಿವೇಶನ ನೀಡಿರುವುದು ಕಾನೂನಾತ್ಮಕವಾಗಿದೆ. ನಾರಾಯಣಸ್ವಾಮಿ ದೆಹಲಿ ನಾಯಕರನ್ನು ತೃಪ್ತಿ ಪಡಿಸಲು ಜನರಿಗೆ ಇದರ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯ್ ಮುಳಗುಂದ, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ದಿನೇಶ್ ಗೂಳಿಗೌಡ, ಜಗದೇವ್ ಗುತ್ತೆದಾರ್, ತಿಪ್ಪಣ್ಣ ಕಮಕನೂರು ಇನ್ನಿತರರು ಉಪಸ್ಥಿತರಿದ್ದರು.

ಇಷ್ಟು ವರ್ಷ ಏನು ಮಾಡುತ್ತಿದ್ದಿರಿ?:

ಬೆಂಗಳೂರು: ಇತ್ತೀಚೆಗೆ ರಾಜಭವನ ಕೇಂದ್ರಿತ ಚಟುವಟಿಕೆಗಳು ಬಿರುಸುಗೊಂಡಿದ್ದು, ರಾಜ್ಯಪಾಲರ ಅಭಿಪ್ರಾಯ, ನಡವಳಿಕೆ ಗಮನ ಸೆಳೆಯುತ್ತಿದೆ. ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಡಬೇಕೆಂದು ಸಚಿವರು, ಶಾಸಕರ ನಿಯೋಗ ರಾಜಭವನಕ್ಕೆ ತೆರಳಿದಾಗ ಆತಿಥ್ಯ ನೀಡಿ ಅಚ್ಚರಿ ಅಭಿಪ್ರಾಯ ವ್ಯಕ್ತಪಡಿಸಿ ಕಳುಹಿಸಿದ್ದ ರಾಜ್ಯಪಾಲರು ಮಂಗಳವಾರ ಪರಿಷತ್ ಸದಸ್ಯರ ನಿಯೋಗದೊಂದಿಗೂ ಅದೇ ರೀತಿ ನಡೆದುಕೊಂಡಿದ್ದಾರೆ.

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ದೂರು ಕೊಡಲು ಹೋಗಿದ್ದ ಕೈ ನಾಯಕರು, ಹಳೇ ವಿಚಾರ ಕೆದಕಿದ್ದಾರೆ. ಪ್ರತಿಪಕ್ಷ ನಾಯಕರ ಪ್ರಕರಣದಲ್ಲಿ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟಿಲ್ಲ ಎಂದು ಪ್ರಸ್ತಾಪಿಸಿದ್ದಾರೆ. ಈ ವೇಳೆ, ತಮ್ಮ ನಿಲುವು ಸಮರ್ಥಿಸಿಕೊಂಡ ರಾಜ್ಯಪಾಲ ಥಾವರಚಂದ್ ಗೆಹಲೋತ್ ನಡೆಯನ್ನು ಕಂಡು ಪರಿಷತ್ ಸದಸ್ಯರು ಅವಕ್ಕಾಗಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಪ್ರಕರಣ ಸಂಬಂಧ ಪ್ರಶ್ನೆಗಳನ್ನು ಕೇಳಿ, ಕಳೆದ 2002-05ರಲ್ಲಿ ನಿಯಮ ಉಲ್ಲಂಘಿಸಿ ನಿವೇಶನ ಪಡೆದಿದ್ದಾರೆ ಎನ್ನುತ್ತೀರಿ. ಹಾಗಾದರೆ ಇಷ್ಟು ವರ್ಷ ಏನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದಾಗ ಕೈ ನಾಯಕರು ತಡಬಡಾಯಿಸಿದ್ದಾರೆ. ಇಷ್ಟು ವರ್ಷಗಳಾದರೂ ಏಕೆ ದೂರು ಕೊಡಲಿಲ್ಲ, ಈಗ ಏಕೆ ಕ್ರಮಕೈಗೊಳ್ಳಿ ಅನ್ನುತ್ತಿದ್ದೀರಿ ಎಂದು ಕೇಳಿದಾಗ, ಆಗಿನ ದಾಖಲೆಗಳು ನಮಗೆ ಈಗ ಸಿಕ್ಕಿವೆ ಎಂದು ಕೈ ನಾಯಕರು ಸಮರ್ಥಿಸಿಕೊಂಡಿದ್ದಾರೆ.

ಆರೋಪ ಪಟ್ಟಿ

1. 2004ರ ಮೇ 26ರಂದು ಶಾಲೆ ನಿರ್ವಿುಸಲು ಛಲವಾದಿ ನಾರಾಯಣಸ್ವಾಮಿ ಅಧ್ಯಕ್ಷತೆಯ ಶಿಕ್ಷಣ ಸಂಸ್ಥೆಗೆ ಸಿಎ ನಿವೇಶನ ಹಂಚಿಕೆ.

2. ಅಧಿಕಾರ ದುರುಪಯೋಗ ಮಾಡಿಕೊಂಡು 25,841 ಅಡಿ ನಿವೇಶನವನ್ನು ಅಕ್ರಮವಾಗಿ ಪಡೆಯಲಾಗಿದೆ.

3. 2004ರ ಜುಲೈ 25ರಂದು ನಿವೇಶನ ಬಾಬ್ತು 12,27,479 ರೂಪಾಯಿ ಹಣ ಪಾವತಿ.

4. ಮುಂದಿನ 5 ವರ್ಷಗಳಲ್ಲಿ ಶಾಲಾ ಕಟ್ಟಡ ನಿರ್ಮಾಣ ಪೂರ್ಣಗೊಳಿಸದಿದ್ದರೆ ನಿವೇಶನ ವಾಪಸ್ ಎಂದು ಕೆಎಚ್​ಬಿ ಷರತ್ತು.

5. 2006 ಜುಲೈ 28ರಂದು ಕ್ರಯಪತ್ರ ಆಗುವಾಗ ನಿವೇಶನ ಪಡೆದ ಉದ್ದೇಶ ಟೆಲಿ ಕಮ್ಯುನಿಕೇಶನ್ ಮತ್ತು ಪಬ್ಲಿಕ್ ಸರ್ವೀಸ್ ಎಂದು ಬದಲಾವಣೆ.

6. ನಿವೇಶನ ಪಡೆದ ಟ್ರಸ್ಟ್ ಡೀಡ್, ಬೈಲಾ, ಮೂರು ವರ್ಷದ ಲೆಕ್ಕ ಪರಿಶೋಧನೆ ವರದಿ ಕೊಟ್ಟಿಲ್ಲ.

ನಾನು ಛಲವಾದಿ, ನನ್ನನ್ನು ಕೆಣಕಬೇಡಿ

ಬೆಂಗಳೂರು: ‘ನಾನು ಛಲವಾದಿ ನನ್ನ ಕೆಣಕಬೇಡಿ. ನನ್ನ ವಿರುದ್ಧ ಏನೇ ದೂರು ಕೊಡಿ ಹೆದರುವುದಿಲ್ಲ’ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್​ಗೆ ಸವಾಲು ಹಾಕಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್​ನವರು ನನ್ನ ವಿರುದ್ಧ ದೂರು ಕೊಡಲು ಬಹಳ ಕಷ್ಟ ಪಟ್ಟಿದ್ದಾರೆ. ಸುಮ್ಮನೆ ಕೂತು ಬೊಜ್ಜು ಬಂದಿತ್ತು. ನಾನು ಕೆಲಸ ಕೊಟ್ಟಮೇಲೆ ಎಕ್ಸೈಜ್ ಮಾಡುತ್ತಿದ್ದಾರೆ. ಎದ್ದಿರೋ ಮಾತು ಬಿದ್ದಿರಲಿ ಎಂದು ದೂರು ಕೊಟ್ಟಿದ್ದಾರೆ. ನಿಮ್ಮ ತಪ್ಪು ಜನರ ಮುಂದೆ ಇಟ್ಟಿದ್ದೇನೆ. ಅದಕ್ಕೆ ಕಾಂಗ್ರೆಸ್ ಉತ್ತರ ಕೊಟ್ಟಿಲ್ಲ ಎಂದು ವ್ಯಂಗ್ಯವಾಡಿದರು. ಆದರ್ಶ ಸಾಮಾಜಿಕ ಮತ್ತು ಶೈಕ್ಷಣಿಕ ಟ್ರಸ್ಟ್​ಗೆ ನಾನು ರಾಜೀನಾಮೆ ಕೊಟ್ಟು 10 ವರ್ಷವಾಗಿದೆ. ಈ ಟ್ರಸ್ಟ್​ನವರು ಧಮ್ ಬಿರಿಯಾನಿ ಆದರೂ ಮಾಡಿಕೊಳ್ಳಲಿ, ಏನಾದರೂ ಮಾಡಿಕೊಳ್ಳಲಿ. ನಾನು ಅದರಲ್ಲಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net