ವಿಜಯವಾಣಿ ಸುದ್ದಿಜಾಲ ಕೋಲಾರ
ಚೆನ್ನೆöÊಕಾರಿಡಾರ್ ಗುತ್ತಿಗೆದಾರರು ಅಕ್ರಮವಾಗಿ ಜಿಲ್ಲೆಯ ಮಾಲೂರು ತಾಲ್ಲೂಕಿನ ಚೆನ್ನಿಗರಾಯಪುರದ ಸಮೀಪ ಅಕ್ರಮವಾಗಿ ೨೦ ಎಕರೆ ಗೋಮಾಳ ಜಮೀನಿನಲ್ಲಿ ಸುಮಾರು ೪೦ ಅಡಿ ಆಳದಷ್ಟು ಮಣ್ಣು ತೆಗೆಯುವ ಮೂಲಕ ಈ ಭಾಗದ ಪರಿಸರ ನಾಶಕ್ಕೆ ಕಾರಣವಾಗಿದ್ದರೂ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಮೌನವಹಿಸಿದೆ ಎಂದು ಬೆಳಕುಪರಿವಾರದ ಅಧ್ಯಕ್ಷ ಮಂಜುನಾಥ್ ಮತ್ತು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಕ್ರಮವಾಗಿ ಮಣ್ಣು ತೆಗೆದಿರುವ ಚೆನ್ನಿಗರಾಯಪುರ ಜಮೀನಿಗೆ ಗ್ರಾಮಸ್ಥರೊಂದಿಗೆ ಭೇಟಿ ನೀಡಿ ಮಾತನಾಡಿದ ಮಂಜುನಾಥ್ ಸರ್ಕಾರಿ ಸರ್ವೆ ನಂ.೬ ರಲ್ಲಿ ದಿಲೀಪ್ ಬಿಲ್ರ‍್ಸ್ ಲಿಮಿಟೆಡ್ ಎಂಬುವವರು ಈ ಕೃತ್ಯ ಎಸಗಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅನುಮತಿಯೂ ಪಡೆಯದೇ ಯಾವುದೇ ರಾಯಲ್ಟಿ ಪಾವತಿಸದೇ ೨೦ ಎಕರೆ ಪ್ರದೇಶದಲ್ಲಿ ೪೦ ಅಡಿ ಆಳದ ಮಣ್ಣನ್ನು ಅವೈಜ್ಞಾನಿಕವಾಗಿ ತೆಗೆದಿದ್ದು, ಸರ್ಕಾರಕ್ಕೆ ಕೋಟ್ಯಾಂತರ ರೂ ವಂಚಿಸಲಾಗಿದೆ ಎಂದು ದೂರಿದ್ದಾರೆ.
ಮಾಲೂರು ತಾಹಸೀಲ್ದಾರ್, ಕಸಬಾ ಕಂದಾಯ ನಿರೀಕ್ಷಕರು ನೀಡಿರುವ ಸುಳ್ಳು ವರದಿ ಆಧರಿಸಿ ಮಣ್ಣು ತೆಗೆಯಲು ಅನುಮತಿ ನೀಡಿರುವುದಾಗಿ ತಿಳಿಸಿದ್ದು, ಇದರ ಹಿಂದೆ ಯಾವುದೋ ಒತ್ತಡ ಹಾಗೂ ಕಾಣದ ಕೈಗಳು ಕೆಲಸ ಮಾಡಿವೆ ಎಂದು ಆರೋಪಿಸಿದ್ದಾರೆ.
ಕಂದಾಯ ನಿರೀಕ್ಷಕರು ನೀಡಿರುವ ವರದಿಯಲ್ಲಿ ಈ ಭಾಗದ ರೈತರು ಸದರಿ ಜಮೀನಿನ ಪಕ್ಕದ ಅನ್ನದಾತರು ಮಣ್ಣು ತೆಗೆಯಲು ಒಪ್ಪಿಗೆ ನೀಡಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದು, ಇದನ್ನು ಆದರಿಸಿಯೇ ತಹಸೀಲ್ದಾರ್ ಮಣ್ಣು ತೆಗೆಯಲು ಅನುಮತಿ ನೀಡಿರುವುದಾಗಿ ಆದೇಶದಲ್ಲಿ ತಿಳಿಸಿರುವುದರ ಬಗ್ಗೆ ಗ್ರಾಮಸ್ಥರು ಕಿಡಿಕಾರಿದ್ದಾರೆ.
ಮಣ್ಣು ತೆಗೆಯಲು ನಿಯಮಾನುಸಾರ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅನುಮತಿ ಪಡೆಯಬೇಕು ಆದರೆ ತಹಸೀಲ್ದಾರ್ ಮತ್ತು ಆರ್‌ಐಗೆ ಈ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿರುವ ಅವರು, ಇಲ್ಲಿ ಅವೈಜ್ಞಾನಿಕವಾಗಿ ೪೦ ಅಡಿ ಮಣ್ಣು ತೆಗೆದಿರುವುದರಿಂದ ಮಳೆ ಬಂದು ನೀರು ತುಂಬಿದರೆ ಪಶುಗಳು,ಮಕ್ಕಳು ಸೇರಿದಂತೆ ಅನೇಕ ಸಾವುನೋವುಗಳಿಗೆ ಕಾರಣವಾಗುವ ಆತಂಕ ಈ ಭಾಗದ ಜನರನ್ನು ಕಾಡುತ್ತಿದೆ ಎಂದು ತಿಳಿಸಿದ್ದಾರೆ.
ಅಕ್ರಮವಾಗಿ ಮಣ್ಣು ತೆಗೆದಿರುವ ಪ್ರದೇಶಕ್ಕೆ ಭೇಟಿ ನೀಡಿದ್ದ ಬೆಳಕು ಪರಿವಾರದ ಸದಸ್ಯರಾದ ಶಿವಕುಮಾರಸಿಂಗ್, ರವಿ, ಮುತ್ತಪ್ಪಗೌಡ, ವೆಂಕಟೇಶ್, ಚೆನ್ನಿಗರಾಯಪುರ ಮತ್ತು ಸುತ್ತಮುತ್ತಲ ಗ್ರಾಮಸ್ಥರಾದ ಮೀಸೆ ಮುನಿಯಪ್ಪ, ದೇವರಾಜ್, ಚಿನ್ನಪ್ಪ, ಮುನಿನರಸಿಂಹಯ್ಯ ಮತ್ತಿತರರು ಕೂಡಲೇ ಮಣ್ಣು ಸಾಗಾಣೆ ನಿಲ್ಲಿಸಲು ಆಗ್ರಹಿಸಿದರು.
ಚಿತ್ರ ೦೩ ಕೆ.ಎಲ್.ಆರ್. ೦೩ : ಮಾಲೂರು ತಾಲ್ಲೂಕಿನ ಚೆನ್ನಿಗರಾಯಪುರದ ಬಳಿ ಚೆನ್ನೆöÊ ಕಾರಿಡಾರ್‌ಗಾಗಿ ಗೋಮಾಳ ಜಮೀನಿನಲ್ಲಿ ಕಾನೂನುಬಾಹಿರವಾಗಿ ಮಣ್ಣು ತೆಗೆದಿರುವುದರ ವಿರುದ್ದ ಬೆಳಕು ಪರಿವಾರದ ಸದಸ್ಯರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.