ಚುನಾವಣೆ ರಾಜಕಾರಣಕ್ಕೆ ಗುಡ್‌ಬೈ

MLK SABHE
Published on

ವಿಜಯವಾಣಿ ಸುದ್ದಿಜಾಲ

ಮೊಳಕಾಲ್ಮೂರು: ರಾಜಕೀಯ ಜೀವನದಲ್ಲಿ ಇದು ನನ್ನ ಕೊನೆ ಚುನಾವಣೆ. ಮತ್ತೊಮ್ಮೆ ಸ್ಪರ್ಧೆ ಮಾಡುವುದಿಲ್ಲ. ಏನಿದ್ದರೂ ಕ್ಷೇತ್ರದ ಅಭಿವೃದ್ಧಿ ಕಡೆ ನನ್ನ ಗಮನ. ಎಲ್ಲ ಪಕ್ಷದವರು ಸಹಕಾರ ಕೊಟ್ಟರೇ ಮೊಳಕಾಲ್ಮೂರು ಸಮಗ್ರ ಪ್ರಗತಿ ಕಾಣಲಿದೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.
ಪಟ್ಟಣದ ಅಭಿವೃದ್ಧಿ ಕಾರ್ಯಗಳ ಸಾಧಕ-ಬಾಧಕ ಕುರಿತು ತಾಲೂಕು ಆಡಳಿತ ಸೌಧದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾರ್ವಜನಿಕವಾಗಿ ಯಾವುದೇ ಕೆಲಸಗಳಾಗಲಿ ಶಾಶ್ವತವಾಗಿ ಸದ್ಭಳಕೆ ಆಗಬೇಕು. ಈ ದಿಸೆಯಲ್ಲಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಈಗಾಗಲೇ ಮಂಜೂರಾಗಿರುವ ಕೆಲಸಗಳ ಕುರಿತು ನನ್ನ ಆಕ್ಷೇಪಣೆ ಇಲ್ಲ. ಆದರೆ, ಪೂರ್ವಪರ ಚಿಂತನೆ ಮಾಡದೆ ಕೈಗೆತ್ತಿಕೊಂಡಿರುವ ಕಾಮಗಾರಿಗಳು ಉಪಯೋಗವಿಲ್ಲ ಎಂಬುದು ನನ್ನ ಅನಿಸಿಕೆ. ಇದಕ್ಕೆ ರಾಜಕೀಯ ಬಣ್ಣ ಕಟ್ಟುವುದು ಬೇಡ ಎಂದು ತಿಳೀಸಿದರು.
25 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಕೊನೇ ಘಟ್ಟ ಇದು. ನಮ್ಮದೇ ಸರ್ಕಾರ ಇದೆ. ಅಧಿಕಾರಿಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಜನಪರ ಕೆಲಸ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇನೆ. ಅಧಿಕಾರಿಗಳು ಹೆಚ್ಚು ಕಾಳಜಿ, ಶ್ರಮವಹಿಸಬೇಕು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಶ್ರೀನಿವಾಸ ನಾಯಕ ಬಡಾವಣೆಯಲ್ಲಿರುವ ಹಳೇ ಹೊಂಡದ ಜಾಗದಲ್ಲಿ ಸಂತೇ ಮಾರುಕಟ್ಟೆ ಪ್ರಾಂಗಣದ ಅಭಿವೃದ್ಧಿಗೆ ಸೂಕ್ತ ಕ್ರಮಕೈಗೊಳ್ಳಬೇಕು. ಪಟ್ಟಣದಲ್ಲಿ ರಸ್ತೆ ವಿಸ್ತರಣೆ ಕಾರ್ಯ ತ್ವರಿತವಾಗಿ ಪೂರ್ಣಗೊಳ್ಳಬೇಕು ಎಂದು ಹೇಳಿದರು.
ಕೆಲ ಆಯ್ದ ವೃತ್ತಗಳಲ್ಲಿ ವಾಲ್ಮಿಕಿ, ಅಂಬೇಡ್ಕರ್, ಬಸವಣ್ಣ, ಮದಕರಿ ನಾಯಕ ಪುತ್ಥಳಿ ಪ್ರತಿಷ್ಠಾಪನೆ ಮಾಡುವ ವಿಷಯ ಚರ್ಚೆಗೆ ಬರುತ್ತಿದ್ದಂತೆ ಈ ಸಂಬಂಧ ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಬಸ್ ನಿಲ್ದಾಣವನ್ನು ಬೇರೆಡೆ ಸ್ಥಳಾಂತರ ಮಾಡುವ ಯೋಚನೆ ಇತ್ತು. ಅದಕ್ಕೆ ಸಾರ್ವಜನಿಕವಾಗಿ ಅಪಸ್ವರ ಇರುವ ಕಾರಣ ಕೈಗೆತ್ತಿಕೊಂಡಿರುವ ಜಾಗದಲ್ಲೇ ಕಾಮಗಾರಿ ಆರಂಭಿಸಿ. ರಾಯಾಪುರ ಸಮೀಪ ರೇಷ್ಮೆ ಪಾರಂನಲ್ಲಿ ಸಾರಿಗೆ ಡಿಪೋ ನಿರ್ಮಾಣ ಮುಂದಾಲೋಚನೆ ಇಲ್ಲದ್ದಾಗಿದೆ. ಇವು ನಮ್ಮೂರಿಗೆ ಬೇಕಿತ್ತಾ ಎಂದು ಪ್ರಶ್ನೀಸಿದ ಶಾಸಕರು, ಶಿಕ್ಷಣ-ಆರೋಗ್ಯ ಇತ್ಯಾದಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಅಧಿಕಾರಿಗಳಾದ ಡಾ.ರಂಗಪ್ಪ, ಲೀಲಾವತಿ, ಶ್ರೀನಿವಾಸ್, ನಾಗರಾಜ್, ಮಲ್ಲಿಕಾರ್ಜುನ, ಕಾಂಗ್ರೆಸ್ ಪಕ್ಷದ ತಾಲೂಕಾಧ್ಯಕ್ಷ ಟಿ.ಕೆ.ಕಲೀಂವುಲ್ಲಾ, ಮಾಜಿ ಅಧ್ಯಕ್ಷ ಪಟೇಲ್ ಪಾಪನಾಯಕ, ಮುಖಂಡರಾದ ಗುರುರಾಜಣ್ಣ, ಬಡೋಬನಾಯಕ, ಕೆ.ಎನ್.ಜಗದೀಶ್, ವಿಜಯ್, ನಾಗರಾಜ ಇತರರಿದ್ದರು.

ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ನಾವೆಲ್ಲರೂ ಶಾಸಕರ ಜತೆ ಕೈಜೊಡಿಸುತ್ತೇವೆ. ಚುನಾವಣೆ ಬಳಿಕ ರಾಜಕಾರಣ ಮರೆತು ಪ್ರಗತಿ ಕಾರ್ಯ ಕೈಗೊಳ್ಳುತ್ತಿರುವ ಅವರ ನಡೆಗೆ ಎಲ್ಲರ ಬೆಂಬಲ ಅಗತ್ಯ.
ಜಿ.ಪ್ರಕಾಶ್ ಪಪಂ ಮಾಜಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net