

ರಾಮನಗರ : ಸ್ಥಳೀಯ ಸಂಸ್ಥೆ ಚುನಾವಣೆಯ ಮತದಾನಕ್ಕೆ ಕ್ಷಣ ಗಣನೆ ಆರಂಭಗೊಂಡಿದ್ದು, ಕಣದಲ್ಲಿರುವ ಅಭ್ಯರ್ಥಿಗಳು ಹಂತಿಮ ಹಂತದ ಕಸರತ್ತು ನಡೆಸಲು ಕರೊನಾ ವಾರಾಂತ್ಯದ ಕರ್ಫ್ಯೂ ಅಡ್ಡಿಯಾಗಿದೆ. ಪ್ರಮುಖ ನಾಯಕರ ಪ್ರಚಾರದ ಕೊರತೆಯ ಹೊರತಾಗಿಯೂ ಅಭ್ಯರ್ಥಿಗಳು ಮತ್ತು ಅದೃಷ್ಟವನ್ನು ಪರೀಕ್ಷೆಗೆ ಒಡ್ಡಿದ್ದು, ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ.
ಉಡುಗೊರೆ ತಲುಪುತ್ತಿಲ್ಲ: ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಉಡುಗೊರೆ ನೀಡುವುದು ಸಾಮಾನ್ಯ ಎನ್ನುವಂತೆ ಆಗಿದ್ದು, ಲಾಕ್‌ಡೌನ್ ಕಾರಣದಿಂದಾಗಿ ಭಾನುವಾರ ಮತದಾರರಿಗೆ ಉಡುಗೊರೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಕೆಲವರು ಪೊಲೀಸರು ಮತ್ತು ಚುನಾವಣೆ ನೀತಿ ಸಂಹಿತೆ ಜಾರಿ ತಂಡದ ಕಣ್ಣು ತಪ್ಪಿಸಿ ಮತದಾರರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದರೂ ಇದರಿಂದ ನಿರೀಕ್ಷಿತ ಲಿತಾಂಶವೂ ದೊರೆಯುತ್ತಿಲ್ಲ. ಬೆಳಗ್ಗೆ 10 ಗಂಟೆವರೆಗೆ ದೊರೆತ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಲೂ ಸಾಧ್ಯವಾಗದೇ ಅಭ್ಯರ್ಥಿಗಳು ಲಿತಾಂಶದ ಬಗ್ಗೆ ಆತಂಕಕ್ಕೆ ಒಳಗಾಗಿದ್ದಾರೆ.
ಮೊಬೈಲ್ ಪ್ರಚಾರ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಮತದಾರರನ್ನು ಮೊಬೈಲ್ ಮೂಲಕ ಸಂಪರ್ಕ ಮಾಡುವ ಕೆಲಸವನ್ನು ಅಭ್ಯರ್ಥಿಗಳು ಮಾಡುತ್ತಿದ್ದಾರೆ. ಖುದ್ದು ಅಭ್ಯರ್ಥಿಯೇ ಕರೆ ಮಾಡಿ ತಮಗೆ ಮತ ನೀಡುವಂತೆ ಕೋರಿಕೊಳ್ಳುವ ಜತೆಗೆ ತಮ್ಮ ಬೆಂಬಲಿಗರ ಮೂಲಕವೇ ಕರೆ ಮಾಡಿಸಿ ಮತಯಾಚನೆ ಮಾಡುತ್ತಿರುವುದು ಕಂಡುಬಂದಿದೆ.
ಇಂದು ತೀವ್ರ ಕಸರತ್ತು: ಏ.27ರಂದು ಮತದಾನ ನಡೆಯಲಿದ್ದು, ಮತದಾನಕ್ಕೆ ಮುನ್ನಾ ದಿನವಾದ ಸೋಮವಾರ ಬೆಳಗ್ಗೆಯೇ ಕರ್ಯ್ೂ ಅಂತ್ಯವಾಗುವುದರಿಂದ ಉಳಿದ ಸಮಯವನ್ನು ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಬಳಕೆ ಮಾಡಿಕೊಳ್ಳಲಿದ್ದಾರೆ. ಈ ವೇಳೆ ಮತದಾರರಿಗೆ ಉಡುಗೊರೆಗಳನ್ನು ತಲುಪಿಸುವ ಸಾಧ್ಯತೆಯೂ ಇದ್ದು, ಈ ನಿಟ್ಟಿನಲ್ಲಿ ಚುನಾವಣಾಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಕರೊನಾ ನಿಯಂತ್ರಣದ ಜತೆಗೆ ಚುನಾವಣಾ ಅಕ್ರಮಕ್ಕೂ ಬ್ರೇಕ್ ಹಾಕಬೇಕಿದೆ.
ಅಂತಿಮ ಕಣದಲ್ಲಿ 236 ಮಂದಿ ಸ್ಪರ್ಧಿಗಳು : ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಗಳ ಒಟ್ಟು 62 ವಾರ್ಡ್‌ಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಒಟ್ಟು 236 ಮಂದಿ ಅಂತಿಮ ಕಣದಲ್ಲಿ ಇದ್ದಾರೆ. ಚನ್ನಪಟ್ಟಣದಲ್ಲಿ 112 ಮತ್ತು ರಾಮನಗರದಲ್ಲಿ 124 ಮಂದಿ ಸ್ಪರ್ಧಿಸಿದ್ದಾರೆ. ಮತಮಂತ್ರಗಳ ಮಸ್ಟರಿಂಗ್ ಕೇಂದ್ರಗಳನ್ನು ರಾಮನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಚನ್ನಪಟ್ಟಣದಲ್ಲಿ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತೆರೆಯಲಾಗಿದ್ದು, ಡಿ ಮಸ್ಟರಿಂಗ್ ಹಾಗೂ ಮತ ಎಣಿಕೆ ಇಲ್ಲಿಯೇ ನಡೆಯಲಿವೆ. ರಾಮನಗರದಲ್ಲಿ 76 ಮತ್ತು ಚನ್ನಪಟ್ಟಣದಲ್ಲಿ 59 ಸೇರಿ 135 ಮತ ಕೇಂದ್ರಗಳನ್ನು ತೆರೆಯಲಾಗಿದೆ. ಇನ್ನು ರಾಮನಗರದಲ್ಲಿ 38,738 ಮಂದಿ ಮಹಿಳಾ ಮತದಾರರು, 40,780 ಪುರುಷ ಮತದಾರರು ಹಾಗೂ 12 ಮಂದಿ ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 79,530 ಮಂದಿ ಹಕ್ಕು ಚಲಾವಣೆ ಮಾಡಲಿದ್ದಾರೆ. ಚನ್ನಪಟ್ಟಣದಲ್ಲಿ 28,693 ಮಂದಿ ಮಹಿಳಾ ಮತದಾರರು, 30,227 ಪುರುಷ ಮತದಾರರು ಸೇರಿದಂತೆ ಒಟ್ಟು 58,920 ಮಂದಿ ಹಕ್ಕು ಚಲಾವಣೆ ಮಾಡಲಿದ್ದಾರೆ.
ಸೋಂಕಿತರಿಗೂ ಅವಕಾಶ : ಕರೊನಾ ಸೋಂಕಿತರಿಗೂ ಮತದಾನ ಮಾಡುವ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿಯೂ ಆದ ಚುನಾವಣಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಮತದಾನದ ಕೊನೆಯ ಒಂದು ಗಂಟೆ ಅವಧಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸೋಂಕಿತರನ್ನು ಆಂಬುಲೆನ್ಸ್ ಮೂಲಕ ಮತ ಕೇಂದ್ರಗಳಿಗೆ ಕರೆತರುವ ಕೆಲಸವನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ.