ಚೀನಾದಲ್ಲಿ ದೈನಿಕ 6 ಲಕ್ಷ ಕೇಸ್?; ಆರೋಗ್ಯ ಆಯೋಗ ಎಚ್ಚರಿಕೆ, ಪ್ರಯಾಣ ನಿರ್ಬಂಧಕ್ಕೆ ಶಿಫಾರಸು

china
ಹೊಸ ಕರೊನಾ ಕೇಸ್ ಪತ್ತೆಯಾದ ಹಿನ್ನೆಲೆಯಲ್ಲಿ ಕನ್ಯಾಕುಮಾರಿ ಜಿಲ್ಲಾಧಿಕಾರಿ ಕಚೇರಿ ಸೀಲ್ ಮಾಡಿ, ಸೋಂಕು ನಿವಾರಕ ಸಿಂಪಡಣೆ ಮಾಡುತ್ತಿರುವ ಸಿಬ್ಬಂದಿ.
Published on

ಬೀಜಿಂಗ್: ಮೊದಲ ಬಾರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡ ಚೀನಾದಲ್ಲಿ ಸಾಂಕ್ರಾಮಿಕತೆ ಉಲ್ಬಣಿಸುತ್ತಲೇ ಇದ್ದು, ಮುಂದಿನ ದಿನಗಳಲ್ಲಿ ಅಬ್ಬರ ಜಾಸ್ತಿಯಾಗಿ ದೈನಿಕ ಆರು ಲಕ್ಷಕ್ಕೂ ಅಧಿಕ ಕೇಸ್​ಗಳು ಪತ್ತೆಯಾಗಬಹುದು ಎಂದು ಅಧ್ಯಯನವೊಂದು ಎಚ್ಚರಿಸಿದೆ. ವುಹಾನ್​ನಲ್ಲಿ ಮೊದಲು ಪತ್ತೆಯಾದ ವೈರಸ್ ನಂತರ ಜಗತ್ತಿಗೆಲ್ಲ ಮಹಾಮಾರಿಯಾಗಿ ಹರಡಿ ಬದುಕುಗಳನ್ನು ಮೂರಾಬಟ್ಟೆ ಮಾಡಿತ್ತು. ಚೀನಾದಲ್ಲಿ ಇದುವರೆಗೆ 98,631 ಪ್ರಕರಣ ದೃಢಪಟ್ಟು 4,636 ಜನರು ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ.

ಒಂದು ವೇಳೆ, ಫ್ರಾನ್ಸ್ ಮತ್ತು ಬ್ರಿಟನ್ ಮಾಡಿದ ರೀತಿಯಲ್ಲಿ ಪ್ರಯಾಣ ನಿರ್ಬಂಧಗಳನ್ನು ಸಡಿಲಿಸಿದರೆ ದೇಶದಲ್ಲಿ ಸೋಂಕು ಮಾರಕ ರೀತಿಯಲ್ಲಿ ಸ್ಪೋಟಿಸಿ ದಿನಕ್ಕೆ 6,30,000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಬಹುದು ಎಂದು ಪೀಕಿಂಗ್ ಯುನಿವರ್ಸಿಟಿಯ ಗಣಿತ ತಜ್ಞರು ಎಚ್ಚರಿಸಿದ್ದಾರೆ. ಸೋಂಕನ್ನು ನಿಮೂಲ ಮಾಡಲೆಂದು (ಝೀರೋ-ಟಾಲರೆನ್ಸ್) ಬಹುತೇಕ ಇಡೀ ಜಗತ್ತಿನ ಸಂಪರ್ಕ ಕಡಿದುಕೊಂಡಿದ್ದ ಚೀನಾ ಮತ್ತೆ ಇತರ ದೇಶಗಳಿಗೆ ಮುಕ್ತಗೊಳಿಸಿದರೆ ಮಹಾಮಾರಿ ಈ ಪರಿಯಾಗಿ ಸ್ಪೋಟಗೊಳ್ಳಬಹುದೆಂಬುದು ತಜ್ಞರ ಎಚ್ಚರಿಕೆಯಾಗಿದೆ. ಪ್ರಯಾಣದ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ತೆಗೆದು ಹಾಕುವುದು ಮಾರಕವಾಗಿ ಪರಿಣಮಿಸುವ ಸಾಧ್ಯತೆಯಿದೆ. ಸೋಂಕಿನ ಗಹನತೆಯ ಅಂದಾಜು

ಆಘಾತಕಾರಿ ಸ್ಪೋಟದ ನೈಜ ಸಾಧ್ಯತೆಯನ್ನು ಅನಾವರಣ ಮಾಡಿದೆ. ಹಾಗೇನಾದರೂ ಸಂಭವಿಸಿದಲ್ಲಿ ದೇಶದ ವೈದ್ಯಕೀಯ ವ್ಯವಸ್ಥೆ ಮೇಲೆ ಅಸಹನೀಯ ಹೊರೆ ಬೀಳಲಿದೆ ಎಂದು ಅಧ್ಯಯನ ಎಚ್ಚರಿಸಿದೆ. ಚೀನಾದಲ್ಲಿ ಶನಿವಾರ 23 ಹೊಸ ಕೇಸ್​ಗಳು ದೃಢಪಟ್ಟಿವೆ. ಅವುಗಳಲ್ಲಿ 20 ಪ್ರಕರಣಗಳು ವಿದೇಶಗಳಿಂದ ಬಂದವರಲ್ಲಿ ಕಂಡು ಬಂದಿದ್ದಾಗಿವೆ. ಚೈನೀಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್​ನ ವಾರ ಪತ್ರಿಕೆಯಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ.

ವಿಮಾನ ಸಂಚಾರ ಅನುಮಾನ: ಡಿಸೆಂಬರ್ 15ರಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರ ಪುನರಾರಂಭಿಸುವ ಭಾರತದ ಯೋಜನೆ ಮೇಲೆ ಒಮಿಕ್ರಾನ್ ಪ್ರಭೇದ ಕರಿನೆರಳು ಬೀಳುವ ಸಂಭವವಿದೆ. ನವೆಂಬರ್ 26ರಂದು ಕೈಗೊಂಡ ಈ ನಿರ್ಣಯವನ್ನು ಪುನರ್​ಪರಿಶೀಲಿಸುವ ಸಾಧ್ಯತೆಯಿದೆ.

ಕರೊನಾ ವೈರಸ್​ನ ಹೊಸ ಪ್ರಭೇದ ಒಮಿಕ್ರಾನ್​ನ ಸ್ಪೈಕ್ ಪ್ರೊಟೀನ್​ನಲ್ಲಿ 30ಕ್ಕೂ ಹೆಚ್ಚು ರೂಪಾಂತರಿಗಳಿದ್ದು ಲಸಿಕೆಯ ಪರಿಣಾಮವನ್ನು ತಗ್ಗಿಸುವ ಸಾಧ್ಯತೆ ಇದೆ.

| ರಣದೀಪ್ ಗುಲೇರಿಯಾ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಏಮ್ಸ್​) ಮುಖ್ಯಸ್ಥ

ಭಾರತದಲ್ಲಿ ಲಕ್ಷಕ್ಕಿಳಿದ ಸಕ್ರಿಯ ಕೇಸ್: ಭಾರತದಲ್ಲಿ ಕೋವಿಡ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,05,691ಕ್ಕೆ ಇಳಿದಿದೆ. ಸಕ್ರಿಯ ಕೇಸ್ ಒಟ್ಟು ಸೋಂಕಿತರ ಶೇಕಡ 0.31 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಭಾನುವಾರ ಬೆಳಿಗ್ಗೆ ಅಂತ್ಯವಾದ ಒಂದು ದಿನದ ಅವಧಿಯಲ್ಲಿ ದೇಶದಾದ್ಯಂತ 8,774 ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇದರೊಂದಿಗೆ ಸೋಂಕಿನ ಒಟ್ಟು ಸಂಖ್ಯೆ 3,45,72,523ಕ್ಕೆ ಏರಿದೆ. ಒಂದು ದಿನದಲ್ಲಿ 621 ಮಂದಿ ಮೃತಪಟ್ಟಿದ್ದು ಮರಣ ಹೊಂದಿದವರ ಒಟ್ಟು ಸಂಖ್ಯೆ 4,68,554ಕ್ಕೆ ತಲುಪಿದೆ.

ಕೊವ್ಯಾಕ್ಸ್ ಅನುಮೋದನೆ ವಿಳಂಬ: ಅಮೆರಿಕದ ಬಯೋಟೆಕ್ನಾಲಜಿ ಕಂಪನಿ ನೊವಾವ್ಯಾಕ್ಸ್​ನ ಕೊವೊವ್ಯಾಕ್ಸ್ ಲಸಿಕೆಗೆ ಭಾರತ ಅನುಮೋದನೆ ಸಿಗಲು ವಿಳಂಬವಾಗು ತ್ತಿದೆ. ಭಾರತೀಯ ಔಷಧಗಳ ಮಹಾ ನಿಯಂತ್ರಕರು (ಡಿಸಿಜಿಐ) ಇನ್ನಷ್ಟು ದತ್ತಾಂಶಗಳ ಮಾಹಿತಿ ಕೋರಿರುವುದೇ ಇದಕ್ಕೆ ಕಾರಣ ವಾಗಿದೆ ಎಂದು ಮೂಲಗಳು ಭಾನುವಾರ ತಿಳಿಸಿವೆ. ಆಗಸ್ಟ್​ನಲ್ಲೇ ನೊವಾವ್ಯಾಕ್ಸ್ ಅನುಮೋದನೆ ಕೋರಿ ಅರ್ಜಿ ಸಲ್ಲಿಸಿತ್ತು. ಆದರೆ, ಡಿಸಿಜಿಐನ ತಜ್ಞರ ಸಮಿತಿ ಹೆಚ್ಚುವರಿ ಡೇಟಾ ಕೇಳಿರುವುದರಿಂದ ಹಸಿರು ನಿಶಾನೆ ದೊರೆಯುವುದು ತಡವಾಗಿದೆ. ಡಿಸಿಜಿಐ ಇದು ವರೆಗೆ 4 ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಕೋವಿಶೀಲ್ಡ್, ಕೊವ್ಯಾಕ್ಸಿನ್, ಸ್ಪುಟ್ನಿಕ್, ಮಾಡರ್ನಾ ಆ 4 ವ್ಯಾಕ್ಸಿನ್​ಗಳು.

4 ದೇಶಗಳಲ್ಲಿ ಒಮಿಕ್ರಾನ್ ಪತ್ತೆ: ಆಸ್ಟ್ರೇಲಿಯಾ, ಬ್ರಿಟನ್, ಜರ್ಮನಿ ಮತ್ತು ಇಟಲಿಯಲ್ಲಿ ಹೊಸ ಕರೊನಾ ವೈರಾಣು ಒಮಿಕ್ರಾನ್ ಪತ್ತೆಯಾಗಿದೆ. ಹೊಸ ಪ್ರಭೇದದ ಕಾರಣ ಇಸ್ರೇಲ್ ತನ್ನ ಅಂತಾರಾಷ್ಟ್ರೀಯ ಗಡಿಗಳನ್ನು ಮುಚ್ಚಿದೆ. ವೈರಸ್​ಗೆ ಕಡಿವಾಣ ಹಾಕಲು ಬ್ರಿಟಷ್ ಪ್ರಧಾನಿ ಬೋರಿಸ್ ಜಾನ್ಸನ್ ಕಠಿಣ ಕ್ರಮಗಳನ್ನು ಘೋಷಿಸಿದ್ದಾರೆ. ವಿದೇಶಿಯರು ದೇಶಕ್ಕೆ ಆಗಮಿಸುವುದನ್ನು ನಿಷೇಧಿಸಿರುವ ಇಸ್ರೇಲ್, ವೈರಸ್​ನ ಹೊಸ ಪ್ರಭೇದದ ಹರಡುವಿಕೆ ತಡೆಗಟ್ಟಲು ಭಯೋತ್ಪಾದನೆ-ವಿರೋಧಿ ಫೋನ್ ಟ್ರಾ್ಯಕಿಂಗ್ ತಂತ್ರಜ್ಞಾನದ ಬಳಕೆಯನ್ನು ಪುನರಾರಂಭಿಸಲು ನಿರ್ಧರಿಸಿದೆ. ಬ್ರಿಟನ್​ಗೆ ದಕ್ಷಿಣ ಆಫ್ರಿಕಾದಿಂದ ಬಂದವರಲ್ಲಿ ಒಮಿಕ್ರಾನ್​ನ ಎರಡು ಕೇಸ್​ಗಳು ಪತ್ತೆಯಾಗಿದ್ದನ್ನು ಆರೋಗ್ಯ ಸಚಿವ ಸಾಜಿದ್ ಜಾವಿದ್ ದೃಢಪಡಿಸಿದ್ದಾರೆ. ವಾರಾಂತ್ಯದಲ್ಲಿ ದಕ್ಷಿಣ ಆಫ್ರಿಕಾದಿಂದ ದೇಶಕ್ಕೆ ಆಗಮಿಸಿದ್ದ ಇಬ್ಬರಲ್ಲಿ ಒಮಿಕ್ರಾನ್ ಪ್ರಭೇದದ ಸೋಂಕು ಪತ್ತೆಯಾಗಿದೆ ಎಂದು ಆಸ್ಟ್ರೇಲಿಯಾ ನ್ಯೂ ಸೌತ್ ವೇಲ್ಸ್​ನ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಇದರೊಂದಿಗೆ ಮಾರಕ ವೈರಸ್​ನ ರೂಪಾಂತರಿಯ ವಿರುದ್ಧ ಸಮರಕ್ಕೆ ಆಸ್ಟ್ರೇಲಿಯಾ ಸಜ್ಜುಗೊಳ್ಳುತ್ತಿದೆ.

ವ್ಯಾಕ್ಸಿನ್ ಪಡೆಯದ ಶಿಕ್ಷಕರು: ಕೇರಳದಲ್ಲಿ 5,000ಕ್ಕೂ ಅಧಿಕ ಶಿಕ್ಷಕ- ಶಿಕ್ಷಕಿಯರು ಹಾಗೂ ಬೋಧಕೇತರ ಸಿಬ್ಬಂದಿ ಇನ್ನೂ ಕೋವಿಡ್ ಲಸಿಕೆ ಹಾಕಿಸಿಕೊಂಡಿಲ್ಲ. ಧಾರ್ವಿುಕ ಹಾಗೂ ಆರೋಗ್ಯ ಸಂಬಂಧಿ ಕಾರಣಗಳಿಂದಾಗಿ ವ್ಯಾಕ್ಸಿನ್ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಲಸಿಕೆ ಪಡೆಯದ ಶಿಕ್ಷಕ ಹಾಗೂ ಇತರ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಎಚ್ಚರಿಸಿದ್ದಾರೆ. ಮಕ್ಕಳ ಸುರಕ್ಷತೆಯೇ ಸರ್ಕಾರದ ಆದ್ಯತೆ. ಲಸಿಕೆ ಹಾಕಿಸಿ ಕೊಳ್ಳದಿರುವುದನ್ನು ಸಮರ್ಥಿಸ ಲಾಗದು ಎಂದವರು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net