ಕೆಎಸ್ಆರ್​ಟಿಸಿ ಬಸ್​-ಕಾರು ಭೀಕರ ಅಪಘಾತ: ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವು..

Accident
Published on

ವಿಜಯಪುರ: ಇಲ್ಲಿಗೆ ಸಮೀಪದ ಜುಮನಾಳ ಕ್ರಾಸ್ ಬಳಿ ಕೆಎಸ್ಆರ್​​ಟಿಸಿ ಬಸ್ ಹಾಗೂ ಕಾರ್ ಮಧ್ಯೆ ಡಿಕ್ಕಿ ಸಂಭವಿಸಿ, ಭೀಕರ ಅಪಘಾತವಾಗಿದ್ದು ಸ್ಥಳದಲ್ಲೇ‌ ನಾಲ್ವರು ಸಾವಿಗೀಡಾಗಿದ್ದಾರೆ. ಮೃತಪಟ್ಟವರ ಪೈಕಿ ಒಬ್ಬರು ಚಿದಾನಂದ ಸೂರ್ಯವಂಶಿ (40) ಎಂಬುದು ಗೊತ್ತಾಗಿದ್ದು, ಉಳಿದ ಮೂವರ ಗುರುತು ಇನ್ನೂ ಪತ್ತೆಯಾಗಿಲ್ಲ.

ಭಾನುವಾರ ಸಂಜೆ ವಿಜಯಪುರಕ್ಕೆ ಬರುತ್ತಿದ್ದ ಫಾರ್ಚೂನರ್ ಕಾರಿಗೆ ಎದುರಿನಿಂದ ಬಂದ ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಬಸ್​ನಲ್ಲಿದ್ದವರು ನಿಶ್ಚಿತಾರ್ಥ ಕಾರ್ಯಕ್ಕೆ ನರಗುಂದದಿಂದ ವಿಜಯಪುರಕ್ಕೆ ಆಗಮಿಸಿದ್ದು, ನಿಶ್ಚಿತಾರ್ಥ ಮುಗಿಸಿ ವಾಪಸ್ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರಿಲ್ಲಿದ್ದ ನಾಲ್ವರು ಸ್ಥಳದಲ್ಲೇ ಅಸುನೀಗಿದ್ದಾರೆ. ಮೃತರೆಲ್ಲರೂ ಅಂದಾಜು 30ರ ವಯೋಮಾನದ ಪುರುಷರಾಗಿದ್ದಾರೆ. ಇವರು ಮಹಾರಾಷ್ಟ್ರದ ಸೋಲಾಪುರ ಮೂಲದವರಾಗಿದ್ದಾರೆ.

ಶವಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸಂಬಂಧಿಕರ ಬರುವಿಕೆಗಾಗಿ ಪೊಲೀಸರು ಕಾಯುತ್ತಿದ್ದಾರೆ. ಆ ಬಳಿಕವೇ ಮೃತರ ಹೆಸರು ತಿಳಿದು ಬರಲಿದೆ ಎಂದು ಗ್ರಾಮೀಣ ಠಾಣೆ ಪೊಲೀಸರು ವಿಜಯವಾಣಿಗೆ ತಿಳಿಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net