‘ಚಿಂತನ ಚಿಂತಾಮಣಿ’ ಗ್ರಂಥ ಬಿಡುಗಡೆ 7ಕ್ಕೆ

CPK3
Published on

ಸಂವಹನ ಪ್ರಕಾಶನ ಹೊರತಂದಿರುವ ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅವರ 800 ಚಿಂತನ ಬರಹಗಳ ಬೃಹತ್ ಗ್ರಂಥ ‘ಚಿಂತನ ಚಿಂತಾಮಣಿ’ ಬಿಡುಗಡೆ ಸಮಾರಂಭ ಜ.7ರಂದು ಸಂಜೆ 5.30ಕ್ಕೆ ನಗರದ ಜೆಎಸ್‌ಎಸ್ ಆಸ್ಪತ್ರೆ ಆವರಣದ ಡಾ.ಶಿವರಾತ್ರಿ ರಾಜೇಂದ್ರ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕಿ ಎಚ್.ಟಿ.ಶೈಲಜಾ ತಿಳಿಸಿದರು.

ಸಂವಹನ ಪ್ರಕಾಶನ ಹಾಗೂ ಕನ್ನಡ ಸಾಹಿತ್ಯ ಕಲಾಕೂಟದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದು, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ವಿಶ್ರಾಂತ ಪ್ರಾಧ್ಯಾಪಕ ಡಾ.ಡಿ.ಎ.ಶಂಕರ್ ಕೃತಿ ಬಿಡುಗಡೆ ಮಾಡುವರು. ಕೃತಿ ಕುರಿತು ಹಿರಿಯ ವಿದ್ವಾಂಸ ಎಚ್.ವಿ.ನಾಗರಾಜ ರಾವ್ ಮಾತನಾಡಲಿದ್ದಾರೆ. ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ.ಲಿಂಗರಾಜು ಮುಖ್ಯ ಅತಿಯಾಗಿ ಭಾಗವಹಿಸಲಿದ್ದು, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಪ್ರಕಾಶಕ ಡಿ.ಎನ್.ಲೋಕಪ್ಪ ಉಪಸ್ಥಿತರಿರಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚಿಂತನ ಚಿಂತಾಮಣಿ ಎಂಬುದು ಡಾ.ಸಿಪಿಕೆ ಅವರ ಸಮಗ್ರ ಚಿಂತನ ಬರಹಗಳ ಕೃತಿಯಾಗಿದೆ. ಇದರಲ್ಲಿ ಸಿಪಿಕೆ ಅವರ 800 ಚಿಂತನ ಬರಹಗಳಿದ್ದು, ಅವರ ಹಿಂದಿನ 22 ಚಿಂತನ ಕೃತಿಗಳನ್ನು ಒಗ್ಗೂಡಿಸಿರುವ 1060 ಪುಟಗಳ ಸಮಗ್ರ ಸಂಪುಟದ ಬೃಹತ್ ಕೃತಿಯಾಗಿದೆ.

ಒಂದು ಸಾವಿರ ರೂ. ಮುಖಬೆಲೆಯ ಈ ಕೃತಿಯನ್ನು ಲೋಕಾರ್ಪಣೆ ದಿನ 550 ರೂ. ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದರು.

ಕನ್ನಡ ಸಾಹಿತ್ಯ ಕಲಾಕೂಟದ ಆಧ್ಯಕ್ಷ ಎಂ.ಚಂದ್ರಶೇಖರ್, ಪ್ರಕಾಶಕ ಡಿ.ಎನ್.ಲೋಕಪ್ಪ, ಜಿನಹಳ್ಳಿ ಸಿದ್ದಲಿಂಗಪ್ಪ, ಕನ್ನಡಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net