ಚಾಮುಂಡೇಶ್ವರಿ ದೇವಾಲಯಕ್ಕೆ ಭಕ್ತರ ದಂಡು

14NGD1
Published on

ನಂಜನಗೂಡು: ಆಷಾಢ ಮಾಸದ ಕೊನೆಯ ಶುಕ್ರವಾರದ ಪ್ರಯುಕ್ತ ನಗರದ ಕಪಿಲಾ ನದಿ ತೀರದಲ್ಲಿರುವ ಚಾಮುಂಡೇಶ್ವರಿ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.


ದೇವಾಲಯದಲ್ಲಿ ಬೆಳಗ್ಗೆ 5 ಗಂಟೆಯಿಂದಲೇ ನಾನಾ ಪೂಜೆಗಳು ನಡೆದವು. ಮಹಾನ್ಯಾಸಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರನಾಮಾಭಿಷೇಕ, ಮಹಾಮಂಗಳಾರತಿ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ದೇವಾಲಯದ ಹೊರ ಆವರಣವನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು.


ದೇವಾಲಯದ ಒಳಾವರಣ ಹಾಗೂ ಗರ್ಭಗುಡಿಯನ್ನು ಬಗೆಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ಚಾಮುಂಡೇಶ್ವರಿ ದೇವಿಗೆ ನಕ್ಷತ್ರ ಮಾದರಿಯಲ್ಲಿ ಹೂವಿನ ಅಲಂಕಾರ ಮಾಡಿ ನಾನಾ ಆಭರಣಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆಯಿಂದ ಸಂಜೆವರೆಗೂ ಸಾವಿರಾರು ಭಕ್ತರು ಭೇಟಿ ನೀಡಿ ದರ್ಶನ ಪಡೆದರು. ಹರಕೆ ಹೊತ್ತವರು ನಿಂಬೆ ಹಣ್ಣಿನ ಆರತಿ ಸಲ್ಲಿಸಿದರು.


ದೇವಾಲಯಕ್ಕೆ ಆಗಮಿಸಿದ್ದ ಭಕ್ತರಿಗೆ ಸಂಘ ಸಂಸ್ಥೆಗಳು, ದಾನಿಗಳು ಅನ್ನ-ಸಾಂಬರ್, ರೈಸ್‌ಬಾತ್, ಪುಳಿಯೊಗರೆ, ಮೊಸರನ್ನ ವಿತರಿಸಿದರು. ನಗರದ ವಿವಿಧೆಡೆ ಸಂಘ ಸಂಸ್ಥೆಗಳಿಂದ ಚಾಮುಂಡೇಶ್ವರಿ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net