

ಎಚ್.ಡಿ.ಕೋಟೆ: ಮುಂಬರುವ ಲೋಕಸಭಾ ಚುನಾವಣೆಗೆ ಚಾಮರಾಜನಗರ ಕ್ಷೇತ್ರಕ್ಕೆ ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ತಿಳಿಸಿದರು.
ಪಟ್ಟಣದ ಸರ್ಕಾರಿ ಅತಿಥಿ ಗೃಹದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ 4 ಲಕ್ಷ ಪರಿಶಿಷ್ಟ ಜಾತಿಯ ಮತದ್ದಾರಿದ್ದಾರೆ. ಈ ಮತಗಳನ್ನು ಸೆಳೆಯಲು ಬಲಗೈ ಸಮುದಾಯದ ನನಗೆ ಬಿಜೆಪಿ ಟಿಕೆಟ್ ನೀಡಬೇಕು. 10 ವರ್ಷಗಳಿಂದ ಪಕ್ಷ ಸಂಘಟನೆ ಮಾಡುತ್ತಾ ಬಂದಿದ್ದೇನೆ. ಕಳೆದ ಲೋಕಸಭಾ ಚುನಾವಣೆಯಲ್ಲೂ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆ ಸಂದರ್ಭದಲ್ಲಿ ಪಕ್ಷ ನನಗೆ ಟಿಕೆಟ್ ನೀಡದೆ ಸಂಘಟನೆ ಮಾಡುವಂತೆ ಸೂಚಿಸಿತ್ತು. ಅದರಂತೆ ಸಂಘಟನೆಯಲ್ಲಿ ತೊಡಗಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರ ಗೆಲುವಿಗೆ ಸಹಕಾರಿಯಾಗಿದ್ದೆ. ಹಾಗಾಗಿ ನನಗೆ ಈ ಬಾರಿ ಚಾಮರಾಜನಗರ ಕ್ಷೇತ್ರದಿಂದ ಟಿಕೆಟ್ ನೀಡಬೇಕು ಎಂದು ಒತ್ತಾಯಿಸುತ್ತೇನೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಿಂದ ಪ್ರಭಾವಿತನಾಗಿದ್ದು, ಅವರ ಆದರ್ಶಗಳೇ ಟಿಕೆಟ್ ಕೇಳಲು ಕಾರಣ. ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿರುವುದರಿಂದ ಹೇಗೆ ಅಭಿವೃದ್ಧಿ ಕೆಲಸಗಳನ್ನು ಮಾಡಬಹುದು ಎಂಬುದರ ಅರಿವಿದೆ ಎಂದರು.
ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಹಂಸರಾಜ್, ತಾಲೂಕು ಅಧ್ಯಕ್ಷ ಸ್ವಾಮಿ, ಮುಖಂಡರಾದ ಸುಂದರ್, ಚೌಡಳ್ಳಿ ಜವರಯ್ಯ, ಗೋವಿಂದ, ಮೋಹನ್‌ರಾಜ್, ಮಹೇಶ್ ಇದ್ದರು.