ಚಾಕುವಿನಿಂದ ಇರಿದು ಕೊಲೆಗೆ ಯತ್ನ

Published on

ಕೆ.ಆರ್.ಪೇಟೆ: ತಾಲೂಕಿನ ಕುಪ್ಪಹಳ್ಳಿ ಗ್ರಾಮದಲ್ಲಿ ಶನಿವಾರ ದ್ವೇಷದಿಂದ ವ್ಯಕ್ತಿಯೊಬ್ಬ ಮೂವರಿಗೆ ಚಾಕು ಇರಿದು ಕೊಲೆಗೆ ಯತ್ನಿಸಿದ್ದಾರೆ.


ಗ್ರಾಮದ ಪ್ರಭಾಕರ್, ಮೂರ್ತಿ ಹಾಗೂ ಸಾಗರ್ ಚಾಕು ಇರಿತಕ್ಕೊಳಗಾದವರು. ಅದೇ ಗ್ರಾಮದ ಕುಮಾರ್ ಚಾಕು ಇರಿದವ.


ಗ್ರಾಮದಲ್ಲಿ ಹಾಲಿನ ಡೇರಿಯಲ್ಲಿ ಶನಿವಾರ ಸಂಜೆ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಕುಮಾರ್ ಮತ್ತು ಹಲ್ಲೆಗೊಳಗಾದವರ ನಡುವೆ ಮಾತಿನ ಚಕಮುಕಿ ನಡೆದಿದೆ. ಸಭೆ ಮುಗಿದ ನಂತರ ಪ್ರಭಾಕರ್, ಮೂರ್ತಿ ಹಾಗೂ ಸಾಗರ್ ಡೇರಿ ಹೊರಗೆ ನಿಂತು ಮಾತನಾಡುವಾಗ ಕುಪಿತಗೊಂಡ ಕುಮಾರ್ ಮನೆಗೆ ತೆರಳಿ ಚಾಕು ತಂದು ನಿಂತಿದ್ದ ಪ್ರಭಾಕರ್ ಹಾಗೂ ಮೂರ್ತಿಗೆ ಚಾಕುವಿನಿಂದ ಇರಿದಿದ್ದಾನೆ. ಇವರನ್ನು ಬಿಡಿಸಿಲು ಮುಂದಾದ ಸಾಗರ್ ಬೆರಳಿಗೂ ಇರಿತವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಗಾಯಾಳುಗಳು ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದಾರೆ. ಇತ್ತ ಆಕ್ರೋಶಗೊಂಡ ಗ್ರಾಮಸ್ಥರು ಚಾಕು ಇರಿದವನಿಗೆ ಥಳಿಸಿದ್ದಾರೆ. ಇದರಿಂದ ಗಾಯಗೊಂಡ ಕುಮಾರ್‌ನನ್ನು ಹೆಚ್ಚುವರಿ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net