ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಒತ್ತಾಯ

ಗ್ರಾಹಕರಿಗೆ ಉತ್ತಮ ಸೇವೆಗಳನ್ನು ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳು ಮದ್ದೂರು ತಾಲೂಕು ಬೆಸಗರಹಳ್ಳಿ ಗ್ರಾಮದ ಬ್ಯಾಂಕ್ ಆಫ್ ಬರೋಡಾಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
15M.D.R.9
Published on

ಮದ್ದೂರು: ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಬೆಸಗರಹಳ್ಳಿ ವಲಯ ಸಮಿತಿಯ ಪದಾಧಿಕಾರಿಗಳು ಬೆಸಗರಹಳ್ಳಿ ಗ್ರಾಮದ ಬ್ಯಾಂಕ್ ಆಫ್ ಬರೋಡಾಗೆ ಮುತ್ತಿಗೆ ಹಾಕಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್ ಮಾತನಾಡಿ, ಆರ್‌ಬಿಐ ನಿರ್ದೇಶನದಂತೆ ಕೂಲಿಕಾರರಿಗೆ 1 ಲಕ್ಷ ರೂ.ವರೆಗೆ ಭದ್ರತಾ ರಹಿತಾ ಸಾಲ ನೀಡಬೇಕು. ಗ್ರಾಹಕರ ಉಳಿತಾಯ ಖಾತೆಯಲ್ಲಿರುವ ಹಣಕ್ಕೆ ಪ್ರತಿ ತಿಂಗಳು ಬಡ್ಡಿ ನೀಡಬೇಕು. ಬ್ಯಾಂಕ್‌ಗೆ ಸೇವಾ ವಲಯವನ್ನು ಗುರುತಿಸಬೇಕು. 80 ವರ್ಷ ಮೇಲ್ಪಟ್ಟವರಿಗೆ, ಶೇ.80ಕ್ಕೂ ಹೆಚ್ಚು ಅಂಗವಿಕಲರಾಗಿರುವವರಿಗೆ ಮನೆ ಬಾಗಿಲಿಗೆ ಮಾಸಾಶನ ನೀಡಲು ಕ್ರಮವಹಿಸಬೇಕು. ಪ್ರತಿ 6 ತಿಂಗಳಿಗೊಮ್ಮೆ ಗ್ರಾಹಕರ ಅದಾಲತ್ ನಡೆಸಿ ಕುಂದುಕೊರತೆ ಆಲಿಸಬೇಕು ಎಂದು ಮನವಿ ಮಾಡಿದರು.

ಮೈಕ್ರೋ ಫೈನಾನ್ಸ್ ಮೂಲಕ ಸ್ವಸಹಾಯ ಸಂಘಗಳಿಗೆ ಸಾಲ ನೀಡುವುದನ್ನು ನಿಲ್ಲಿಸಿ ನೇರವಾಗಿ ಬ್ಯಾಂಕ್ ಮೂಲಕ ನೀಡಬೇಕು. ಗ್ರಾಹರೊಂದಿಗೆ ಕನ್ನಡದಲ್ಲಿ ವ್ಯವಹರಿಸಬೇಕು. ಸಾಮಾಜಿಕ ಭದ್ರತಾ ಯೋಜನೆಗಳಡಿ ಮಾಸಾಶನ ಪಡೆಯುತ್ತಿರುವ ಫಲಾನುಭವಿಗಳಿಗೆ ಬ್ಯಾಂಕ್‌ನಲ್ಲೇ ಹಣ ವಿತರಿಸಬೇಕು ಎಂದರು.

ಬ್ಯಾಂಕ್ ವ್ಯವಸ್ಥಾಪಕ ಚಿರಂಜನ್ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಕೂಲಿಕಾರರ ಸಂಘ ಸಲ್ಲಿಸಿರುವ ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಕರ್ನಾಟಕ ರಾಜ್ಯರೈತ ಸಂಘದ ಹಿರಿಯ ಮುಖಂಡ ಕೀಳಘಟ್ಟ ನಂಜುಂಡಯ್ಯ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಬಿ.ಹನುಮೇಶ್, ರಾಜ್ಯ ಸಮಿತಿ ಸದಸ್ಯ ಬಿ.ಎ.ಮಧುಕುಮಾರ, ತಾಲೂಕು ಕಾರ್ಯದರ್ಶಿ ಟಿ.ಪಿ. ಅರುಣ್‌ಕುಮಾರ್, ಶ್ರೀನಿವಾಸ್, ಮುಖಂಡರಾದ ಪಣ್ಣೆದೊಡ್ಡಿ ವೆಂಕಟೇಶ್, ರಮೇಶ್, ರಾಜು, ಪಣ್ಣೆದೊಡ್ಡಿ ಜಯರಾಮು, ಗೌರಿಪಾಳ್ಯ ಯೋಗೇಶ, ಚಿಕ್ಕತಾಯಮ್ಮ, ಬೆಟ್ಟಮ್ಮ, ಕಮಲಮ್ಮ, ಜಯಕುಮಾರ್, ಡಿ.ಕೆ.ಶಿವಣ್ಣ, ರಾಂಪುರ ಕುಮಾರ್, ಮರಿಸ್ವಾಮಿ, ಬೋರೇಗೌಡ, ಶಶಿಧರ, ಶಿವಲಿಂಗಯ್ಯ, ಕೃಷ್ಣ, ರೇಷ್ಮಾ ಬಾನು, ಗುಡಿದೊಡ್ಡಿ ಶಿವಲಿಂಗಯ್ಯ, ಚಂದ್ರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net