

ಸರಗೂರು:
ತಾಲೂಕಿನ ಸ್ಥಳೀಯ ಗ್ರಾಪಂಗಳಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಒತ್ತಾಯಿಸಿದರು.
ತಾಲೂಕಿನ ಹಂಚೀಪುರ ಗ್ರಾಮದಲ್ಲಿ ನೂತನ ಗ್ರಾಪಂ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರಗಳು ಯೋಜನೆಗಳನ್ನು ರೂಪಿಸಿಕೊಂಡು ಅಭಿವೃದ್ಧಿಗೆ ಪೂರಕವಾಗಿ ಅನುದಾನ ನೀಡಬೇಕು. ಹೆಚ್ಚು ಅನುದಾನ ನೀಡಿದರೆ ಮಾತ್ರ ಗ್ರಾಮಗಳಲ್ಲಿನ ಸಮಸ್ಯೆಗಳು ಸಂಪೂರ್ಣವಾಗಿ ನಿವಾರಣೆಯಾಗಲು ಸಾಧ್ಯ ಎಂದು ಹೇಳಿದರು.
ಇಂದಿಗೂ ಕೆಲ ಗ್ರಾಮಗಳಲ್ಲಿ ಮೂಲ ಸೌಲಭ್ಯದ ಕೊರತೆಯಿದೆ. ಅಂತಹ ಗ್ರಾಮಗಳನ್ನು ಗುರುತಿಸಿ ಸೌಲಭ್ಯ ಒದಗಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಇದಕ್ಕೆ ಅಧಿಕಾರಿಗಳು, ಸಾರ್ವಜನಿಕರು ಸಹಕರಿಸಬೇಕು. ಗ್ರಾಮಕ್ಕೆ ಬೇಕಿರುವ ಬೇಡಿಕೆಗಳನ್ನು ಚರ್ಚಿಸಿದಾಗ ಮಾತ್ರ ಸಮಸ್ಯೆಗಳು ಗಮನಕ್ಕೆ ಬರಲು ಸಾಧ್ಯ. ಹೀಗಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಗ್ರಾಪಂ ಅಧ್ಯಕ್ಷ ದಡದಹಳ್ಳಿ ಡಿ.ಎಸ್.ಜಯರಾಜು ಮಾತನಾಡಿ, ಗ್ರಾಪಂ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಹತ್ತಾರು ಸಮಸ್ಯೆಗಳಿದ್ದು, ಅದನ್ನು ಹಂತ-ಹಂತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.
ಹಂಚೀಪುರ ಮಠದ ಶ್ರೀಚೆನ್ನಬಸವ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಪಿ.ರವಿ, ತಾಪಂ ಮಾಜಿ ಸದಸ್ಯ ಮಹದೇವಸ್ವಾಮಿ, ಎಂ.ಎಸ್.ಮಂಜುಳಾ, ಸದಸ್ಯರಾದ ಎ.ಚಂದ್ರಶೇಖರ್, ಗೀತಾ, ಕರೀಗೌಡ, ಮಣಿ, ಮಂಜುಳಾ, ನಾಗರಾಜು, ಎಂ.ನಟರಾಜು, ರುಕ್ಮಿಣಿ, ಸತೀಶ್, ಶಿವಮ್ಮ, ಪಿಡಿಒ ಬಿ.ಚೆನ್ನಪ್ಪ, ಪುರದಶೆಡ್ಡು ಲೋಕೇಶ್, ಗ್ರಾಮದ ಮುಖಂಡರಾದ ಪುಟ್ಟಣ್ಣ, ಶಿವಕುಮಾರ್, ಬಸವಣ್ಣ, ಸ್ವಾಮಿ, ಗಜೇಂದ್ರ ಇತರರು ಇದ್ದರು.