ಗ್ರಾಮ ಸಹಾಯಕರಿಗೆ ವೇತನ ನೀಡಿ

7sri-4
ಶೃಂಗೇರಿ ತಾಲೂಕು ಕಚೇರಿಯಲ್ಲಿ ಗ್ರಾಮ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನ ನೀಡುವಂತೆ ಆಗ್ರಹಿಸಿ ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಯಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಅಜಿತ್ ಶೆಟ್ಟಿ, ಕೆ.ಎಂ.ಶ್ರೀನಿವಾಸ್, ಚಂದ್ರಶೇಖರ್ ಇದ್ದರು.
Published on

ಶೃಂಗೇರಿ: ತಾಲೂಕು ಕಚೇರಿಯಲ್ಲಿ ಗ್ರಾಮ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ 11 ಸಿಬ್ಬಂದಿಗೆ ವೇತನ ನೀಡುವಂತೆ ಆಗ್ರಹಿಸಿ ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿಯಿಂದ ಸೋಮವಾರ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಅನುಪ್ ಸಂಜೋಗ್ ಅವರಿಗೆ ಮನವಿ ಸಲ್ಲಿಸಲಾಯಿತು.

ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ಮಾತನಾಡಿ, ಸುಮಾರು 20 ವರ್ಷಗಳಿಂದ ಗ್ರಾಮ ಸಹಾಯಕರಾಗಿ ಕೆಲಸ ಮಾಡಿಕೊಂಡು ಬಂದಿರುವ 21 ಮಂದಿ ಸಿಬ್ಬಂದಿ ತಮ್ಮ ಕುಟುಂಬ ನಿರ್ವಹಣೆ ಜತೆ ಮಲೆನಾಡು ಪ್ರದೇಶದಲ್ಲಿ ಮಳೆಗಾಲದಲ್ಲೂ ಅವರು ನೀಡುತ್ತಿರುವ ಸೇವೆ ಅನುಪಮ. ಅದರೆ 21 ಸಿಬ್ಬಂದಿ ಪೈಕಿ 10 ಜನರನ್ನು ಹೊರತುಪಡಿಸಿ ಉಳಿದ 11 ಸಿಬ್ಬಂದಿಗೆ ಕಳೆದ ಐದು ತಿಂಗಳಿಂದ ಸಂಬಳ ನೀಡದೆ ಇಲಾಖೆಯ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಾಗಿದೆ ಎಂದರು.

ಜೆಲ್ಲೆಗೆ ಒಟ್ಟು 240 ಗ್ರಾಮ ಸಹಾಯಕರನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ತಾಲೂಕಿಗೆ 21 ಜನರನ್ನು ನೇಮಕ ಮಾಡಲಾಗಿತ್ತು. ಯಾವ ವೃತ್ತಕ್ಕೆ ಯಾರು ಎಂಬುದಾಗಿ ಸಿಬ್ಬಂದಿ ಹೆಸರು ನಮೂದಿಸಿ ಅಂದಿನ ತಹಸೀಲ್ದಾರ್ ನೇಮಕ ಮಾಡಿದ್ದರು. ಈಗಿನ ಕಂದಾಯ ಇಲಾಖೆ ಕಾರ್ಯದರ್ಶಿ ರಾಜೇಂದ್ರಕಟಾರಿಯಾ ಅವರು ಜಿಲ್ಲಾಧಿಕಾರಿಯಾದ ಸಂದರ್ಭದಲ್ಲಿ ತಿಂಗಳ ಸಂಬಳ ನೀಡಲಾಗಿದೆ. ಜತೆಗೆ ಈಗಿನ ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರೆಡ್ಡಿ ಅವರು ಶೃಂಗೇರಿಯಲ್ಲಿ ತಹಸೀಲ್ದಾರ್ ಆಗಿರುವ ಸಂದರ್ಭದಲ್ಲಿ ವೇತನ ನೀಡಲಾಗಿದೆ. ಹಾಗಾಗಿ ಈ ಹಿಂದೆ ಆಯ್ಕೆಗೊಂಡಿರುವ 21 ಗ್ರಾಮ ಸಹಾಯಕರನ್ನು ಉಳಿಸಿಕೊಂಡು ಅವರಿಗೆ ಕೂಡಲೇ ಬಾಕಿ ಇರುವ ಸಂಬಳ ನಿಯಮಿತವಾಗಿ ನೀಡಿ ಅವರ ಸೇವೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.ಸಮಿತಿಯ ಗೌರವಾಧ್ಯಕ್ಷ ಕೆ.ಎಂ.ಶ್ರೀನಿವಾಸ್, ಕಾರ್ಯದರ್ಶಿ ಗೋಳ್ಗೋಡು ಚಂದ್ರಶೇಖರ್, ವಕ್ತಾರ ಆಗುಂಬೆ ಗಣೇಶ್ ಹೆಗಡೆ, ಮೆಣಸೆ ಗ್ರಾಪಂ ಸದಸ್ಯ ಅಜಿತ್ ಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net