ಗ್ರಾಮ ಮಟ್ಟದಲ್ಲಿ ಪೌರಕಾರ್ಮಿಕರ ದಿನ ಆಚರಿಸಿ

HUN-JUNE-13-3(SAFAI KARMACHARI SAMITI SABHE)
Published on

ಹುಣಸೂರು: ಗ್ರಾಮಮಟ್ಟದಲ್ಲಿ ಪೌರಕಾರ್ಮಿಕರ ದಿನ ಆಚರಿಸದಿದ್ದರೆ ಮುಂದಿನ ಸಫಾಯಿ ಕರ್ಮಚಾರಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯನ್ನು ಬಹಿಷ್ಕರಿಸುವುದಾಗಿ ಉಪವಿಭಾಗ ಮಟ್ಟದ ಸಮಿತಿ ಸದಸ್ಯ ಎಚ್.ಕೆ.ಮಹೇಶ್ ಎಚ್ಚರಿಸಿದರು.

ನಗರದ ಉಪವಿಬಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಉಪವಿಭಾಗ ಮಟ್ಟದ ಸಫಾಯಿ ಕರ್ಮಚಾರಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದೊಂದು ವರ್ಷದಿಂದ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಆಯೋಜಿಸಿ ಪೌರಕಾರ್ಮಿಕರನ್ನು ಸನ್ಮಾನಿಸಬೇಕೆಂದು ಒತ್ತಾಯಿಸುತ್ತಲೇ ಬಂದಿದ್ದೇನೆ. ಆದರೆ ಇದುವರೆಗೂ ಮಾಡಿಲ್ಲ ಎಂದು ಬೇಸರಿಸಿದರು.

ನಗರಮಟ್ಟದಲ್ಲಿ ನಡೆಯುವ ಕಾರ್ಯಕ್ರಮ ಗ್ರಾಮ ಮಟ್ಟದಲ್ಲಿ ಇನ್ನೂ ಜಾರಿಗೆ ಬಂದಿಲ್ಲ. ಪೌರಕಾರ್ಮಿಕರ ಪರವಾಗಿ ಬಂದಿರುವ ನಾನು, ಆ ಸಮುದಾಯಕ್ಕೆ ಗೌರವ ನೀಡದ ಆಡಳಿತದೊಂದಿಗೆ ಮಾತನಾಡುವ ಅವಶ್ಯಕತೆ ನನಗಿಲ್ಲ. ಬೇಕಿದ್ದರೆ ನಿಮ್ಮ ಸಭೆಯ ನಡಾವಳಿಗೆ ಸಹಿ ಹಾಕಿ ಹೋಗುತ್ತೇನೆ. ಆದರೆ ಮುಂದಿನ ಸಭೆ ವೇಳೆ ಉಪವಿಭಾಗ ಮಟ್ಟದ ಎಲ್ಲ ಗ್ರಾ.ಪಂ.ಗಳಲ್ಲೂ ದಿನಾಚರಣೆ ನಡೆಯದೆ ಇದ್ದರೆ ಸಭೆಯನ್ನು ಬಹಿಷ್ಕರಿಸಿ ಸರ್ಕಾರದ ಮಟ್ಟದಲ್ಲಿ ದೂರು ನೀಡುತ್ತೇನೆ ಎಂದು ಆಕ್ರೋಶಭರಿತರಾಗಿ ನುಡಿದರು.

ಉಪವಿಭಾಗಾಧಿಕಾರಿ ರುಚಿಬಿಂದಾಲ್ ಮಾತನಾಡಿ, ಸದಸ್ಯರು ಅತ್ಯಂತ ಭಾವುಕರಾಗಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಅದು ನಿಜ ಕೂಡ ಹೌದು. ಗ್ರಾ.ಪಂ. ಸಿಬ್ಬಂದಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪೌರಕಾರ್ಮಿಕರ ದಿನವನ್ನು ಆಚರಿಸಿ ಅದರ ದಾಖಲಾತಿಗಳನ್ನು ನನಗೆ ನೀಡಬೇಕು. ಮುಂದಿನ ಸಭೆಯಲ್ಲಿ ಇದೇ ವಿಷಯ ಮತ್ತೆ ಪ್ರಸ್ತಾಪವಾಗದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಐಡಿ ಕಾರ್ಡ್ ಅವಾಂತರ: ಸ್ಥಳೀಯ ಸಂಸ್ಥೆಗಳಲ್ಲಿ ದುಡಿಯುವ ಹೊರಗುತ್ತಿಗೆ ಮತ್ತು ಕಾಯಂ ನೌಕರರಿಗೆ ಐಡಿ ಕಾರ್ಡ್ ನೀಡಿರುವುದು ಸ್ವಾಗತಾರ್ಹ. ಆದರೆ ಖಾಸಗಿ ಸಂಸ್ಥೆಗಳಲ್ಲಿ ದುಡಿಯವ ಪೌರಕಾರ್ಮಿಕರನ್ನು ಗುರುತಿಸಿ ಐಡಿ ಕಾರ್ಡ್ ನೀಡುವಂತೆ ಒತ್ತಾಯಿಸುತ್ತಲೇ ಇದ್ದೇನೆ. ಈವರೆಗೂ ಒಂದು ತಾಲೂಕಿನಲ್ಲೂ ಕ್ರಮ ಜಾರಿಯಾಗಿಲ್ಲ. ಖಾಸಗಿ ಸಂಸ್ಥೆಗಳಲ್ಲಿ ದುಡಿಯುವ ಪೌರಕಾರ್ಮಿಕರಿಗೆ ಸೇವಾ ಭದ್ರತೆಯೂ ಇಲ್ಲ. ಕನಿಷ್ಠ ಕೂಲಿಯೂ ಇಲ್ಲ, ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ವಸತಿ ಶಾಲೆಗಳಲ್ಲಿನ ಸಿಬ್ಬಂದಿಯ ಗತಿಯೂ ಇದೆ ಆಗಿದೆ ಎಂದು ಮಹೇಶ್ ಬೇಸರ ವ್ಯಕ್ತಪಡಿಸಿದರು.

ಹುಣಸೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ದುಡಿಯುವ ಪೌರಕಾರ್ಮಿಕರಿಗೆ ಐಡಿ ಕಾರ್ಡ್ ನೀಡಲಾಗಿದೆ ಎಂದು ದಾಖಲೆಯನ್ನು ಅಧಿಕಾರಿಗಳು ಸಭೆಯಲ್ಲಿ ಪ್ರದರ್ಶಿಸಿದರು. ಇನ್ನುಳಿದ ತಾಲೂಕಿನವರು ಕೂಡಲೇ ಈ ಕುರಿತು ಮಾಹಿತಿ ಕಲೆಹಾಕಿ ಐಡಿ ಕಾರ್ಡ್ ನೀಡಬೇಕು ಎಂದು ಉಪವಿಭಾಗಾಧಿಕಾರಿ ಸೂಚಿಸಿದರು.

ಜಿಲ್ಲಾ ಸಮಿತಿ ಸದಸ್ಯ ಎಚ್.ಬಿ.ದಿವಾಕರ್ ಮಾತನಾಡಿ, ಪೌರಕಾರ್ಮಿಕರಿಗಾಗಿ ಆಯೋಜಿಸಿರುವ ಆರೋಗ್ಯ ಶಿಬಿರಗಳು ಕೇವಲ ಪುಸ್ತಕದ ದಾಖಲೆಗಳಾಗಿವೆ. ನಿಜವಾಗಿಯೂ ಆಗಿರುವುದಿಲ್ಲ. ಎಲ್ಲರೂ ಕಡ್ಡಾಯವಾಗಿ ಪೌರಕಾರ್ಮಿಕರಿಗಾಗಿ ಆರೋಗ್ಯ ಶಿಬಿರ ಆಯೋಜಿಸಬೇಕೆಂದು ಒತ್ತಾಯಿಸಿದರು.
ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್‌ಕುಮಾರ್, ಪೌರಾಯುಕ್ತ ಸುಜಯ್‌ಕುಮಾರ್, ಸಮಿತಿ ಸದಸ್ಯೆ ಎಚ.ಡಿ.ಕೋಟೆಯ ಲಕ್ಷ್ಮೀ, ವಿವಿಧ ತಾಲೂಕುಗಳ ತಹಸೀಲ್ದಾರ್‌ಗಳು, ತಾ.ಪಂ.ಇಒಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net