ವಿಜಯವಾಣಿ ಸುದ್ದಿಜಾಲ ಕೋಲಾರ
ಜಿಲ್ಲೆಯ ಗ್ರಾಮಪಂಚಾಯ್ತಿ ವ್ಯಾಪ್ತಿಗೆ ಬರುವ ೮೭ ಕೆರೆಗಳಲ್ಲಿ ೫೦ ಕೆರೆಗಳನ್ನು ಸರ್ವೇ ಮಾಡಲಾಗಿದೆ. ಉಳಿದ ಕೆರೆಗಳನ್ನು ಸರ್ವೇ ನಡೆಸಿ, ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿ ಅಕ್ರಂಪಾಷ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಧಿಕಾರಿ ಹಾಗೂ ಜಿ.ಪಂ.ಸಿಇಒ ಅಕ್ರಂ ಪಾಷ ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ವೈಯಕ್ತಿಕ ಶೌಚಾಲಯ ನಿರ್ಮಾಣದ ವಿಷಯವಾಗಿ ಅವಶ್ಯಕತೆಯನುಸಾರ ವೈಯಕ್ತಿಕ ಫಲಾನುಭವಿಗಳಿಗೆ ಶೌಚಾಲಯ ನಿರ್ಮಾಣ ಮಾಡಲು ಕಾರ್ಯಾದೇಶ ವಿತರಿಸಿ ತುರ್ತಾಗಿ ಪ್ರಗತಿ ಸಾಧಿಸುವಂತೆ ಸೂಚಿಸಿದರು.
ಈಗಾಗಲೇ ತಿಳಿದಿರುವಂತೆ ಗ್ರಾಮದಲ್ಲಿ ಮೂಲ ಸಮಸ್ಯೆಗಳಲ್ಲಿ ಒಂದಾದ ಕೊಳಚೆ ನೀರು ನಿರ್ವಹಣೆಯ ವಿಷಯವಾಗಿ ಹಲವಾರು ಸವಾಲುಗಳು ತಲೆದೂರುತ್ತಿದ್ದು, ತುರ್ತಾಗಿ ಕೊಳಚೆ ನೀರು ನಿರ್ವಹಣೆಯ ಕಾಮಗಾರಿಗಳನ್ನು ಪ್ರಾರಂಭಿಸಿ ಸಮಸ್ಯೆ ಬಗೆಹರಿಸಬೇಕೆಂದು ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮಗಳಲ್ಲಿ ಮನೆಗಳಿಂದ ಸಂಗ್ರಹಿಸಬೇಕಿರುವ ಹಸಿ ಮತ್ತು ವಣ ಕಸಗಳನ್ನು ವಿಂಗಡಣೆ ಮಾಡಿ, ಕಸವನ್ನು ಗ್ರಾಮಗಳಿಂದ ವಿಲೇವಾರಿ ಮಾಡುವ ಕೆಲಸವನ್ನು ಗ್ರಾಮಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಮಾಡಬೇಕಾಗಿದೆ ಎಂದರು.
ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಿಂದ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕಾಮಗಾರಿಗಳು ಬಾಕಿ ಉಳಿದುಕೊಂಡಿವೆ. ಅವುಗಳನ್ನು ಪೂರ್ಣಗೊಳಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ. ಕಾಮಗಾರಿಗಳನ್ನು ಪರಿಶೀಲನೆ ನಡೆಸಿ, ಬಾಕಿ ಉಳಿದುಕೊಂಡಿರುವ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಪಂಚಾಯ್ತಿ ಅಧಿಕಾರಿಗಳು ಮಾಡಬೇಕಾಗಿದೆ ಎಂದರು.
ನರೇಗಾ ಯೋಜನೆಯಲ್ಲಿ ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸಿಕೊಡಬೇಕು. ಹಾಗೂ ಕೆರೆಗಳ ಜೀರ್ಣೋದ್ದಾರ ಮಾಡುವ ಕಾಮಗಾರಿಗಳನ್ನು ನಡೆಸಬೇಕು. ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಕುಡಿಯುವ ನೀರು ಕಲ್ಪಿಸುವ ವ್ಯವಸ್ಥೆ ಮಾಡಬೇಕು ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳ ಜವಾಬ್ದಾರಿ ಹೆಚ್ಚಾಗಿದೆ. ಆಯಾ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಕೈಗೊಳ್ಳುವ ಕಾಮಗಾರಿಗಳನ್ನು ಕಾಲ ಕಾಲಕ್ಕೆ ಪ್ರಗತಿ ಪರಿಶೀಲನೆ ನಡೆಸಬೇಕು. ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿಗಳಾದವರು ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ, ಪ್ರಗತಿ ಗುರಿ ನಿಗಧಿಪಡಿಸಬೇಕು. ಕಾಲಮಿತಿಯೊಳಗಾಗಿ ಕಾಮಗಾರಿಗಳು ಪೂರ್ಣಗೊಳಿಸುವ ಜವಾಬ್ದಾರಿ ಅಭಿವೃದ್ಧಿ ಅಧಿಕಾರಿಗಳಿಗೆ ವಹಿಸಬೇಕು ಎಂದರು.
ಸಾಮಾಜಿಕ ಲೆಕ್ಕ ಪರಿಶೋಧನೆ ಅಡಾಕ್ ಸಭೆ ಆಯೋಜನೆ ಮತ್ತು ವಸೂಲಾತಿ ಬಗ್ಗೆ ರಾಜ್ಯಮಟ್ಟದಲ್ಲಿ ಆಗಿಂದ್ದಾಗ್ಗೆ ಪ್ರಗತಿ ಪರಿಶೀಲನೆ ಕೈಗೊಳ್ಳುತ್ತಿದ್ದು, ತಾಲ್ಲೂಕು ಮಟ್ಟದಲ್ಲಿ ನಿಯಮಾನುಸಾರ ವೇಳಾಪಟ್ಟಿಯಂತೆ ಅಡಾಕ್ ಸಭೆಗಳನ್ನು ಆಯೋಜಿಸುವುದು ಹಾಗೂ ಜಿಲ್ಲೆಯಲ್ಲಿ ದಾಖಲಾಗಿರುವ ಸಾಮಾಜೀಕ ಲೆಕ್ಕ ಪರಿಶೋಧನಾ ದೂರುಗಳನ್ನು ವಸೂಲಾತಿ ಮಾಡಿ ಇತ್ಯರ್ಥಪಡಿಸಲು ಸೂಚಿಸಿದರು.
ಆಸ್ತಿ ತೆರಿಗೆ ವಸೂಲಾತಿ ಪ್ರಗತಿ ಸಾಲದು :
ಗ್ರಾಮ ಪಂಚಾಯತಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ತರಿಗೆ ಸಂಗ್ರಹಣೆ ಆಗುತ್ತಿಲ್ಲದ ಕಾರಣ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಖುದ್ದಾಗಿ ಗಮನಹರಿಸಿ ಅಂತಹ ಗ್ರಾಮ ಪಂಚಾಯತಿಗಳಿಗೆ ಭೇಟಿಮಾಡಿ ವಸೂಲು ಮಾಡಿಸಲು ಕ್ರಮವಹಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಿವಕುಮಾರ್, ಮುಖ್ಯ ಲೆಕ್ಕಾಧಿಕಾರಿ ಗಂಗಾಧರ್, ಮುಖ್ಯ ಯೋಜನಾಧಿಕಾರಿ ವೆಂಕಟಾಚಲಪತಿ, ಸಹಾಯಕ ಕಾರ್ಯದರ್ಶಿ ವೆಂಕಟೇಶಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಚಿತ್ರ ೦೪ ಕೆ.ಎಲ್.ಆರ್. ೦೧ : ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳ ಹಾಗೂ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಶಿವಕುಮಾರ್, ಮುಖ್ಯ ಲೆಕ್ಕಾಧಿಕಾರಿ ಗಂಗಾಧರ್ ಇದ್ದರು.