

ಶೃಂಗೇರಿ: ಮರ್ಕಲ್ ಗ್ರಾಪಂ ಅಭಿವೃದ್ಧಿಗೆ ಅಡ್ಡಗಾಲು ಆಗಿರುವ ಅಧ್ಯಕ್ಷ ಹಾಗೂ ಪಿಡಿಒ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ತಾಪಂ ಕಚೇರಿ ಎದುರು ಗ್ರಾಪಂ ಸದಸ್ಯರು ಸೋಮವಾರ ಧರಣಿ ನಡೆಸಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಶಾರದಾ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಪಂ ಸದಸ್ಯ ಕೆ.ಎಲ್.ನಟೇಶ್ ಮಾತನಾಡಿ, ಮರ್ಕಲ್ ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. 2024ನೇ ಸಾಲಿನ ಗ್ರಾಪಂನ 15ನೇ ಹಣಕಾಸು ಕಾಮಗಾರಿಗಳಿಗೆ ಎಡಿಎಂಗೆ ಸಹಿ ಹಾಕದಿರುವುದರಿಂದ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಸೂಕ್ತ ಪರಿಹಾರ ನೀಡುವ ಗ್ರಾಮಸಭೆಗಳು ನಡೆಯುತ್ತಿಲ್ಲ ಎಂದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಾಮಗಾರಿ ಪಟ್ಟಿ ಇನ್ನೂ ಮಾಡಿಲ್ಲ. ನರೇಗಾ ಯೋಜನೆಗಳೂ ಕಾರ್ಯರೂಪಕ್ಕೆ ಬಾರದ್ದರಿಂದ ಗ್ರಾಪಂ ವ್ಯಾಪ್ತಿಯಲ್ಲಿ ನಾವು ಕಾರ್ಯನಿರ್ವಹಿಸಲು ಅಸಾಧ್ಯವಾಗಿದೆ ಎಂದು ಹೇಳಿದರು.
ಗ್ರಾಪಂ ಸದಸ್ಯ ಪ್ರಶಾಂತ್ ಮಾತನಾಡಿ, ಗ್ರಾಪಂನಲ್ಲಿ ಕಾನೂನನ್ನು ಗಾಳಿಗೆ ತೂರಲಾಗಿದ್ದು ಅವ್ಯವಹಾರ ನಿರಂತರವಾಗಿ ನಡೆದುಕೊಂಡು ಬಂದಿದೆ. ಗ್ರಾಪಂನ ಜಮಾಬಂದಿ ಸಭೆ ನಡೆಸುತ್ತಿಲ್ಲ. ಘನತ್ಯಾಜ್ಯ ವಿಲೇವಾರಿ ವಾಹನಕ್ಕೆ ವಿಮೆ ಇಲ್ಲದಿರುವುದು, ಮಾಸಿಕ ಸಭೆ ಸರಿಯಾದ ಸಮಯದಲ್ಲಿ ನಡೆಯದಿರುವುದು, ಮರಳು ಸಾಗಣೆ ಕಾನೂನು ಬಾಹಿರವಾಗಿ ನಡೆಯುತ್ತಿರುವುದು ಒಟ್ಟಾರೆ ಗ್ರಾಪಂನಲ್ಲಿ ಆಡಳಿತ ಚುಕ್ಕಾಣಿ ಹಿಡಿದವರು ಮಾಡುವ ಕೆಲಸಗಳು ನಮಗೆ ಅಸಮಾಧಾನ ತಂದಿದೆ. ಈ ಕುರಿತು ತಾಪಂ ಇಒ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಜಿಪಂ ಸಿಇಒಗೆ ದೂರು ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು. ಗ್ರಾಪಂ ಸದಸ್ಯರಾದ ಶಿವಶಂಕರ್, ಸುರೇಖಾ ಕೃಷಮೂರ್ತಿ, ಸುರಭಿ, ಪ್ರಿಯಾ ಮಂಜುನಾಥ್ ಉಪಸ್ಥಿತರಿದ್ದರು.