

ಬಾಳೆಹೊನ್ನೂರು: ಭಾರತದ ಅಸ್ಮಿತೆ, ಪರಂಪರೆಗೆ ಗೋವು ಅಗತ್ಯವಾಗಿದ್ದು ಸನಾತನ ಧರ್ಮ ಗಟ್ಟಿಯಾಗಿ ಬೆಳೆಯಲು ಗೋವು ಅತ್ಯಂತ ಪ್ರಮುಖ ಎಂದು ಕಾಮಧೇನು ಗೋ ಸೇವಾ ಕೇಂದ್ರದ ನಾಗೇಶ್ ಆಂಗೀರಸ ಹೇಳಿದರು.
ದೇವಗೋಡು ನೀರ್ಕಟ್ಟು ಗ್ರಾಮದಲ್ಲಿ ಕಾಮಧೇನು ಗೋಸೇವಾ ಕೇಂದ್ರದಿಂದ ಆರಂಭಿಸಿರುವ ಗೋಶಾಲೆಯ ವಿಸ್ತರಣಾ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಗೋವಿದ್ದರೆ ಮಾತ್ರ ಭಾರತ ಉಳಿಯಲು ಸಾಧ್ಯ. ಧಾರ್ಮಿಕತೆಯನ್ನು ಹೊರತುಪಡಿಸಿ ಸಾಮಾಜಿಕವಾಗಿ ಗೋವಿನಿಂದ ಮಾತ್ರ ಭಾರತವನ್ನು ಕಟ್ಟಲು ಸಾಧ್ಯವಿದೆ. ಉಕ್ಕು, ಕಬ್ಬಿಣದಿಂದಲ್ಲ. ದೇಶಕ್ಕೆ ಮಾಹಿತಿ ತಂತ್ರಜ್ಞಾನ ಎಷ್ಟು ಮುಖ್ಯವೋ ಗೋವು ಮತ್ತು ಗೋಉತ್ಪನ್ನಗಳೂ ಅಷ್ಟೇ ಪ್ರಮುಖ. ನಮ್ಮ ಗೋಸೇವಾ ಕೇಂದ್ರದಿಂದ ಗೋವಿನ ಚಳವಳಿ ಹುಟ್ಟುಹಾಕಲಾಗಿದೆ. ಆದರೆ ಸರ್ಕಾರದ ಆದ್ಯತೆ ಗೋವು ಸಾಕಣೆದಾರರಿಗೆ ಇಲ್ಲ ಎಂಬುದು ವಿಷಾದನೀಯ. ಹಸುವಿನ ಹಾಲು ಕರೆಯುವ ಯಂತ್ರವನ್ನು ಜಾಮೀನು ನೀಡಿದರೂ ಸರ್ಕಾರ ಸಾಲವಾಗಿ ನೀಡುತ್ತಿಲ್ಲ ಎಂದರು.
ಸಮಾಜದಲ್ಲಿ ಇಂಜಿನಿಯರ್, ಡಾಕ್ಟರ್, ವಿಜ್ಞಾನಿ ಮುಂತಾದ ಹುದ್ದೆಯಲ್ಲಿರುವ ಯುವಜನರು ಗೋಸಾಕಣೆಗೆ ಮುಂದೆ ಬಂದಲ್ಲಿ ಅದ್ಭುತ ಕ್ರಾಂತಿ ಮಾಡಬಹುದು. ಗೋಸಾಕಣೆ ಹೊರೆ ಎಂದು ತಿಳಿಯದೆ ಕ್ರಾಂತಿ ಮಾಡಲು ಬರಬೇಕು. ಆಗ ಸಂಶೋಧನೆಗಳು ನಡೆಯಬಹುದು ಎಂದು ತಿಳಿಸಿದರು. ಕರ್ಣಾಟಕ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಜೆ.ಆರ್.ನಾಗಭೂಷಣ್ ರಾವ್ ಮಾತನಾಡಿ, ಗೋಸೇವೆಯ ಮೂಲಕ ಕಾಮಧೇನು ಗೋಸೇವಾ ಟ್ರಸ್ಟ್ ಹಿಂದು ಧರ್ಮದ ಕೊಂಡಿಯನ್ನು ಬಲವಾಗಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಕೃಷಿಕರು ಒಂದೆರಡು ಗೋವುಗಳನ್ನು ಸಾಕಲು ಪ್ರಯಾಸಪಡುತ್ತಾರೆ. ಆದರೆ ಕಳೆದ ಹಲವು ವರ್ಷಗಳಿಂದ ಆಂಗೀರಸ ಕುಟುಂಬಸ್ಥರು ನೂರಾರು ಗೋವುಗಳನ್ನು ಒಂದೇ ಸೂರಿನಡಿ ಸಾಕಿ ಸಲಹುತ್ತಿರುವುದು ಶ್ಲಾಘನೀಯ. ಇಂತಹ ಗೋಸೇವಾ ಕಾರ್ಯಗಳಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು. ಪ್ರಗತಿಪರ ರೈತ ಮಹಿಳೆ ಶಾಂತಾ ನಾಗಭೂಷಣ, ಗೋಸೇವಾ ಕೇಂದ್ರದ ಸುಮಾ ನಾಗೇಶ್, ಲಲಿತಾ ಆಂಗೀರಸ ಮತ್ತಿತರರಿದ್ದರು.