

ಮೂಡಿಗೆರೆ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಲಯನ್ಸ್ ವೃತ್ತದಲ್ಲಿ ಆಗಾಗ ನಡೆಯುತ್ತಿರುವ ಪ್ರತಿಭಟನೆ ಮತ್ತು ಬಹಿರಂಗ ಕಾರ್ಯಕ್ರಮ ನಡೆಸುತ್ತಿರುವುದರಿಂದ ಈ ವೃತ್ತ ವಿವಾದಕ್ಕೆ ಕಾರಣವಾಗಿದೆ.
ಜ.3 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿಪ್ರತಿಷ್ಠಾಪಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಲಯನ್ಸ್ ವೃತ್ತದಲ್ಲಿ ಆಗಾಗ ಪ್ರತಿಭಟನೆಗಳು ನಡೆಯುತ್ತಿರುತ್ತದೆ. ಟ್ರಾಫಿಕ್ ಪೊಲೀಸರು ನಿಂತು ವಾಹನಗಳನ್ನು ನಿಯಂತ್ರಿಸಬೇಕಾದ ಚೌಕಿಯನ್ನು ಪ್ರತಿಭಟನಾಕಾರರು ವೇದಿಕೆಯಾಗಿ ಮಾಡಿಕೊಂಡು ಗಂಟೆಗಟ್ಟಲೆ ಭಾಷಣ ಮಾಡುವುದು ಮಾಮೂಲಿಯಾಗಿದೆ.
ಪಕ್ಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸುವುದು ಹಿಂದಿನಿಂದಲೂ ನಿರಂತರವಾಗಿ ಸಾಗಿ ಬಂದಿದೆ. 15 ವರ್ಷದಿಂದ ಕೆಲ ಸಂಘ, ಸಂಸ್ಥೆಗಳು ಲಯನ್ಸ್ ವೃತ್ತದಲ್ಲಿ ಆಗಾಗ ವೇದಿಕೆ ನಿರ್ಮಿಸಿ ರಸ್ತೆಯಲ್ಲಿ ಕುರ್ಚಿಗಳನ್ನು ಹಾಕಿ ಜನರನ್ನು ಸೇರಿಸಿ ಬಹಿರಂಗ ಸಭೆ ಸಮಾರಂಭಗಳನ್ನು ಆಯೋಜಿಸುತ್ತಿದ್ದಾರೆ. ಇದರಿಂದ ಕಡೂರು-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ, ಗೆಂಡೆಹಳ್ಳಿ-ಬೇಲೂರು ರಾಜ್ಯಹೆದ್ದಾರಿ, ತತ್ಕೊಳ ರಸ್ತೆ, ಹೆಸಗಲ್ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ವಾಹನ ಸಂಚರಿಸಲು ಹರಸಾಹಸ ಪಡುವಂತಾಗಿದೆ.
ಲಯನ್ಸ್ ವೃತ್ತದ ಪ್ರತಿಭಟನೆ, ಸಭಾ ಕಾರ್ಯಕ್ರಮಗಳಿಗೆ ಅನುಮತಿ ನೀಡುತ್ತಿರುವುದರಿಂದ ಪಕ್ಕದಲ್ಲಿರುವ ಪ್ರವಾಸಿ ಮಂದಿರ, ಪಟ್ಟಣ ಪಂಚಾಯತಿ, ಮೆಸ್ಕಾಂ ಕಚೇರಿ ಇದೆ. ನಿರಂತರ ಕಾರ್ಯಕ್ರಮಗಳಿಂದ ಇಲ್ಲಿಗೆ ಯಾರೊಬ್ಬರೂ ಸುಳಿಯದಂತಾಗುತ್ತಿದೆ. ಬಸ್‌ನಿಲ್ದಾಣದ ಒಳಗೆ ಮತ್ತು ಹೊರಗೆ ಬಸ್‌ಗಳು ಓಡಾಡಲು ತೊಂದರೆಯಾಗುತ್ತದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವಾಹನಗಳು ಗಂಟೆ ಗಟ್ಟಲೆ ಸಾಲುಗಟ್ಟಿ ನಿಲ್ಲುವಂತಾಗಿದೆ. ಲಯನ್ಸ್ ವೃತ್ತ ವ್ಯಾಪ್ತಿಯಲ್ಲಿ ವಿವಿಧ ರಸ್ತೆಗಳಲ್ಲಿ ಎರಡು ಎಕರೆಯಷ್ಟು ಸ್ಥಳವಿದೆ. ಗೆಂಡೆಹಳ್ಳಿ ರಸ್ತೆಗೆ ಹೊಂದಿಕೊಂಡು ಟ್ಯಾಕ್ಸಿ ಸ್ಟಾೃಂಡ್ ಮತ್ತು ಪಕ್ಕದಲ್ಲಿ ಮ್ಯಾಕ್ಸಿಕ್ಯಾಬ್ ನಿಲ್ದಾಣವಿದೆ. ಬಹಿರಂಗ ಕಾರ್ಯಕ್ರಮಗಳು ನಡೆಯುವಾಗ ಎಲ್ಲ ವಾಹನಗಳನ್ನು ತೆರವುಗೊಳಿಸಲಾಗುತ್ತದೆ. ಪಕ್ಕದಲ್ಲಿ ರಂಗಮಂದಿರವಿದ್ದು, ಅಲ್ಲಿ ಸಭೆ ಸಮಾರಂಭಗಳನ್ನು ನಡೆಸಲು ಅವಕಾಶವಿದ್ದರೂ ಆಯೋಜಕರು ರಂಗಮಂದಿರವನ್ನು ಬಿಟ್ಟು ರಸ್ತೆಯಲ್ಲಿ ಕಾರ್ಯಕ್ರಮ ನಡೆಸುತ್ತಿರುವುದರಿಂದ ಗೊಂದಲ ಉಂಟಾಗಿದೆ.