ಗೂಗಲ್ ಲಾಗಿನ್ ಹೊಸ ನಿಯಮ ನಾಳೆಯಿಂದ ಚಾಲ್ತಿಗೆ; ಒಟಿಪಿ ನಮೂದು ಮಾಡುವುದು ಕಡ್ಡಾಯ

Google 28 may 20
Published on

ನವದೆಹಲಿ: ಗೂಗಲ್ ಬಳಕೆದಾರರು ತಮ್ಮ ಖಾತೆಗೆ ಲಾಗಿನ್ ಆಗಬೇಕಾದರೆ ಇನ್ನು ಎರಡು ಸ್ತರದ ಪರಿಶೀಲನೆ ಪ್ರಕ್ರಿಯೆಗೆ ಒಳಗಾಗಬೇಕು. ಇದುವರೆಗೆ ಐಚ್ಛಿಕವಾಗಿದ್ದ ಈ ಪ್ರಕ್ರಿಯೆ ನಾಳೆಯಿಂದ ಎಲ್ಲರಿಗೂ ಅನ್ವಯವಾಗುವಂತೆ ಚಾಲ್ತಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ. ಈ ವರ್ಷ ಮೇ ತಿಂಗಳಲ್ಲಿ ಈ ಕುರಿತು ಪ್ರಕಟಣೆ ಹೊರಡಿಸಿದ್ದ ಗೂಗಲ್, ಡಿಸೆಂಬರ್ ವೇಳೆಗೆ ಗೂಗಲ್ ಖಾತೆ ಲಾಗಿನ್ ಪ್ರಕ್ರಿಯೆ ಬದಲಾಗಲಿದೆ. ಎಲ್ಲ ಬಳಕೆದಾರರು ಎರಡು ಸ್ತರದ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ ಎಂದು ಹೇಳಿತ್ತು.

ಈ ಬದಲಾವಣೆಯು ಎಲ್ಲರ ಖಾತೆಗೂ ಹೆಚ್ಚುವರಿ ರಕ್ಷಣೆಯ ಪದರವನ್ನು ಒದಗಿಸುತ್ತದೆ. ಈ ವರ್ಷ ಕೊನೆಗೆ ಹೆಚ್ಚುವರಿಯಾಗಿ 15 ಕೋಟಿ ಬಳಕೆದಾರರು ಆಟೋ-ಎನ್​ರೋಲ್ ಆಗುವುದಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ. ಇದೇ ರೀತಿ 20 ಲಕ್ಷ ಯೂಟ್ಯೂಬ್ ಕ್ರಿಯೇಟರ್​ಗಳಿಗೂ ಇದೇ ರೀತಿ ಅವಕಾಶ ಮಾಡಿಕೊಡಲಾಗುತ್ತಿದೆ. ಈ ಆಯ್ಕೆಯನ್ನು ಚಾಲನೆಗೊಳಿಸಿದರೆ, ಗೂಗಲ್ ಖಾತೆಗೆ ಲಾಗಿನ್ ಆಗಲು ಪಾಸ್​ವರ್ಡ್ ಹಾಕಿದ ಕೂಡಲೇ ಬಳಕೆದಾರರ ಮೊಬೈಲ್​ಗೆ ಒಂದು ಎಸ್​ಎಂಎಸ್ ರವಾನೆಯಾಗುತ್ತದೆ. ಅದರಲ್ಲಿ ಇರುವ ಒಟಿಪಿಯನ್ನು ಗೂಗಲ್ ಖಾತೆ ಲಾಗಿನ್​ಗೆ ಬಳಸಬೇಕು. ಇದು ಪ್ರತಿ ಸಲ ಲಾಗಿನ್ ಆಗುವಾಗಲೂ ಅನ್ವಯವಾಗುತ್ತಿದ್ದು, ಪ್ರತಿ ಸಲವೂ ಒಟಿಪಿ ನಮೂದಿಸಬೇಕು ಎಂದು ಗೂಗಲ್ ಅಧಿಕೃತ ಬ್ಲಾಗ್ ಪೋಸ್ಟ್​ನಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net