ಗುಳಿಗೆ ಗೊಬ್ಬರ ಸಾವಯವ ಕೃಷಿಗೆ ಪೂರಕ

16 TKE 1 (AJP)
ಅಜ್ಜಂಪುರ ತಾಲೂಕಿನ ಕಾಟಿಗನೆರೆ ಗ್ರಾಮದಲ್ಲಿ ಬೇವು ಮಿಶ್ರಿತ ಗುಳಿಗೆ ಗೊಬ್ಬರ ಘಟಕವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್ ಉದ್ಘಾಟಿಸಿದರು. ಬಿ.ಎಸ್.ಮಹೇಶ್ ಹುಲ್ಕುಳಿ, ಕೆ.ಆರ್.ಆನಂದಪ್ಪ, ಟಿ.ಎಲ್.ರಮೇಶ್, ಡಾ. ಆರ್.ಸಿ.ಜಗದೀಶ, ಸಿ.ಶಿವಪ್ರಸಾದ್ ಇತರರಿದ್ದರು.
Published on

ತರೀಕೆರೆ: ಬೇವು ಮಿಶ್ರಿತ ಗುಳಿಗೆ ಗೊಬ್ಬರ ಅತ್ಯಂತ ಪೋಷಕಾಂಶದಿಂದ ಕೂಡಿರುವುದು ಮಾತ್ರವಲ್ಲ, ಸಾವಯವ ಕೃಷಿಗೆ ಪೂರಕವಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್ ಹೇಳಿದರು.

ಅಜ್ಜಂಪುರ ತಾಲೂಕಿನ ಕಾಟಿಗನೆರೆ ಗ್ರಾಮದಲ್ಲಿ ಭಾನುವಾರ ಬೇವು ಮಿಶ್ರಿತ ಗುಳಿಗೆ ಗೊಬ್ಬರ ಘಟಕ ಉದ್ಘಾಟಿಸಿ ಮಾತನಾಡಿ, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಂದ ಭೂಮಿಯ ಲವತ್ತತೆ ಹಾಳಾಗುತ್ತಿರುವುದು ಮಾತ್ರವಲ್ಲ, ಉತ್ಪಾದಿಸುತ್ತಿರುವ ಆಹಾರ ಪದಾರ್ಥಗಳು ವಿಷಕಾರಿಯಾಗುತ್ತಿವೆ. ರೈತರು ಆಧುನಿಕ ಕೃಷಿ ಪದ್ಧತಿಯಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುವುದನ್ನು ಬಿಟ್ಟು ಬೇವು ಮಿಶ್ರಿತ ಗುಳಿಗೆ ಗೊಬ್ಬರ ಬಳಸಿ ಕೃಷಿ ಮಾಡಬೇಕು. ಈ ಮೂಲಕ ಉತ್ತಮ ಇಳುವರಿ ಪಡೆದುಕೊಳ್ಳಬೇಕು ಎಂದರು.

ಮ್ಯಾಮ್ಕೋಸ್ ಉಪಾಧ್ಯಕ್ಷ ಬಿ.ಎಸ್.ಮಹೇಶ್ ಹುಲ್ಕುಳಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಬೇವು ಮಿಶ್ರಿತ ಗುಳಿಗೆ ಗೊಬ್ಬರದ ಬಳಕೆ ಹೆಚ್ಚಾಗುತ್ತಿದೆ. ಗೊಬ್ಬರದ ಬಗ್ಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಕಿರು ಸಂವಾದದಲ್ಲಿ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ರೈತರು ಕೃಷಿ ಸಂಬಂಧಿತ ವಿಷಯಗಳ ಕುರಿತು ಚರ್ಚಿಸಿ ಕೃಷಿ ಪರಿಣಿತರಿಂದ ಸಲಹೆ ಪಡೆದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್.ಆನಂದಪ್ಪ, ಮ್ಯಾಮ್ಕೋಸ್ ನಿರ್ದೇಶಕ ಟಿ.ಎಲ್.ರಮೇಶ್, ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಕುಲಪತಿ ಡಾ. ಆರ್.ಸಿ.ಜಗದೀಶ, ಉದ್ಯಮಿ ಸಿ.ಶಿವಪ್ರಸಾದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net