

ದೊಡ್ಡ ದೊಡ್ಡ ಕಟ್ಟಡ, ರಸ್ತೆ ಮೊದಲಾದವುಗಳ ನಿರ್ಮಾಣದ ವೇಳೆ ಮಣ್ಣು, ಬಳಸುವ ವಸ್ತುಗಳ ಗುಣಮಟ್ಟ ಪರೀಕ್ಷೆ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಅಂತಹ ಸುಮಾರು 50 ಸಾಮಗ್ರಿಗಳ ಪರೀಕ್ಷೆ ನಡೆಸಿ ಪ್ರಮಾಣ ಪತ್ರ ನೀಡಲು ಎಟಿಎಂಇ ಇಂಜಿನಿಯರಿಂಗ್ ಕಾಲೇಜಿಗೆ ಮಾನ್ಯತೆ ದೊರೆತಿದೆ ಎಂದು ಪ್ರಾಂಶುಪಾಲ ಡಾ.ಎಲ್.ಬಸವರಾಜು ತಿಳಿಸಿದರು.
ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿದಂತೆ ಮಾನ್ಯತೆ ನೀಡುವ ರಾಷ್ಟ್ರೀಯ ಸಂಸ್ಥೆಯಿಂದ ನಮ್ಮ ಕಾಲೇಜು ಪ್ರಮಾಣಪತ್ರ ಪಡೆದಿದೆ. ಹೀಗಾಗಿ ಮುಡಾ, ಖಾಸಗಿ, ಪಿಡಬ್ಲುೃಡಿ ಮೊದಲಾದ ಇಲಾಖೆಗಳು ಮಾತ್ರವಲ್ಲದೆ ಪಿಎಚ್.ಡಿ ಅಧ್ಯಯನದಲ್ಲಿ ತೊಡಗಿರುವವರು ಸಹ ತಮಗೆ ಅಗತ್ಯ ಪ್ರಮಾಣ ಪತ್ರವನ್ನು ನಮ್ಮ ಕಾಲೇಜಿನಲ್ಲಿ ನಡೆಯುವ ಪರೀಕ್ಷೆಯಲ್ಲಿ ಪಾಲ್ಗೊಂಡು ಪಡೆಯಬಹುದಾಗಿದೆ. ಇದಕ್ಕಾಗಿ ಅಲ್ಪ ಪ್ರಮಾಣ ನಿಗದಿತ ಶುಲ್ಕ ಮಾತ್ರ ಪಾವತಿಸಬೇಕಾಗುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಸಾಮಾನ್ಯವಾಗಿದೆ. ಈ ವೇಳೆ ಮಣ್ಣು ಹಾಗೂ ಬಳಸುವ ಇತರ ಪದಾರ್ಥಗಳ ಗುಣಮಟ್ಟ ಕಳಪೆ ಆಗಿದ್ದರೆ ಅವು ಕುಸಿಯಲಿವೆ. ಜತೆಗೆ ರಸ್ತೆಗಳ ನಿರ್ಮಾಣದ ವೇಳೆ ಇದನ್ನು ಗಮನಿಸದಿದ್ದರೆ ರಸ್ತೆ ಬೇಗ ಹಾಳಾಗುತ್ತದೆ. ಹೀಗಾಗಿ ಈ ರೀತಿಯ ಪರೀಕ್ಷೆಗಳು ಅನಿವಾರ್ಯ. ಆದ್ದರಿಂದ ಅಗತ್ಯವುಳ್ಳವರು ಈ ಸೌಲಭ್ಯ ಬಳಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.
ಉಪನ್ಯಾಸಕರಾದ ಚಂದ್ರಶೇಖರ್, ಪ್ರೊ.ಮನು ವಿಜಯ್, ಡಾ.ಸಚ್ಚಿದಾನಂದಮೂರ್ತಿ ಇದ್ದರು.