ಗುಡ್ಡದ ಮಲ್ಲೇಶ್ವರ ಸ್ವಾಮಿ ಜಾತ್ರೋತ್ಸವ

18 HHR P 05 jatre)
ಮಲ್ಲಾಪುರದಲ್ಲಿ ವಿಜೃಂಭಣೆಯಿಂದ ನೆರವೇರಿದ ಶ್ರೀ ಗುಡ್ಡದ ಮಲ್ಲೇಶ್ವರ ಸ್ವಾಮಿ ಕೆಂಡಾರ್ಚನೆ.
Published on

ಹೊಳೆಹೊನ್ನೂರು: ಭದ್ರಾವತಿ ತಾಲೂಕಿನ ಮಲ್ಲಾಪುರದ ಶ್ರೀ ಗುಡ್ಡದ ಮಲ್ಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.

ಸುಡುವ ಬಿಸಿಲನ್ನು ಲೆಕ್ಕಿಸದೆ ಭಕ್ತರು, ಮಹಿಳೆಯರು, ಮಕ್ಕಳು ಕೆಂಡ ಹಾಯ್ದು ಮಲ್ಲೇಶ್ವರ ಸ್ವಾಮಿಗೆ ಭಕ್ತಿ ಸಮರ್ಪಿಸಿದರು. ಮಹಿಳೆಯರು ಬಾಯಿಗೆ ಬೀಗ ಚುಚ್ಚಿಕೊಂಡು ಸ್ವಾಮಿಗೆ ಹರಕೆ ತೀರಿಸಿದರು. ಹರಕೆ ಕಟ್ಟಿಕೊಂಡವರು ಸ್ವಾಮಿ ಸನ್ನಿಧಾನದಲ್ಲಿ ಮಕ್ಕಳ ಜವಳ ತೆಗೆಸಿದರು.

ರಾತ್ರಿ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರು ವಿವಿಧ ಫಲ-ಪುಷ್ಪಗಳಿಂದ ವಿಶೇಷವಾಗಿ ಸಿಂಗರಿಸಲಾಗಿದ್ದ ರಥದಲ್ಲಿ ವಿರಾಜಮಾನವಾಗಿ ಕುಳಿತಿದ್ದ ಗುಡ್ಡದ ಮಲ್ಲೇಶ್ವರ ಸ್ವಾಮಿಯನ್ನು ಕಣ್ತುಂಬಿಕೊಂಡರು. ತಮ್ಮ ಕೋರಿಕೆಯನ್ನು ಬಾಳೆ ಹಣ್ಣಿನ ಮೇಲೆ ಬರೆದು ರಥಕ್ಕೆ ಎರಚಿದರು. ಮಹಿಳೆಯರು ಪಾರ್ವತಿ ದೇವಿಗೆ ಮಡಿಲಕ್ಕಿ ತುಂಬಿಸಿ ಹಣ್ಣು ಕಾಯಿ ಮಾಡಿಸಿದರು. ಜಾತ್ರಾ ಮಹೋತ್ಸವಕ್ಕೆ ಅಕ್ಕಪಕ್ಕದ ಹಳ್ಳಿಗಳಿಂದ ಪಾನಕದ ಗಾಡಿಗಳನ್ನು ಕಟ್ಟಿಕೊಂಡು ಆಗಮಿಸಿದ ಭಕ್ತರು ಪಾನಕ, ಮಜ್ಜಿಗೆ ಹಂಚಿದರು. ಶಿವಮೊಗ್ಗ ಅಂಧರ ಶಾಲೆಯ ಮಕ್ಕಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net