ಗುಂಡ್ವಾನಿ ಕಾಡಿನಲ್ಲಿ ಒಂಟಿ ಸಲಗ ಸೆರೆ

6 nrp 2 elephant
ಸೆರೆ ಸಿಕ್ಕ ಪುಂಡಾನೆ
Published on

ಎನ್.ಆರ್.ಪುರ: ಕಳೆದ ಒಂದೂವರೆ ವರ್ಷದಿಂದ ಕಾನೂರು ಗ್ರಾಪಂಯ ಸಂಕ್ಸೆ, ಕಾನೂರು ಗ್ರಾಮ, ಬಾಳೆ ಗ್ರಾಪಂಯ ವಗ್ಗಡೆ ಸುತ್ತಮುತ್ತ ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದ್ದ ತುಂಟ ಒಂಟಿ ಸಲಗವನ್ನು ಅರಣ್ಯ ಇಲಾಖೆಯವರು ಸೋಮವಾರ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.

ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ಇ.ಶಿವಶಂಕರ್ ಮಾರ್ಗದರ್ಶನದಲ್ಲಿ ಒಂಟಿ ಸಲಗವನ್ನು ಹಿಡಿಯಲು ಶಿವಮೊಗ್ಗದ ಸಕ್ರೆಬೈಲಿನ 3 ಆನೆ ಹಾಗೂ ಕುಶಾಲಪುರದ ದುಬಾರೆಯ 3 ಆನೆಗಳನ್ನು ಕರೆಸಲಾಗಿತ್ತು. ಎನ್.ಆರ್.ಪುರ ಹಾಗೂ ಆಲ್ದಾರ ಎಲಿಫೆಂಟ್ ಟಾಸ್ಕ್‌ಪೋರ್ಸ್ ಸಿಬ್ಬಂದಿ, ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ ಸೇರಿ 100 ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಶನಿವಾರ ಸಂಜೆಯೇ 6 ಆನೆಗಳು ಗುಡ್ಡೇಹಳ್ಳದ ಸರ್ಕಾರಿ ಶಾಲೆಯ ಮೈದಾನಕ್ಕೆ ಬಂದು ವಾಸ್ತವ್ಯ ಹೂಡಿದ್ದವು. ಭಾನುವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು. ಆದರೆ ಒಂಟಿ ಸಲಗವು ಹೊಳೆಕೊಪ್ಪ ಸಮೀಪದ ಕುರಿಗುಡ್ಡ ಏರಿ ಬಿಟ್ಟಿದ್ದರಿಂದ ಅಲ್ಲಿ ಕಾರ್ಯಾಚರಣೆ ಮಾಡಲು ಸಾಧ್ಯವಾಗದೆ ಇರುವುದರಿಂದ ಭಾನುವಾರ ಸಂಜೆ 4 ಗಂಟೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಸೋಮವಾರ ಮುಂಜಾನೆ 4 ಗಂಟೆಯಿಂದಲೇ ಅರಣ್ಯ ಸಿಬ್ಬಂದಿ, ಸಾಕಿದ ಆನೆಗಳು ಒಟ್ಟಾಗಿ ಒಂಟಿ ಸಲಗ ಇರುವ ಜಾಗ ಹುಡುಕಿ ಸಂಕ್ಸೆ ಗ್ರಾಮದ ಗುಂಡ್ವಾನಿ ಸಮೀಪದ ಕಾಡಿನಲ್ಲಿ ಕಾರ್ಯಾಚರಣೆ ನಡೆಸಿದರು. ಬೆಳಗ್ಗೆ 9ಕ್ಕೆ ಒಂಟಿ ಸಲಗ ಇರುವ ಜಾಗದ ಸುತ್ತಮುತ್ತಲಿನ ಜಾಗದಲ್ಲಿ ಸಾಕಿದ ಆನೆಗಳನ್ನು ತಂದು ನಿಲ್ಲಿಸಲಾಯಿತು. ನಂತರ ಮಡಿಕೇರಿಯಿಂದ ಬಂದಿದ್ದ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಮಸೀದ್ ಅವರ ನೇತೃತ್ವದಲ್ಲಿ ದುಬಾರೆಯಿಂದ ಬಂದಿದ್ದ ಶಾರ್ಪ ಶೂಟರ್ ರಂಜನ್ ಅವರು ಒಂಟಿ ಸಲಗಕ್ಕೆ ಔಷಧಿ ಸಿಂಪರಣೆ ಮಾಡಲು ಯಶಸ್ವಿಯಾದರು.

ಔಷಧಿ ಪ್ರಭಾವದಿಂದ ಮಂಪರಿಗೆ ಹೋದ ಒಂಟಿ ಸಲಗದ ಕಾಲುಗಳನ್ನು ಹಗ್ಗದಿಂದ ಕಟ್ಟಿ ಲಾರಿ ಬರುವ ರಸ್ತೆಯವರೆಗೆ ಸಾಕಿದ ಆನೆಗಳ ಸಹಾಯದಿಂದ ಕರೆ ತರಲಾಯಿತು. ನಂತರ ಕ್ರೇನ್ ಸಹಾಯದಿಂದ ಕಾಲು ಕಟ್ಟಿದ ಒಂಟಿ ಸಲಗವನ್ನು ಎತ್ತಿ ಲಾರಿಗೆ ಹತ್ತಿಸಲಾಯಿತು. ಒಂಟಿ ಸಲಗವನ್ನು ಶೃಂಗೇರಿ ವಲಯ ಅರಣ್ಯಾಧಿಕಾರಿ ಮಧುಕರ ನೇತೃತ್ವದಲ್ಲಿ ಕುಶಾಲಪುರದ ದುಬಾರೆ ಕ್ಯಾಂಪಿಗೆ ಕಳಿಸಲಾಯಿತು.

ಒಂಟಿ ಸಲಗ ಹಿಡಿಯುವ ಕಾರ್ಯಾಚರಣೆಯಲ್ಲಿ ಕೊಪ್ಪ ಎಸಿಎಫ್ ಬಾಬು ರಾಜೇಂದ್ರ ಪ್ರಸಾದ್, ಬಾಳೆಹೊನ್ನೂರು ಎಸಿಎಫ್ ಮೋಹನ್ ಕುಮಾರ್, ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಎಂ.ಪಿ.ಆದರ್ಶ, ಎನ್.ಆರ್.ಪುರ ವಲಯ ಅರಣ್ಯಾಧಿಕಾರಿ ಪ್ರವೀಣ್, ಕುದುರೆಗುಂಡಿ ಉಪ ವಲಯ ಅರಣ್ಯಾಧಿಕಾರಿ ರಂಗನಾಥ ಅತಾಲಟಿ, ಕಾನೂರು ಗಸ್ತು ಅರಣ್ಯ ಪಾಲಕ ಮಂಜುನಾಥ ಕುಲಾಲ್ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net