

ಬೈಲಕುಪ್ಪೆ: ಇಲ್ಲಿನ ಟಿಬೆಟಿಯನ್ ಒಂದನೇ ಕ್ಯಾಂಪಿನಲ್ಲಿ ಗಾಂಜಾ ಮಾರುತ್ತಿದ್ದ ಐವರು ಆರೋಪಿಗಳನ್ನು ಮಂಗಳವಾರ ಬೈಲಕುಪ್ಪೆ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ತಿಳಿಸಿದರು.
ಒಡಿಸ್ಸಾ ರಾಜ್ಯದ ವಿಕ್ರಂ ನಾಯಕ್ (25), ಕೊಡಗು ಜಿಲ್ಲೆ ಕುಶಾಲನಗರದ ನಯನ್ ದೀಪ್ (28), ಮಡಿಕೇರಿಯ ಜಂಶಿರ್(26), ಪಿರಿಯಾಪಟ್ಟಣ ತಾಲೂಕಿನ ಗುಡ್ಡೆನಹಳ್ಳಿ ಗ್ರಾಮದ ಭರತ್ ಕುಮಾರ್ (30), ಹಲನಹಳ್ಳಿ ಗ್ರಾಮದ ಅನಿಲ್ ಕುಮಾರ್ (24) ಬಂಧಿತರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಐವರು ಆರೋಪಿಗಳು ಕಾರಿನಲ್ಲಿ 30.1 ಕೆಜಿ ಗಾಂಜಾ ಇಟ್ಟುಕೊಂಡು ಟಿಬೇಟಿಯನ್ ಒಂದನೇ ಕ್ಯಾಂಪ್‌ನಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ನಮ್ಮ ಬೈಲಕುಪ್ಪೆ ಪಿಎಸ್‌ಐ ಅಜಯ್ ಕುಮಾರ್ ಮತ್ತು ತಂಡದವರು ಮಾಲು ಸಮೇತ ಐದು ಜನರನ್ನು ಬಂಧಿಸಿದ್ದಾರೆ ಎಂದರು.
ಆರೋಪಿಗಳನ್ನು ಪಿರಿಯಾಪಟ್ಟಣದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಮಾದಕ ವಸ್ತುಗಳ ಬಗ್ಗೆ ಅಭಿಯಾನ ಹಮ್ಮಿಕೊಂಡು ಸಾರ್ವಜನಿಕರು ಹಾಗೂ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಡಿವೈಎಸ್ಪಿ ಮಹೇಶ್, ಸರ್ಕಲ್ ಇನ್‌ಸ್ಪೆಕ್ಟರ್ ಪ್ರಕಾಶ್, ಪಿಎಸ್‌ಐಗಳಾದ ಅಜಯ್‌ಕುಮಾರ್, ಮಹಾಲಿಂಗಯ್ಯ, ಎಎಸ್‌ಐಗಳಾದ ತಿಮ್ಮರಾಜ ನಾಯಕ, ವೆಂಕಟೇಶ್, ಸಿಬ್ಬಂದಿ ಕುಮಾರಸ್ವಾಮಿ, ವೀರೇಂದ್ರ ಕುಮಾರ್, ಮಹದೇವಪ್ಪ, ಮುದ್ದುರಾಜ್, ಚೇತನ್ ಕುಮಾರ್, ಸುರೇಶ್, ರಾಜೇಶ್, ಗೋಪಾಲ, ಪ್ರದೀಪ್, ತ್ರಿನೇಶ್ ಇತರರು ಇದ್ದರು.