ಗತಕಾಲದ ವೈಭವ ಸಾರುತಿದೆ ಬಂದಳಿಕೆ

7SRL01 story
ಶಿರಾಳಕೊಪ್ಪದ ಬಂದಳಿಕೆ ಗ್ರಾಮದಲ್ಲಿರುವ ತ್ರಿಮೂರ್ತಿ ನಾರಾಯಣ ದೇವಾಲಯ.
Published on

ಶಿರಾಳಕೊಪ್ಪ: ಸಾವಿರಾರು ವರ್ಷಗಳ ಕಾಲ ರಾಜಧಾನಿಯಾಗಿ ಮೆರೆದ ಬಂದಳಿಕೆ ಈಗ ನಿರ್ಜನವಾದ ಬೇಜಾರಖ್ ಗ್ರಾಮ. ಈಗ ಇಲ್ಲಿ ವಾಸ ಮಾಡಲು ಒಬ್ಬ ಮನುಷ್ಯನೂ ಇಲ್ಲ. 25 ಎಕರೆ ಪ್ರದೇಶದಲ್ಲಿರುವ ದೇವಾಲಯ ಸಮುಚ್ಚಯ ಹಾಳುಬಿದ್ದಿದ್ದು, ಗತವೈಭವವನ್ನು ಸಾರಿ ಹೇಳುತ್ತಿದೆ.

ಪ್ರಕೃತಿಯ ಹಸಿರುಹುಲ್ಲಿನ ಸೊಬಗು, ತಣ್ಣನೆಯ ವಾತಾವರಣ, ದೇವಾಲಯದ ಸಮುಚ್ಚಯ, ನಿಬ್ಬೆರಗಾಗುವ ಚರಿತ್ರೆ ಹೊಂದಿರುವ ಮಲೆನಾಡಿನ ಕಟ್ಟಕಡೆಯ ಗ್ರಾಮವಾದ ಬಂದಳಿಕೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಇದು ಕುಟುಂಬ ಸಹಿತ ಬಂದು ಕಾಲ ಕಳೆಯಲು ನಿರ್ಸಗವೇ ನೀಡಿದ ಕೊಡುಗೆ. ಒಂದು ದಿನದ ಪ್ರವಾಸಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ. ಬಂದಳಿಕೆಯು ಜಿಲ್ಲೆಯ ಗಡಿ ಗ್ರಾಮವಾಗಿದ್ದು ಬಯಲು ಸೀಮೆಯ ಹೆಬ್ಬಾಗಿಲಾಗಿದೆ.

ಅತ್ಯುತ್ತಮ ತಾಣ: ಹಸಿರು ಹುಲ್ಲಿನ ನಡುವೆ ಇರುವ ಈ ಗ್ರಾಮವು ಛಾಯಾಗ್ರಹಣ ಪ್ರಿಯರು ಮತ್ತು ನೈಸರ್ಗಿಕ ಶಾಂತಿ ಹುಡುಕುವವರಿಗೆ ಆಕರ್ಷಣೆಯ ತಾಣವಾಗಿದೆ. ಈ ಹುಲ್ಲುಗಾವಲಿನ ಮೇಲೆ ಬೀಳುವ ಮಳೆಯ ಹನಿಗಳು ಧರೆಗೆ ಮುತ್ತಿನ ಹಾರ ಪೊಣಿಸಿದಂತೆ ಕಾಣುತ್ತದೆ. ಕುಟುಂಬದೊಂದಿಗೆ ಈ ಸ್ಥಳಕ್ಕೆ ಭೇಟಿ ನೀಡುವುದು ಒಂದು ಅಪರೂಪದ ಅನುಭವ ನೀಡಲಿದೆ. ಮಲೆನಾಡಿನ ಸೊಬಗನ್ನು ಅನುಭವಿಸಲು ಮತ್ತು ಇತಿಹಾಸದ ಪುಟಗಳನ್ನು ಓದಲು ಬಂದಳಿಕೆ ಗ್ರಾಮ ಅತ್ಯುತ್ತಮ ತಾಣ.

ಬಂದಳಿಕೆ ದೇವಸ್ಥಾನದ ಸಮುಚ್ಚಯ ಪ್ರವೇಶಿಸುತ್ತಿದಂತೆ ತ್ರಿಮೂರ್ತಿ ನಾರಾಯಣ ದೇವಾಲಯದ ಆಕರ್ಷಕ ವಿನ್ಯಾಸವನ್ನು ಕಣ್ತುಂಬಿಕೊಳ್ಳಬಹುದು. ಇದು ತ್ರಿಕುಟಾಚಲ ಶೈಲಿಯ ದೇವಸ್ಥಾನವಾಗಿದ್ದು 3 ಶಿಖರ ಹಾಗೂ 3 ಸುಕನಾಸಿಯಿದ್ದು ಪಶ್ಚಿಮ ಸುಕನಾಸಿಯಲ್ಲಿನ ಸಿಂಹ ಲಲಾಟ, ಲಲಾಟದ ಸುತ್ತಲು ಸೂಕ್ಷ್ಮವಾಗಿ ಕೆತ್ತಲಾಗಿರುವ ಶಿಲ್ಪದ ಲತೆಗಳು ಮನಮೋಹಕ. ಈ ದೇವಸ್ಥಾನವನ್ನು ಕ್ರಿ.ಶ. 1160ರ ಅವಧಿಯಲ್ಲಿ ಕಲ್ಯಾಣಿ ಚಾಲುಕ್ಯರು ನಿರ್ಮಾಣ ಮಾಡಿದ್ದಾರೆ ಎಂದು ಉಲ್ಲೇಖವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net