ಗಂಗಾ ಗ್ಲಾಡಿಯೇಟರ್ಸ್‌ ಜೆಪಿಎಲ್ ಚಾಂಪಿಯನ್ಸ್

25bhr 3 sports
ಬಾಳೆಹೊನ್ನೂರಿನ ಜೇಸಿಐ ಸಂಸ್ಥೆ ಆಯೋಜಿಸಿದ್ದ ಜೇಸಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ ಗಂಗಾ ಗ್ಲಾಡಿಯೇಟರ್ಸ್‌ ತಂಡ ಅತಿಥಿಗಳಿಂದ ಬಹುಮಾನ ಸ್ವೀಕರಿಸಿತು.
Published on

ಬಾಳೆಹೊನ್ನೂರು: ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಆಯೋಜಿಸಿದ್ದ ಜೇಸಿ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಿ.ಸಿ.ಸಂತೋಷ್‌ಕುಮಾರ್ ನೇತೃತ್ವದ ಗಂಗಾ ಗ್ಲಾಡಿಯೇಟರ್ಸ್‌ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಸವಿನ್ ಹುಯಿಗೆರೆ ನೇತೃತ್ವದ ಎಸ್‌ಕೆಪಿ ಪ್ಯಾಂಥರ್ಸ್‌ ತಂಡ ರನ್ನರ್ ಅಪ್ ಸ್ಥಾನ ಪಡೆದಿದೆ. 4 ಓವರ್‌ಗೆ ನಡೆದ ಫೈನಲ್ ಪಂದ್ಯಾವಳಿಯಲ್ಲಿ ಎಸ್‌ಕೆಪಿ ಪ್ಯಾಂಥರ್ಸ್‌ 5 ವಿಕೆಟ್ ನಷ್ಟಕ್ಕೆ 24 ರನ್ ಕಲೆ ಹಾಕಿತು. ಬಳಿಕ ಬ್ಯಾಟಿಂಗ್ ಮಾಡಿದ ಗಂಗಾ ಗ್ಲಾಡಿಯೇಟರ್ಸ್‌ ತಂಡ 2.4 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 26 ರನ್‌ಗಳನ್ನು ಗಳಿಸಿ 10 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿತು.

ಪಂದ್ಯಾವಳಿಯಲ್ಲಿ ಸನತ್ ಶೆಟ್ಟಿ (ಪಂದ್ಯ ಪುರುಷೋತ್ತಮ), ಮನುಕುಮಾರ್ (ಬೆಸ್ಟ್ ಬೌಲರ್), ಅಜಿತ್ ಹುಯಿಗೆರೆ (ಬೆಸ್ಟ್ ಫೀಲ್ಡರ್), ರಚನ್ ಹುಯಿಗೆರೆ (ಬೆಸ್ಟ್ ವಿಕೆಟ್ ಕೀಪರ್), ಎನ್.ನಿಖಿಲೇಶ್ (ಬೆಸ್ಟ್ ಬ್ಯಾಟ್ಸ್‌ಮೆನ್), ದೀಪಕ್ ಗಾಮಾ (ಸರಣಿ ಶ್ರೇಷ್ಠ) ಪ್ರಶಸ್ತಿ ಪಡೆದರು.

ಸಮಾರೋಪ: ಪಂದ್ಯಾವಳಿಯ ಸಮಾರೋಪ, ಬಹುಮಾನ ವಿತರಣಾ ಸಮಾರಂಭದಲ್ಲಿ ದಾನಿ ಕೌಶಿಕ್ ಪಟೇಲ್ ಮಾತನಾಡಿ, ಜೇಸಿ ಪ್ರೀಮಿಯರ್ ಲೀಗ್‌ಗೆ ಇನ್ನು ಮುಂದೆ ಪ್ರತಿವರ್ಷ ತಮ್ಮ ಅಜ್ಜನ ಹೆಸರಿನಲ್ಲಿ 10 ಸಾವಿರ ರೂ. ನೀಡಲಾಗುವುದು. ಈ ಮೂಲಕ ಜೇಸಿಐನ ಯುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲಾಗುವುದು ಎಂದರು.

ಕೊಪ್ಪ ಎಪಿಎಂಸಿ ಸದಸ್ಯ ಎಚ್.ಎಸ್.ಪ್ರಶಾಂತ್ ಹೊಸೂರು ಮಾತನಾಡಿ, ಜೇಸಿಐ ಸಂಸ್ಥೆ ಸಾಮಾಜಿಕ ಕಾರ್ಯದೊಂದಿಗೆ ಕ್ರೀಡಾ ಚಟುವಟಿಕೆಗೂ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ಜೇಸಿಐ ಅಧ್ಯಕ್ಷ ಎನ್.ಶಶಿಧರ್, ಹೋಬಳಿ ಜೆಡಿಎಸ್ ಅಧ್ಯಕ್ಷ ಕೆ.ಆರ್.ದೀಪಕ್ ಕೊಳಲೆ, ಕಾಫಿ ಬೆಳೆಗಾರ ಸತೀಶ್ ಕೇಶವತ್ತಿ, ಜೆಪಿಎಲ್ ಪಂದ್ಯಾವಳಿಯ ತಂಡದ ಮಾಲೀಕರಾದ ಡಾ.ನವೀನ್ ಲಾಯ್ಡ ಮಿಸ್ಕಿತ್, ಬಿ.ಸಿ.ಸಂತೋಷ್‌ಕುಮಾರ್, ಸವಿನ್ ಹುಯಿಗೆರೆ, ಸತೀಶ್ ಅರಳೀಕೊಪ್ಪ, ಸುಧಾಕರ್, ಜೇಸಿ ನಿಕಟಪೂರ್ವ ಅಧ್ಯಕ್ಷ ಬಿ.ಎಸ್.ಅಜಿತ್, ಕಾರ್ಯದರ್ಶಿ ಎಚ್.ಟಿ.ಶೃಜಿತ್, ತೀರ್ಪುಗಾರರಾದ ಓ.ಡಿ.ಸ್ಟೀನ್, ಜಗದೀಶ್ ಅರಳೀಕೊಪ್ಪ, ಶೇಖರ್ ಇಟ್ಟಿಗೆ, ಕಾರ್ಯಕ್ರಮ ನಿರ್ದೇಶಕ ಇಬ್ರಾಹಿಂ ಶಾಫಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net