ಕ್ಷಯ ರೋಗ ಬರದಂತೆ ಬಿಸಿಜಿ ಲಸಿಕೆ ಪಡೆಯಿರಿ/ಜಿಲ್ಲಾ ವೈದ್ಯಾಧಿಕಾರಿ ಡಾ.ಜಿ.ಶ್ರೀನಿವಾಸ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ಜಿಲ್ಲೆಯನ್ನು ಕ್ಷಯ ರೋಗ ಮುಕ್ತ ಜಿಲ್ಲೆಯನ್ನಾಗಿ ರೂಪಿಸಲು ಹಲವು ಕಾರ್ಯಕ್ರಮಗಳನ್ನ ಹಾಕಿಕೊಂಡಿರುವ ಆರೋಗ್ಯ ಇಲಾಖೆ, ಬಿಸಿಜಿ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ನಗರದ ದರ್ಗಾ ಮೊಹಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಜಿಲ್ಲಾ ವೈದ್ಯಾಧಿಕಾರಿ ಜಿ.ಶ್ರೀನಿವಾಸ್ ಚಾಲನೆ ನೀಡಿದರು.

ನಂತರ ಮಾತನಾಡಿದ ಜಿ.ಶ್ರೀನಿವಾಸ್ ಕೋಲಾರ ಜಿಲ್ಲೆಯಲ್ಲಿ ಬಿಸಿಜಿ ಲಸಿಕೆ ಹಾಕುವ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದ್ದು, ಕ್ಷಯ ರೋಗ ಬರದಂತೆ ತಡೆಯುವಲ್ಲಿ ಈ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸಲಿದೆ. ಈಗಾಗಲೇ ಜಿಲ್ಲೆಯಲ್ಲಿ ಎಲ್ಲಾ ಗ್ರಾಮ ಪಂಚಾಯತಿಗಳನ್ನು ಕ್ಷಯ ರೋಗ ಮುಕ್ತ ಪಂಚಾಯತಿಗಳನ್ನಾಗಿ ರೂಪಿಸಲಾಗಿದೆ. ಅಲ್ಲದೇ ಕ್ಷಯ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರದ ಕಿಟ್ ಗಳನ್ನ ವಿತರಿಸಲಾಗಿದೆ ಎಂದು ತಿಳಿಸಿ, ಸಾರ್ವಜನಿಕರು ಕ್ಷಯ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಬಿಸಿಜಿ ಲಸಿಕಾ ಕಾರ್ಯಕ್ರಮದ ಲಾಭ ಪಡೆಯಬೇಕು ಎಂದರು.

ಜಿಲ್ಲಾ ಕ್ಷಯರೋಗ ನಿವಾರಣಾ ಅಧಿಕಾರಿ ಡಾ.ಜಿ.ಪ್ರಸನ್ನಕುಮಾರ್ ಮಾತನಾಡಿ ಬಿಸಿಜಿ ಲಸಿಕೆ ಕಾರ್ಯಕ್ರಮಕ್ಕೆ ಸರ್ಕಾರ ಚಾಲನೆ ನೀಡಿದ್ದು. ಕ್ಷಯ ರೋಗ ಪತ್ತೆಗಾಗಿ ಆರೋಗ್ಯ ಇಲಾಖೆಯಿಂದ ಮನೆ ಮನೆ ಸಮೀಕ್ಷೆ ನಡಿಸಿ ಕರ್ನಾಟಕ ಕ್ಷಯ ಮುಕ್ತ ಕಾರ್ಯತಂತ್ರದ ಭಾಗವಾಗಿ ಎಲ್ಲಾ ಕ್ಷಯರೋಗಿಗಳಿಗೆ ಸಾರ್ವತ್ರಿಕವಾಗಿ ಚಿಕಿತ್ಸೆ ದೊರಕಿಸುವುದು ಮತ್ತು ಶೂನ್ಯ ಕ್ಷಯ ಮರಣದ ಗುರಿ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ಯಾರು ಬಿಸಿಜಿ ಲಸಿಕೆ ಪಡೆಯಬಹುದು:

ಕಳೆದ ೦೫ ವರ್ಷಗಳಲ್ಲಿ ಕ್ಷಯರೋಗಕ್ಕೆ ಒಳಗಾಗಿ ಚಿಕಿತ್ಸೆ ಪಡೆದವರು, ಸಕ್ರಿಯ ಕ್ಷಯರೋಗಿಗಳ ನಿಕಟ ಸಂಪರ್ಕಿತರು, ದೇಹ ಗಾತ್ರದ ಸೂಚ್ಯಾಂಕ ೧೮ ಕ್ಕಿಂತ ಕಡಿಮೆ ಇರುವವರು. ಸ್ವಯಂ ವರದಿ ಮಾಡುವ ಮಧುಮೇಹಿಗಳು, ಸ್ವಯಂ ವರದಿ ಮಾಡುವ ಧೂಮಪಾನಿಗಳು ಮತ್ತು ೬೦ ವರ್ಷಕ್ಕಿಂತ ಮೇಲ್ಪಟ್ಟವರು ಒಂದು ಬಾರಿ ಮಾತ್ರ ಬಿಸಿಜಿ ಲಸಿಕೆ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವೈದ್ಯಕೀಯ ಶಿಕ್ಷಣಾಧಿಕಾರಿ ಪ್ರೇಮ, ತಾಲ್ಲೂಕು ವೈದ್ಯಾಧಿಕಾರಿ ಡಾ.ಎ.ವಿ ನಾರಾಯಣಸ್ವಾಮಿ, ಡಾ.ಅಲ್ಥಾಪ್, ಯುವ ಮುಖಂಡ ಮುಸ್ತಫಾ, ವೈದ್ಯಕೀಯ ಸಿಬ್ಬಂದಿ ಆಶಾ ಕಾರ್ಯಕರ್ತೆಯರು ಇದ್ದರು.

ಚಿತ್ರ ೨೧ ಕೆ.ಎಲ್.ಆರ್. ೦೧ ಬಿಸಿಜಿ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ನಗರದ ದರ್ಗಾ ಮೊಹಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಜಿಲ್ಲಾ ವೈದ್ಯಾಧಿಕಾರಿ ಜಿ.ಶ್ರೀನಿವಾಸ್ ಚಾಲನೆ ನೀಡಿದರು. ಜಿಲ್ಲಾ ಕ್ಷಯರೋಗ ನಿವಾರಣಾ ಅಧಿಕಾರಿ ಡಾ.ಜಿ.ಪ್ರಸನ್ನಕುಮಾರ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net