ವಿಜಯವಾಣಿ ಸುದ್ದಿಜಾಲ ಶ್ರೀನಿವಾಸಪುರ
ಕೋಲಾರ ಜಿಲ್ಲೆಯನ್ನು ಕ್ಲೀನ್ ಕೋಲಾರ ಮಾಡುವುದೇ ನನ್ನ ಕನಸ್ಸಾಗಿದೆ. ಇದನ್ನು ನನಸ್ಸು ಮಾಡಲು ಅಧಿಕಾರಿಗಳ ಸಹಕಾರ ಬೇಕಾಗಿದೆ. ನನ್ನ ಜಿಲ್ಲೆಯನ್ನು ಸರಿಮಾಡಿ, ನಂತರ ರಾಜ್ಯಾದ್ಯಂತ ಕ್ರಮಕೈಗೊಳ್ಳಲು ಮುಂದಾಗುತ್ತೇನೆ. ನನ್ನ ಆಶಯಗಳಿಗೆ ಕೈಜೋಡಿ ಎಂದು ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಉಪಲೋಕಾಯುಕ್ತ ಬಿ.ವೀರಪ್ಪ ಮನವಿ ಮಾಡಿದರು.
ಶ್ರೀನಿವಾಸಪುರ ಪಟ್ಟಣ ಹೊರವಲಯದಲ್ಲಿನ ಕನಕ ಸಮುದಾಯಭವನದಲ್ಲಿ ಶುಕ್ರವಾರ ಲೋಕಾಯುಕ್ತ ವತಿಯಿಂದ ತಾಲ್ಲೂಕಿಗೆ ಸಂಬAಧಿಸಿದ ದೂರು ವಿಚಾರಣೆ ಹಾಗೂ ಬಾಕಿ ಇರುವ ಪ್ರಕರಣಗಳ ವಿಲೇವಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮಪಂಚಾಯಿತಿ ಅಧಿಕಾರಿಗಳು ಸ್ವಚ್ಚತೆ, ನೈರ್ಮಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಹಣಮಾಡುವುದು ಬಿಡಿ ಎಂದು ಅಭಿವೃದ್ಧಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಮೊದಲು ಗ್ರಾಮಗಳು ಸರಿಹೋಗಬೇಕು. ಗ್ರಾಮಪಂಚಾಯ್ತಿಗೆ ಹೆಚ್ಚಿನ ಅನುದಾನ ಬರುತ್ತಿದೆ. ಆದರೆ ಅಭಿವೃದ್ಧಿಗಿಂತ ದುರುಪಯೋಗವೇ ಹೆಚ್ಚಾಗಿದೆ. ಮೊದಲು ಗ್ರಾಮಗಳು ಸ್ವಚ್ಛಗೊಳ್ಳಬೇಕು. ಎಲ್ಲಾ ಕಡೆ ಗ್ರಾಮಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧವೇ ದೂರುಗಳು ಕೇಳಿಬರುತ್ತಿವೆ ಎಂದರು.
ಎಂಜಲು ಕಾಸಿಗೆ ಕೈಯೊಡ್ಡುವ ಅಧಿಕಾರಿಗಳು ತಾಲ್ಲೂಕು ಮತ್ತು ಜಿಲ್ಲೆಯಿಂದ ವರ್ಗಾವಣೆ ಮಾಡಿಸಿಕೊಂಡು ಹೊರಟುಬಿಡಿ. ಜಿಲ್ಲೆಗೆ ಕೆಟ್ಟ ಹೆಸರು ತರಬೇಡಿ. ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದಿದ್ದಲ್ಲಿ ೧೭, ೧೭ಎ ಅಡಿಯಲ್ಲಿ ಕೇಸು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಸುಳ್ಳು ಕೇಸು ದಾಖಲಿಸಿದಲ್ಲಿ ಅವರಿಗೆ ೫ ಸಾವಿರ ರೂ.ಗಳ ದಂಡ ವಿಧಿಸಲಾಗುವುದು ಎಂದರು.
ಪ್ರಪಂಚದಲ್ಲಿ ಭ್ರಷ್ಟಾಚಾರದಲ್ಲಿ ಭಾರತ ೯೬ ನೇ ಸ್ಥಾನ, ದೇಶದಲ್ಲಿ ನಮ್ಮ ರಾಜ್ಯ ೫ ನೇ ಸ್ಥಾನ ಪಡೆದಿದೆ. ಲೋಕಾಯುಕ್ತ ಸಂಸ್ಥೆ ಸರ್ಕಾರದ ಅಧೀನದಲ್ಲಿ ಇಲ್ಲ. ಲೋಕಾಯುಕ್ತ ಸಂಸ್ಥೆ ಸ್ವಂತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಹಳ್ಳಿಯಿಂದ ಡಿಲ್ಲಿಯ ತನಕ ಉತ್ತಮ ಆಡಳಿತ ರೂಪಿಸುವುದು ನಮ್ಮ ಸಂಸ್ಥೆಯ ಮೂಲ ಉದ್ದೇಶ ಎಂದರು.
ಕಳೆದ ಎರಡು ತಿಂಗಳ ಹಿಂದೆ ತಾಲ್ಲೂಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ ದೂರುಗಳಲ್ಲಿ ವಿವಿದ ಇಲಾಖೆಗಳ ೧೦೧ ದೂರುಗಳು ವಿಲೇವಾರಿ ಆಗಿದ್ದು, ಉಳಿದಂತೆ ಬಾಕಿ ಇರುವ ದೂರುಗಳನ್ನು ಅತಿ ಶೀಘ್ರವಾಗಿ ಪರಿಹಾರ ಮಾಡಿಸುವಂತೆ ತಹಶೀಲ್ದಾರ್ ಜಿ.ಎನ್.ಸುದೀಂದ್ರ ರವರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿ, ಸಾರ್ವಜನಿಕರಿಗೆ ಸ್ಪಂದಿಸಿ, ಸಮಸ್ಯೆಗಳನ್ನು ಆಲಿಸಿ, ಆಗಿಂದಾಗ್ಗೆ ಪರಿಹಾರ ಮಾಡುವ ಪಕ್ರಿಯೆ ಅಭ್ಯಾಸ ಬೆಳಸಿಕೊಳ್ಳಬೇಕು. ತಾವು ಕಚೇರಿಗಳಲ್ಲಿ ನಿಗಧಿತ ಸಮಯಕ್ಕೆ ಹಾಜರಿದ್ದು, ಅವರ ಸಮಸ್ಯೆಗಳನ್ನು ಆಲಿಸುವಂತಾಗಬೇಕು. ಸಾರ್ವಜನಿಕರ ಸಮಸ್ಯೆಗಳನ್ನು ಪರಿಹಾರ ಮಾಡುವುದರಲ್ಲಿ ಅಸಡ್ಡೆ ತೋರಿಸಬಾರದು ಎಂದು ಎಚ್ಚರಿಸಿದರು.
ದಲ್ಲಾಳಿಗಳನ್ನು ಬದಿಗಿಟ್ಟು, ಸಾರ್ವಜನಿಕರು ನೇರವಾಗಿ ಅಧಿಕಾರಿಗಳ ಬಳಿ ತಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಳ್ಳವುದು ರೂಡಿಸಿಕೊಳ್ಳಬೇಕು. ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಯ ಮೇಲೆ ಕಾನೂನು ರೀತ್ಯ ಕ್ರಮಕೈಗೊಳ್ಳುವ ಅವಕಾಶವಿದೆ. ಅದನ್ನು ಬಿಟ್ಟು ಮಧ್ಯವರ್ತಿಗಳ ಬಳಿ ಹೋದರೆ ಎರಡು ರೀತಿಯಲ್ಲಿ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಭ್ರಷ್ಟಾಚಾರಕ್ಕೆ ಯಾವುದೇ ಕಾರಣಕ್ಕೂ ಆಸ್ಪದ ಕೊಡಬಾರದು ಎಂದು ಸಾರ್ವಜನಿಕರಿಗೆ ಕಿವಿ ಮಾತು ಹೇಳಿದರು.
ಕೋಲಾರ ಜಿಲ್ಲೆಯ ಎಲ್ಲಾ ರೀತಿಯ ಸಮಸ್ಯೆಗಳನ್ನು ಪರಿಹಾರ ಮಾಡುವುದೇ ಎಲ್ಲರ ಮೊದಲ ಆದ್ಯತೆ ಆಗಬೇಕಾಗಿದೆ. ಈ ಕಾರ್ಯಕ್ರಮದ ಮೂಲ ಉದ್ದೇಶ ಉಪಲೋಕಾಯುಕ್ತರು ರಾಜ್ಯದಲ್ಲಿ ನಮ್ಮ ಜಿಲ್ಲೆಯು ಎಲ್ಲಾ ರೀತಿಯಲ್ಲಿ ಉತ್ತಮವಾಗಿಸುವ ಉದ್ದೇಶವನ್ನು ಹೊಂದಿದ್ದು, ಅದಕ್ಕೆ ಸಾರ್ವಜನಿಕರು, ಅಧಿಕಾರಿಗಳು ಕೈಜೋಡಿಸಬೇಕು ಎಂದರು.
ಉಪವಿಭಾಗಧಿಕಾರಿ ಡಾ.ಮೈತ್ರಿ, ಪಶುಇಲಾಖೆ ಜಂಟಿ ನಿರ್ದೇಶಕ ಎಸ್.ಎಂ.ಶ್ರೀನಿವಾಸ್, ಮಧುಗಿರಿ ತಹಶೀಲ್ದಾರ್ ಶರೀನ್‌ತಾಜ್, ಲೋಕಾಯುಕ್ತ ನ್ಯಾಯಮೂರ್ತಿ ಎನ್.ವಿ.ಆರವಿಂದ್, ಎಸ್‌ಪಿ ಆಟೋನಿಜಾನ್, ಡಿವೈಎಸ್‌ಪಿ ಎಸ್.ಸುದೀರ್, ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಇಒ ಸರ್ವೇಶ್, ಚಿಂತಾಮಣಿ ಇಒ ಎಸ್.ಆನಂದ್, ಬಂಗಾರಪೇಟೆ ತಾಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕ ಎಸ್.ಶಿವಕುಮಾರಿ, ಲೋಕಾಯುಕ್ತ ಪಿಐ ಗಳಾದ ಆಂಜನಪ್ಪ, ರೇಣುಕ, ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್ ಹಾಗು ವಿವಿಧ ಇಲಾಖೆಗಳ ಇಲಾಖಾಧಿಕಾರಿಗಳು ಇದ್ದರು.
ಚಿತ್ರ ೨೫ ಕೆ.ಎಲ್.ಆರ್. ೦೪ : ಶ್ರೀನಿವಾಸಪುರ ಪಟ್ಟಣ ಹೊರವಲಯದಲ್ಲಿನ ಕನಕ ಸಮುದಾಯಭವನದಲ್ಲಿ ಲೋಕಾಯುಕ್ತ ವತಿಯಿಂದ ತಾಲ್ಲೂಕಿಗೆ ಸಂಬAಧಿಸಿದ ದೂರು ವಿಚಾರಣೆ ಹಾಗೂ ಬಾಕಿ ಇರುವ ಪ್ರಕರಣಗಳ ವಿಲೇವಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಉಪ ಲೋಕಾಯುಕ್ತ ಬಿ.ವೀರಪ್ಪ, ಜಿಲ್ಲಾಧಿಕಾರಿ ಎಂ.ಆರ್.ರವಿ ಮುಂತಾದವರು ಇದ್ದರು.