ಕೋಲಾರದಲ್ಲಿ ಮತ್ತೆ ಮಳೆಯ ಆರ್ಭಟ / ಭಾನುವಾರವೂ ಮುಂದುವರೆದ ಮಳೆ / ಮಳೆಯಿಂದಾಗಿ ತರಕಾರಿ ಹೂವು ಬೆಳೆಗಾರರಿಗೆ ಆತಂಕ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರದಲ್ಲಿ ಕಳೆದ ೨ ದಿನಗಳಿಂದ ಬಿಡುವು ನೀಡಿದ್ದ ಮಳೆ ಶನಿವಾರ ರಾತ್ರಿ ಗುಡುಗು ಮಿಂಚಿನ ಸಮೇತ ಭರ್ಜರಿ ಮಳೆಯಾಗಿದ್ದು, ಭಾನುವಾರ ಸಂಜೆಯೂ ಶ್ರೀನಿವಾಸಪುರದಲ್ಲಿ ಉತ್ತಮ ಮಳೆಯಾಗಿದ್ದು, ಕೋಲಾರ ಸೇರಿದಂತೆ ಜಿಲ್ಲೆಯಾದ್ಯಂತ ಅಲ್ಲಲ್ಲಿ ಮಳೆಯಾಗಿದೆ.

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮಧ್ಯಾಹ್ನ ೩ ಗಂಟೆಗೆ ಭರ್ಜರಿ ಮಳೆಯಾಗಿದ್ದು, ಶ್ರೀನಿವಾಸಪುರ ಚಿಂತಾಮಣಿ ರಸ್ತೆಯಲ್ಲಿ ವಾಹನಗಳು ಸಂಚರಿಸಲು ದುಸ್ತರವಾಗಿತ್ತು.

ಸಂಜೆಯ ವೇಳೆಗೆ ಕೋಲಾರದಲ್ಲಿಯೂ ಸ್ವಲ್ಪ ಮಟ್ಟಿಗೆ ಮಳೆಯಾಯಿತು. ಉಳಿದಂತೆ ಎಲ್ಲಾ ತಾಲ್ಲೂಕಿನಲ್ಲಿ ಅಲ್ಲಲ್ಲಿ ಮಳೆಯಾಗಿದ್ದು, ರಾತ್ರಿ ವೇಳೆಗೆ ಮತ್ತಷ್ಟು ಮಳೆ ಬರುವ ಸೂಚನೆ ಇತ್ತು.

ಶನಿವಾರ ೧೦ ಗಂಟೆಯ ನಂತರ ಪ್ರಾರಂಭವಾದ ಮಳೆ ಭಾನುವಾರದ ಬೆಳ್ಳಗ್ಗಿನ ಜಾವದ ತನಕವೂ ಮಳೆ ಗುಡುಗು ಮಿಂಚಿನ ಸಮೇತ ಆರ್ಭಟಿಸುತ್ತಿತ್ತು. ಸದ್ಯಕ್ಕೆ ಮಳೆಯಿಂದ ಜಿಲ್ಲೆಯಲ್ಲಿ ಇದುವರೆವಿಗೂ ಯಾವುದೇ ಸಮಸ್ಯೆ ಮತ್ತು ಅನಾಹುತಗಳು ಸಂಭವಿಸಿಲ್ಲ.

ತರಕಾರಿ ಮತ್ತು ಹೂವು ಬೆಳೆಗಾರರಿಗೆ ಮಳೆಯಿಂದ ನಷ್ಟ ಅನುಭವಿಸುವಂತೆ ಆಗಿದೆ. ಟೊಮೆಟೋ ಮತ್ತು ಕೋಸು ಬೆಳೆಗಳಿಗೆ ತೇವಾಂಶ ಹೆಚ್ಚಾಗುತ್ತಿದ್ದು, ಮಚ್ಚೆ ರೋಗ ಬರುತ್ತದೆಂಬ ಭೀತಿ ರೈತರಲ್ಲಿ ಕಾಡತೊಡಗಿದೆ. ಉಳಿದಂತೆ ಎಲ್ಲಾ ತರಕಾರಿಗಳು ಮಳೆಯ ತೇವಾಂಶದಿAದ ವಿವಿಧ ರೋಗಗಳು ಬರುತ್ತದೆಂಬ ಭೀತಿ ಎದುರಾಗಿದೆ.

ಬೀದಿಗೆ ಬಂದ ಹೂವು ಬೆಳೆಗಾರರು :
ದಸರಾ ಮುಗಿದ ನಂತರ ಹೂವಿನ ಬೆಲೆ ಮತ್ತೆ ದಿಢೀರೆಂದು ಕುಸಿದಿದ್ದು, ೩೦ ಕೆ.ಜಿ. ಸೇವಂತಿಗೆ ೨೦೦ ರಿಂದ ೩೦೦ ರೂ.ಗಳಿಗೆ ಮಾರಾಟವಾಗುತ್ತಿದ್ದು, ಹೂವು ಕಿತ್ತು ತರುವ ಕೂಲಿಯೂ ಬರದಂತೆ ಆಗಿದೆ. ಮಾರುಕಟ್ಟೆಗೆ ತೆಗೆದುಕೊಂಡು ಹೋದವರು ಗುಣಮಟ್ಟ ಇಲ್ಲ ಎಂದು ವ್ಯಾಪಾರವಾಗದ ಹೂವು ಮತ್ತೆ ವಾಪಸ್ಸು ತಂದು ರೈತರು ರಸ್ತೆಗೆ ಸುರಿಯುತ್ತಿದ್ದಾರೆ.

ಇನ್ನು ಕೆಲವರು ಮಾರುಕಟ್ಟೆಯಲ್ಲಿ ವ್ಯಾಪಾರ ಆಗದೆ ವಾಪಸ್ಸು ತೆಗೆದುಕೊಂಡು ಬರದೆ ಕೋಲಾರ ನಗರದಲ್ಲಿ ಕೇಳಿದವರಿಗೆ ಉಚಿತವಾಗಿಯೇ ಹೂವು ಕೊಟ್ಟು ಬರುತ್ತಿದ್ದಾರೆ. ಉಚಿತವಾಗಿ ಹೂವು ತೆಗೆದುಕೊಳ್ಳದೆ ರೈತನ ಕಷ್ಟ ನೋಡಿ ಸಾರ್ವಜನಿಕರು ಒಂದಿಷ್ಟು ಹಣ ಕೊಟ್ಟು ಹೂವನ್ನು ಖರೀದಿಸುತ್ತಿದ್ದುದ್ದು ಕಂಡುಬAದಿತ್ತು.

ಚೆಂಡು ಮಲ್ಲಿಗೆ ಹೂವನ್ನು ಕೇಳುವವರೇ ಇಲ್ಲದಂತಾಗಿದೆ. ಕೀಳಲು ಬಂದಿರುವ ಹೂವು ತೋಟದಲ್ಲಿಯೇ ಬಿಟ್ಟರೆ ಹೂವಿನ ಗಿಡಕ್ಕೆ ತೊಂದರೆಯಾಗುತ್ತದೆ. ಮತ್ತೆ ಹೂವು ಬಿಡುವುದಿಲ್ಲ ಎಂದು ಕೂಲಿ ಇಲ್ಲದಿದ್ದರೂ ಪರವಾಗಿಲ್ಲ ಇರುವ ಹೂವನ್ನು ಕಿತ್ತು ಹಾಕಿದರೆ ಮತ್ತೆ ಮೊಗ್ಗು ಬಂದು ದೀಪಾವಳಿಗಾದರೂ ಹೂವಿಗೆ ಬೆಲೆ ಬರಬಹುದೆಂದು ರೈತರು ತೋಟಗಳಲ್ಲಿ ಕೂಲಿ ಸಿಗದಿದ್ದರೂ ಪರವಾಗಿಲ್ಲ ಎಂದು ಹೂವನ್ನು ಕಿತ್ತು ಉಚಿತವಾಗಿ ಹಂಚಲು ಮುಂದಾಗಿದ್ದಾರೆ.

ಚಿತ್ರ ೨೦ ಕೆ.ಎಲ್.ಆರ್. ೦೬ : ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮಧ್ಯಾಹ್ನದ ನಂತರ ಶ್ರೀನಿವಾಸಪುರ ಚಿಂತಾಮಣಿ ರಸ್ತೆಯಲ್ಲಿ ಭರ್ಜರಿ ಮಳೆಯಾಗುತ್ತಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net