ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರದ ಕಲಾವಿದೆ ಗೀತಾರಾಘವೇಂದ್ರ ಮುಖ್ಯಪಾತ್ರದಲ್ಲಿ ನಟಿಸಿರುವ ಸೈಕಲ್ ಸವಾರಿ ಚಿತ್ರದ ಹಾಡುಗಳನ್ನು ಖ್ಯಾತ ಉದ್ಯಮಿ ಹಾಗೂ ಜಿಲ್ಲಾ ಯಾದವ ಸಂಘದ ಅಧ್ಯಕ್ಷ ವಕ್ಕಲೇರಿ ನಾರಾಯಣಸ್ವಾಮಿ ಹಾಗೂ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಬಿಡುಗಡೆ ಮಾಡಿ, ರಾಜ್ಯದ ಜನತೆ ಪ್ರೋತ್ಸಾಹಿಸಲು ಮನವಿ ಮಾಡಿದರು.
ಬೆಂಗಳೂರಿನ ರೇಣುಕಾಂಬ ಡಿಜಿಟಲ್ ಸ್ಟುಡಿಯೋದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕ ಹಾಗೂ ನಟ ದೇವು ಅಂಬಿಗ ಮೊದಲ ಬಾರಿಗೆ ತಾನೇ ಕಥೆ ಬರೆದು ಚಿತ್ರಕಥೆ ತಯಾರಿಸಿ, ನಿರ್ದೇಶನ ಮಾಡಿರುವ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ ಅವರು, ಕೋಲಾರದ ಕಲಾವಿದೆ ಗೀತಾ ರಾಘವೇಂದ್ರ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಜಿಲ್ಲೆಯಿಂದ ಚಿತ್ರರಂಗಕ್ಕೆ ಓರ್ವ ಉತ್ತಮ ಕಲಾವಿದೆಯನ್ನು ಕೊಡುಗೆ ನೀಡಿದಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಮಾತನಾಡಿ, ಒಂದು ಉತ್ತಮ ಪ್ರಯತ್ನ ಈ ಚಿತ್ರದಲ್ಲಿ ಕಾಣಿಸುತ್ತದೆ. ಇದೇ ಮೊದಲ ಬಾರಿಗೆ ಈ ತಂಡ ಚಲನಚಿತ್ರ ಮಾಡುತ್ತಿದೆ ಎಂದರೆ ನಂಬಲಾಗುತ್ತಿಲ್ಲ. ಯಾಕೆಂದರೆ ಇಡೀ ದೃಶ್ಯಗಳಲ್ಲಿ ಅಂತಹ ಅಚ್ಚು ಕಟ್ಟುತನ ಎದ್ದು ಕಾಣುತ್ತಿದೆ, ಆದ ಕಾರಣದಿಂದ ಇದು ಉತ್ತಮ ಚಿತ್ರವಾಗುತ್ತದೆ, ಇದಲ್ಲದೆ ಸಂಕಲನ ಸಂಗೀತ ದೃಶ್ಯ ವೈಭವ ಎಲ್ಲವೂ ಕೂಡ ಮನಸಳೆಯುತ್ತದೆ ಆದ ಕಾರಣ ಈ ಸಿನಿಮಾ ಗೆಲ್ಲುತ್ತದೆ ಎಂದರು.
ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಕೋಲಾರದ ಕಲಾವಿದೆ ಗೀತಾರಾಘವೇಂದ್ರ ಮಾತನಾಡಿ, ಇದು ನನ್ನ ಮೊದಲ ಚಿತ್ರವಾಗಿದ್ದು, ಇದಾದ ನಂತರ ನನಗೆ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ದೊರಕಿದೆ. ಇದರಲ್ಲಿ ನನಗೆ ಅತ್ಯುತ್ತಮ ಪಾತ್ರ ದೊರಕಿರುವುದು ನಿಜಕ್ಕೂ ನನ್ನ ಸೌಭಾಗ್ಯ ಎಂದರು.
ಉತ್ತರ ಕರ್ನಾಟಕದ ಎಲ್ಲ ಕಲಾವಿದರ ಜೊತೆಗೆ ನನ್ನನ್ನು ಒಬ್ಬ ಕಲಾವಿದೆಯಾಗಿ ಗುರುತಿಸಿ, ನನಗೆ ಒಂದು ಉತ್ತಮ ಪಾತ್ರವನ್ನು ನೀಡಿದ್ದಾರೆ. ನಾನೊಬ್ಬ ರಂಗಭೂಮಿಯ ಪ್ರತಿಭೆಯಾಗಿದ್ದು, ನನ್ನನ್ನು ಕೂಡ ಗುರುತಿಸಿರುವುದು ನನಗೆ ಹೆಮ್ಮೆ ಎನಿಸುತ್ತಿದೆ ಎಂದರು.
ಚಿತ್ರದ ನಿರ್ದೇಶಕ ದೇವು ಅಂಬಿಗ ಮಾತನಾಡಿ, ನಾನು ಸಣ್ಣ ಸಣ್ಣ ಕಿರುಚಿತ್ರಗಳನ್ನು ಮಾಡುತ್ತಿದ್ದವನು ನನ್ನವರ ಮತ್ತು ನನ್ನ ಸ್ನೇಹಿತರ ಸಹಕಾರದಿಂದ ಇದೆ ಮೊದಲ ಬಾರಿಗೆ ಹಿರಿತರೆಗೆ ಬಂದಿದ್ದೇನೆ ನಿಮ್ಮೆಲ್ಲರ ಸಹಕಾರವಿರಲಿ ಎಂದರು.
ಚಿತ್ರ ೧೧ ಕೆ.ಎಲ್.ಆರ್. ೦೪ : ಕೋಲಾರದ ಕಲಾವಿದೆ ಗೀತಾರಾಘವೇಂದ್ರ ಮುಖ್ಯಪಾತ್ರದಲ್ಲಿ ನಟಿಸಿರುವ ಸೈಕಲ್ ಸವಾರಿ ಚಿತ್ರದ ಹಾಡುಗಳನ್ನು ಖ್ಯಾತ ಉದ್ಯಮಿ ಹಾಗೂ ಜಿಲ್ಲಾ ಯಾದವ ಸಂಘದ ಅಧ್ಯಕ್ಷ ವಕ್ಕಲೇರಿ ನಾರಾಯಣಸ್ವಾಮಿ ಹಾಗೂ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಬಿಡುಗಡೆ ಮಾಡಿದರು.