

ಬೆಂಗಳೂರು: ಒಂದು ಕೋಟಿಗೂ ಅಧಿಕ ಮಂದಿ ಶುಕ್ರವಾರ ಏಕಕಾಲದಲ್ಲಿ ಕನ್ನಡ ಗೀತೆಗಳನ್ನು ಹಾಡುವ ಮೂಲಕ ದಶದಿಕ್ಕುಗಳಲ್ಲೂ ಕನ್ನಡದ ಕಂಪನ್ನು ಹರಿಸಿದರು. 67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರೂಪಿಸಿದ್ದ ಕಾರ್ಯಕ್ರಮದಲ್ಲಿ ಶಕ್ತಿಕೇಂದ್ರ ವಿಧಾನಸೌಧ, ಕಂಠೀರವ ಕ್ರೀಡಾಂಗಣ, ಹೈಕೋರ್ಟ್, ಪುರಭವನ, ಕನ್ನಡ ಸಾಹಿತ್ಯ ಪರಿಷತ್ತು, ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಸಾರ್ವಜನಿಕ ಸ್ಥಳಗಳು ಸೇರಿ ನೂರಾರು ಸ್ಥಳಗಳಲ್ಲಿ ಏಕಕಾಲಕ್ಕೆ ಕನ್ನಡ ಹಾಡುಗಳನ್ನು ಹಾಡುವ ಮೂಲಕ ಕನ್ನಡದ ಅಸ್ಮಿತೆ ಹಾಗೂ ಕನ್ನಡಾಭಿಮಾನ ಮೆರೆದರು.
ಶುಕ್ರವಾರ ಬೆಳಗ್ಗೆ 11 ಗಂಟೆಗೆ ಆರಂಭವಾದ ಕನ್ನಡ ಗಾಯನವು 27 ನಿಮಿಷಗಳ ಕಾಲ ನಡೆಯಿತು. ಏಕಕಾಲಕ್ಕೆ ಹಾಡಿದ ಕನ್ನಡ ಹಾಡಿಗೆ ಭಾರತ ಸೇರಿ 46 ದೇಶಗಳಲ್ಲಿನ ಕನ್ನಡಿಗರು ದನಿಯಾದರು. ವಿಮಾನ
ಗಳಲ್ಲೂ ಕನ್ನಡ ಹಾಡು ಹಾಡುವ ಮೂಲಕ ಮುಗಿಲೆತ್ತರಕ್ಕೆ ಕನ್ನಡ ಕಂಪನ್ನು ಪಸರಿಸಿದರು. ರಾಷ್ಟ್ರಕವಿ ಕುವೆಂಪು ರಚಿತ ‘ಜಯಭಾರತ ಜನನಿಯ ತನುಜಾತೆ’ ನಾಡಗೀತೆಯೊಂದಿಗೆ ಆರಂಭವಾಗಿ ಹುಯಿಲಗೋಳ ನಾರಾಯಣ ರಾವ್ ರಚನೆಯ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ಚನ್ನವೀರ ಕಣವಿ ರಚನೆಯ ‘ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ’, ಕುವೆಂಪು ರಚನೆಯ ‘ಬಾರಿಸು ಕನ್ನಡ ಡಿಂಡಿಮವ’, ಡಾ. ಡಿ.ಎಸ್. ರ್ಕಯವರ ‘ಹಚ್ಚೇವು ಕನ್ನಡದ ದೀಪ’ ಹಾಗೂ ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡುಗಳನ್ನು ಹಾಡಿ ಕನ್ನಡದ ಉತ್ಸವವನ್ನು ಸಂಭ್ರಮಿಸಿದರು.
ಕೋಟಿ ಕಂಠ ಗಾಯನ ದಾಖಲೆಯನ್ನು ಸೃಷ್ಟಿಸಿದೆ. ಪ್ರತಿಯೊಂದು ಹಳ್ಳಿ-ಹಳ್ಳಿಯಲ್ಲೂ ಕನ್ನಡ ರಿಂಗಣಿಸುವ ಮೂಲಕ ಇಡೀ ನಾಡು ಕನ್ನಡಮಯವಾಗಿದೆ. ನವ ಕರ್ನಾಟಕ ನಿರ್ವಣದಿಂದ ಭವ್ಯ ಭಾರತ ನಿರ್ಮಾಣ ಸಾಧ್ಯ. ಕೋಟಿ ಕಂಠ ಗಾಯನ ಎಲ್ಲ ಕನ್ನಡದ ಮನಸ್ಸುಗಳನ್ನು ಒಂದುಗೂಡಿಸಿದೆ. ಒಂದು ಕೋಟಿಗೂ ಅಧಿಕ ಜನರು ಕನ್ನಡದ ಗೀತೆಗಳನ್ನು ಹಾಡುವ ಮೂಲಕ ಕನ್ನಡದ ಮನಸ್ಸುಗಳು ಒಂದಾಗಬೇಕೆಂಬ ಹಂಬಲ ಈಡೇರಿದೆ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
ಶಕ್ತಿಸೌಧದಲ್ಲಿ ಹಾಡುಗಾರಿಕೆ ಸಡಗರ: ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಚಿವಾಲಯದ ಸಿಬ್ಬಂದಿ ಕೈಯಲ್ಲಿ ಕನ್ನಡದ ಬಾವುಟ ಹಿಡಿದು ಆರು ಹಾಡುಗಳಿಗೆ ದನಿಗೂಡಿಸುವ ಮೂಲಕ ಕನ್ನಡದ ವಾತಾವರಣಕ್ಕೆ ಸಾಕ್ಷಿಯಾದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ಕುಮಾರ್, ಕಂದಾಯ ಸಚಿವ ಆರ್. ಅಶೋಕ್, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ. ಎನ್. ಮಂಜುಳಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ. ಗುರುಸ್ವಾಮಿ ಹಾಗೂ ಇತರರು ಹಾಡುವ ಮೂಲಕ ಹುರಿದುಂಬಿಸಿದರು. ಗಾಯನದ ನಂತರ ಸಚಿವ ಸುನಿಲ್ಕುಮಾರ್, ಕನ್ನಡವನ್ನೇ ಬಳಸುವ ಹಾಗೂ ಬೆಳೆಸುವ ಕುರಿತು ಪ್ರಮಾಣ ವಚನ ಬೋಧಿಸಿದರು. ಕಂಠೀರವ ಕ್ರೀಡಾಂಗಣದಲ್ಲಿ 35 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡ ಹಾಡುಗಳನ್ನು ಹಾಡಿದರು.