

ಮಡಿಕೇರಿ: ಕಾಫಿಯ ಉತ್ತಮ ಸ್ವಾದಕ್ಕೆ ಗ್ರಾಹಕರು ಮನಸೋತರೆ ಮಾತ್ರ ಜಾಗತಿಕವಾಗಿ ಕಾಫಿ ಬೆಳೆಗೆ ಉತ್ತಮ ದರ ದೊರಕಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನೈಸರ್ಗಿಕವಾಗಿ ಸ್ವಾದಭರಿತ ಕಾಫಿ ಬೆಳೆಸುವತ್ತ ಬೆಳೆಗಾರರು ಗಮನ ಹರಿಸಬೇಕೆಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಸಿ.ಜಿ.ಕುಶಾಲಪ್ಪ ಕರೆ ನೀಡಿದರು. ನಗರದ ಹೊರವಲಯದಲ್ಲಿನ ಕ್ಯಾಪಿಟಲ್ ರೆಸಾರ್ಟ್‌ನಲ್ಲಿ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ೧೮ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಡಾ.ಸಿ.ಜಿ.ಕುಶಾಲಪ್ಪ, ವಿಯೆಟ್ನಾಂ, ಬ್ರಿಜೆಲ್ ದೇಶಗಳು ಬೃಹತ್ ಪ್ರಮಾಣದಲ್ಲಿ ಕಾಫಿಯ ಉತ್ಪಾದನೆ ಮಾಡಿದರೂ ಕೂಡ ಕಾಫಿ ಕೃಷಿಗೆ ಹೂಡಿಕೆ ಮಾಡಿದ ಮೂಲ ಬಂಡವಾಳವೇ ಅವರ ಕೈಗೆ ಎಟುಕುತ್ತಿಲ್ಲ. ಆ ದೇಶಗಳಲ್ಲಿ ಕಾಫಿ ಕಷಿಗೆ ಅತ್ಯಧಿಕ ಪ್ರಮಾಣದಲ್ಲಿ ರಾಸಾಯನಿಕಗಳ ಬಳಕೆ ಮಾಡುತ್ತಿರುವುದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು. ಕೊಡಗಿನ ಕಾಫಿ ಬೆಳೆಗಾರರು ಕೂಡ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಿ ನೈಸರ್ಗಿಕವಾಗಿ ಕಾಫಿ ಕೃಷಿಯಲ್ಲಿ ತೊಡಗ ಬೇಕು. ಕೊಡಗು ಜಿಲ್ಲೆಯಲ್ಲಿ ನೈಸರ್ಗಿಕ ಅರಣ್ಯದಿಂದ ಆವೃತವಾದ ಪ್ರದೇಶಗಳಲ್ಲಿ ಕಾಫಿಯನ್ನು ಬೆಳೆಯುತ್ತಿದ್ದು, ೩೬೦ ತಳಿಯ ವೈವಿಧ್ಯಮಯ ಮರಗಳು ಕೊಡಗಿನ ಕಾಫಿ ತೋಟಗಳಲ್ಲಿವೆ. ಇದರಿಂದ ವಿಶ್ವ ಗುಣಮಟ್ಟದ ಕಾಫಿಯನ್ನು ಬೆಳೆಯಲು ಕೊಡಗಿನ ಕಾಫಿ ಬೆಳೆಗಾರರಿಗೆ ಸಾಧ್ಯವಾಗಲಿದೆ. ಈ ರೀತಿಯಾಗಿ ಬೆಳೆಯುವ ಕಾಫಿಗೆ ವಿಶ್ವ ಮಾನ್ಯತೆಯೂ ಇದ್ದು, ಉತ್ತಮ ಬೆಲೆಯೂ ದೊರಕಲು ಸಾಧ್ಯವಾಗುತ್ತದೆ. ಕಾಫಿ ಬೆಳೆಗಾರರು ಕಾಫಿ ಗಿಡದಿಂದ ಕಾಫಿ ಕಪ್‌ನವರೆಗೂ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದೂ ಕುಶಾಲಪ್ಪ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಕಾಫಿ ಮಂಡಳಿಯ ಗುಣಮಟ್ಟ ತಜ್ಞ ವಿಕ್ರಂ ಕುಟ್ಟಯ್ಯ, ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಅಧ್ಯಕ್ಷೆ ಪಂದಿಕುತ್ತೀರ ಚಿತ್ರಾಸುಬ್ಬಯ್ಯ, ಸಂಘದ ಪ್ರಧಾನ ಕಾರ್ಯದರ್ಶಿ ಅಪ್ಪನೆರವಂಡ ಅನಿತಾ ನಂದ, ಜಂಟಿ ಕಾರ್ಯದರ್ಶಿ ಮುಕ್ಕಾಟೀರ ಜ್ಯೋತಿಕಾ ಬೋಪಣ್ಣ, ತೇಲಪಂಡ ಶರಿನ್ ನಂಜಪ್ಪ, ಬಲ್ಲನಮಾಡ ಸೇರಿದಂತೆ ಸಂಘದ ನಿರ್ದೇಶಕಿಯರು ಪಾಲ್ಗೊಂಡಿದ್ದರು. ಕಾಫಿ ಸೇವನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ೧೮ ವರ್ಷಗಳ ಹಿಂದೆ ಕೊಡಗಿನಲ್ಲಿ ಪ್ರಾರಂಭವಾದ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ವಾಷಿಕ ಮಹಾಸಭೆಯಲ್ಲಿ ಜಿಲ್ಲೆಯ ಹಲವೆಡೆಗಳಿಂದ ಬಂದಿದ್ದ ನೂರಾರು ಸದಸ್ಯೆಯರು ಪಾಲ್ಗೊಂಡು ಮುಂದಿನ ದಿನಗಳಲ್ಲಿ ಕಾಫಿ ಸೇವನೆ ಸಂಬಂಧಿತ ಜಾಗೃತಿ ಮೂಡಿಸಲು ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದರು.