

ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ 2025/26 ನೇ ಸಾಲಿನ ಶೈಕ್ಷಣಿಕ ಅವಧಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ 3 ವರ್ಷದ ಡಿಪ್ಲೋಮಾ(ಡಿ.ಹೆಚ್.ಟಿ.ಟಿ) ಕೋರ್ಸ್ ಕಲಿಕೆಗಾಗಿ 39 ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಸಮಯದಲ್ಲಿ ಅವರಿಗೆ ಪ್ರತಿ ತಿಂಗಳು ರೂ.2,500/- ರಂತೆ ಶಿಷ್ಯವೇತನ ನೀಡಲಾಗುವುದು ಹಾಗೂ ಪುರುಷ ಅಭ್ಯರ್ಥಿಗಳಿಗೆ ವಸತಿ ನಿಲಯದ ಸೌಲಭ್ಯವನ್ನು ಹಣ ಪಾವತಿಸುವ ಆಧಾರದ ಮೇಲೆ ಕಲ್ಪಿಸಲಾಗುತ್ತದೆ.
ಎಸ್. ಎಸ್. ಎಲ್. ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಇಂಗ್ಲೀಷ್‌ನ್ನು ಒಂದು ವಿಷಯವಾಗಿ ಅಭ್ಯಸಿಸಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಜುಲೈ 1,2025 ಕ್ಕೆ ಅನ್ವಯಿಸುವಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳು 15 ರಿಂದ 23 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು 15 ರಿಂದ 25 ರ ವಯೋಮಿತಿ ಹೊಂದಿರಬೇಕು. ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಕೃಢೀಕೃತ ಅಂಕಗಳು ಮೆರಿಟ್ ಲೆಕ್ಕಾಚಾರಕ್ಕೆ ಆಧಾರವಾಗಿರುತ್ತದೆ.
2025/26 ನೇ ಸಾಲಿಗೆ ಮೂರು ವರ್ಷದ ಡಿಪ್ಲೋಮಾ ಕೋರ್ಸ್ ಗಾಗಿ ಲಭ್ಯವಿರುವ ಅಭ್ಯರ್ಥಿಗಳ ಸಂಖ್ಯೆ ಮತ್ತು ಸಂಸ್ಥೆಗಳ ವಿವರ: ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ಗದಗ - ಬೆಟಗೇರಿ( ಕರ್ನಾಟಕ), 22 ಅಭ್ಯರ್ಥಿಗಳು, ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆ , ಸೇಲಂ (ತಮಿಳುನಾಡು), 12 ಅಭ್ಯರ್ಥಿಗಳು, ಎಸ್. ಪಿ.ಕೆ.ಎಂ ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ವೆಂಕಟಗಿರಿ (ನೆಲ್ಲೂರು ಜಿಲ್ಲೆ ಆಂಧ್ರಪ್ರದೇಶ), 03 ಅಭ್ಯರ್ಥಿಗಳು, ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ಕಣ್ಣೂರು(ಕೇರಳ), 02 ಅಭ್ಯರ್ಥಿಗಳು ಒಟ್ಟು 39 ಅಭ್ಯರ್ಥಿಗಳಿಗೆ ಅವಕಾಶವಿದ್ದು, ಮೆರಿಟ್ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯಾ ಡಿಪ್ಲೋಮಾ ಸಂಸ್ಥೆಗಳಲ್ಲಿ ಕೋರ್ಸ್ ಪ್ರವೇಶ ಕುರಿತಂತೆ ಕೌನ್ಸಿಲಿಂಗ್ ಕರೆಯಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ವೆಬ್ ಸೈಟ್ https://khtigadag.ac.in/AdmissionForm.pdf ಮೂಲಕ ಡೌನ್ಲೋಡ್ ಮಾಡಿಕೊಂಡು ಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಪ್ರಾಂಶುಪಾಲರು ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪುರ ಗದಗ-ಬೆಟಗೇರಿ ಇವರಿಗೆ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಜೂನ್ 15 ಕೊನೆಯ ದಿನಾಂಕವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ ನರಸಾಪುರ ಗದಗ- ಬೆಟಗೇರಿ ಕಚೇರಿ ದೂ. ಸಂ: 08372-297221 ಮೋ.ನಂ.9449162822 ಅಥವಾ ಉಪ ನಿರ್ದೇಶಕರ ಕಚೇರಿ ಕೈಮಗ್ಗ ಮತ್ತು ಜವಳಿ ಇಲಾಖೆ ಸಿ.ಟಿ.ಐ.ಕಟ್ಟಡ ಸೈಯಾಜಿ ರಾವ್ ರಸ್ತೆ ಜಿಲ್ಲಾ ಪಂಚಾಯತ್ ಮೈಸೂರು ದೂ. ಸಂ: 0821-2441353 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತ್‌ನ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.