ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ

bdvt rain
ಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟಿರುವುದರಿಂದ ಭದ್ರಾವತಿಯ ಹಳೇ ಸೇತುವೆ ಸಮೀಪದ ಸಂಗಮೇಶ್ವರ ದೇವಸ್ಥಾನ ಮುಳುಗಡೆಯಾಗಿದೆ.
Published on

ಭದ್ರಾವತಿ: ಕೆಲವು ದಿನಗಳಿಂದ ಕ್ಷೇತ್ರದಾದ್ಯಂತ ಮಳೆಯಾಗುತ್ತಿದೆ. ಇದರಿಂದ ಕೊಯ್ಲು ಹಂತಕ್ಕೆ ಬಂದಿರುವ ಭತ್ತದ ಬೆಳೆ ಹಾನಿಯಾಗುವ ಭೀತಿ, ಮತ್ತೊಂದೆಡೆ ಅಡಕೆ ಒಣಗಿಸಲು ಬಿಸಿಲಿನ ಕೊರತೆ ಎದುರಾಗಿದೆ. ಭತ್ತ ಕಟಾವು ಹಂತ ತಲುಪಿದೆ. ಈ ಹಂತದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ಫಸಲು ನೀರು ಪಾಲಾಗುವ ಸ್ಥಿತಿಯಲ್ಲಿದೆ. ಮತ್ತೊಂದೆಡೆ ಅಡಕೆ ತೋಟಗಳಲ್ಲಿ ಕೊಯ್ಲು ನಡೆಯುತ್ತಿದ್ದು, ಸದಾ ಮೋಡಕವಿದ ವಾತಾವರಣ ಇರುವುದರಿಂದ ಸಂಸ್ಕರಣೆಗೆ ಸಮಸ್ಯೆಯಾಗಿದೆ.

ನಗರವ್ಯಾಪ್ತಿಯಲ್ಲಿ ಮಳೆಯಿಂದಾಗಿ ಬೀದಿಬದಿ ವ್ಯಾಪಾರಿಗಳು ವ್ಯಾಪಾರ ವಹಿವಾಟು ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಲ್ಲದೇ ನಗರದ ಬಹುತೇಕ ರಸ್ತೆಗಳು ಹಾಳಾಗಿವೆ. ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ಉಂಟಾಗಿ ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ತೊಂದರೆಯಾಗಿದೆ. ನಗರಸಭೆ ವ್ಯಾಪ್ತಿಯ ಬಹುತೇಕ ಕಡೆ ರಸ್ತೆ ಹಾಗೂ ಚರಂಡಿ ಕಾಮಗಾರಿ ಸಮರ್ಪಕವಾಗಿ ನಿರ್ವಹಿಸದ ಕಾರಣ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಈ ಸಂಬಂಧ ಹಲವಾರು ಬಾರಿ ನಗರಸಭೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ಭದ್ರಾ ಜಲಾನಯನ ಪ್ರದೇಶದಲ್ಲಿ ಜಲಾಶಯದ ಸುತ್ತಮುತ್ತ ವ್ಯಾಪಕವಾಗಿ ಮಳೆಯಾಗುತ್ತಿರುವ ಈ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಜಲಾಶಯದಿಂದ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಹಳೇ ಸೇತುವೆ ಸಮೀಪ ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಸ್ಥಾನ ಮುಳುಗಡೆಯಾಗಿದೆ. ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾದರೆ ಕೆಲವು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net