

ಕಡೂರು: ನಿವೃತ್ತಿಯಾದ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ, ಪಿಂಚಣಿ, ತುಟ್ಟಿಭತ್ಯೆ ನೀಡುವುದು ಕಷ್ಟಸಾಧ್ಯ ಎಂಬ ಕೇಂದ್ರ ಸರ್ಕಾರದ ತೀರ್ಮಾನ ಖಂಡಿಸಿ ಸಹಿ ಸಂಗ್ರಹದ ಮೂಲಕ ಸಾಂಕೇತಿಕ ಪ್ರತಿಭಟನೆ ನಡೆಸಲಾಗಿದೆ ಎಂದು ತಾಲೂಕು ನಿವೃತ್ತ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಗುರುರಾಜ್ ಹಾಲ್ಮಠ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ನಿವೃತ್ತ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಸದಸ್ಯರು ಸಾಂಕೇತಿಕವಾಗಿ ಪ್ರತಿಭಟನಾ ಜಾಥಾ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
2024ರ ಏ.1ರ ಮೊದಲು ನಿವೃತ್ತಿಯಾದ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ, ಪಿಂಚಣಿ, ತುಟ್ಟಿಭತ್ಯೆ ನೀಡುವುದು ಕಷ್ಟಸಾಧ್ಯ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ತೀರ್ಮಾನವನ್ನು ರಾಜ್ಯ ಸರ್ಕಾರಗಳೂ ಜಾರಿಗೆ ತರುವ ಸಂಭವವಿದೆ. ಹೀಗಾಗಿ ಇದನ್ನು ತಡೆಯುವ ನಿಟ್ಟಿನಲ್ಲಿ ನಿವೃತ್ತ ನೌಕರರ ಸಂಘದ ಎಲ್ಲ ಘಟಕಗಳಿಂದ ನಿವೃತ್ತ ನೌಕರರು ಮತ್ತು ಅವಲಂಬಿತರ ಸಹಿ ಸಂಗ್ರಹ ಮಾಡಿ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲು ಸಂಘದ ರಾಜ್ಯ ಘಟಕದ ತೀರ್ಮಾನದಂತೆ ಇಂದು ಸಂಘದ ತಾಲೂಕು ಘಟಕದ ಮೂಲಕ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ತಹಸೀಲ್ದಾರ್ ಪೂರ್ಣಿಮಾ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಂಘದ ಜಿಲ್ಲಾ ಉಪಾಧ್ಯಕ್ಷ ಎಚ್.ಸಿ.ರೇವಣಸಿದ್ದಪ್ಪ, ತಾಲೂಕು ಘಟಕದ ಪ್ರಭಾರಿ ಅಧ್ಯಕ್ಷ ಈಶ್ವರಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಎಚ್. ಚಂದ್ರಪ್ಪ ಇತರರಿದ್ದರು.