ಕೇಂದ್ರಕ್ಕೆ ಶಿರೋಮಣಿ ಶಾಕ್: ಹರ್​ಸಿಮ್ರತ್ ರಾಜೀನಾಮೆ, 3 ಕೃಷಿ ಮಸೂದೆಗಳಿಗೆ ವಿರೋಧ

N 1
Published on

ನವದೆಹಲಿ: ಸಂಸತ್ತಿನ ಮಂಡಿಸಲಾಗಿರುವ ಕೃಷಿಗೆ ಸಂಬಂಧಿಸಿದ ಮೂರು ಮಸೂದೆಗಳನ್ನು ವಿರೋಧಿಸಿ ಎನ್​ಡಿಎ ಅಂಗ ಪಕ್ಷ ಶಿರೋಮಣಿ ಅಕಾಲಿ ದಳದ (ಎಸ್​ಡಿಎ) ನಾಯಕಿ ಹರ್​ಸಿಮ್ರತ್ ಕೌರ್ ಕೇಂದ್ರ ಸಂಪುಟಕ್ಕೆ ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನಾ, ಈ ಮಸೂದೆಗಳು ರೈತ ವಿರೋಧಿ ಯಾಗಿರುವ ಕಾರಣ ಆಹಾರ ಸಂಸ್ಕರಣಾ ಸಚಿವೆ ಹರ್​ಸಿಮ್ರತ್ ರಾಜೀನಾಮೆ ನೀಡಲಿದ್ದಾರೆ ಎಂದು ಪಕ್ಷದ ಸದಸ್ಯ ಸುಖಬೀರ್ ಸಿಂಗ್ ಬಾದಲ್ ಲೋಕಭೆಯಲ್ಲಿ ಪ್ರಕಟಿಸಿದ್ದರು.

ಈ ಮಸೂದೆಗಳು ಕೃಷಿ ಕ್ಷೇತ್ರದಲ್ಲಿ ಕಾರ್ಪೆರೇಟ್ ವಲಯದ ಮೇಲುಗೈಗೆ ಅವಕಾಶ ಕಲ್ಪಿಸುತ್ತದೆ ಎಂದು ಆರೋಪಿಸಿರುವ ಎಸ್​ಡಿಎ, ಇದರ ವಿರುದ್ಧ ಮತ ಚಲಾಯಿಸುವಂತೆ ಈಗಾಗಲೇ ಪಕ್ಷದ ಸಂಸದರಿಗೆ ವಿಪ್ ಜಾರಿ ಮಾಡಿದೆ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಉತ್ತೇಜನ ಹಾಗೂ ಸೌಲಭ್ಯ ಮಸೂದೆ ಮತ್ತು ರೈತರ ಬೆಲೆ ಆಶ್ವಾಸನೆ ಹಾಗೂ ಕೃಷಿ ಸೇವೆಗಳ ಮಸೂದೆ (ಸಬಲೀಕರಣ ಮತ್ತು ರಕ್ಷಣೆ)ಯನ್ನು ಗುರುವಾರ ಲೋಕಸಭೆಯಲ್ಲಿ ಎರಡು ಮಸೂದೆಗಳನ್ನು ಮಂಡಿಸಿದರು. ಅಗತ್ಯ ಸಾಮಗ್ರಿಗಳ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಸೋಮವಾರವೇ ಮಂಡಿಸಲಾಗಿತ್ತು. ಈ ಮೂರೂ ಮಸೂದೆಗೆ ಲೋಕಸಭೆ ಅನುಮೋದನೆ ನೀಡಿದೆ.

ರೈತರಿಗೆ ಸಹಕಾರಿ

ರೈತರ ಉತ್ಪನ್ನಗಳ ಮಾರಾಟಕ್ಕೆ ಇರುವ ಅಡೆತಡೆಗಳನ್ನು ನಿವಾರಿಸುವುದು ಹಾಗೂ ಕೃಷಿಕರಿಗೆ ಹೆಚ್ಚುವರಿ ಆದಾಯಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಮಸೂದೆಗಳನ್ನು ಮಂಡಿಸಲಾಗಿದೆ ಎಂಬುದು ಸರ್ಕಾರದ ವಾದವಾಗಿದೆ. ಖಾಸಗಿ ಹೂಡಿಕೆದಾರರಿಗೆ ಇರುವ ನಿಯಂತ್ರಣಗಳನ್ನು ನಿವಾರಿಸುವುದು ಅಗತ್ಯ ಸರಕುಗಳ ಮಸೂದೆಯ ಧ್ಯೇಯವಾಗಿದೆ ಎಂದು ಮಸೂದೆ ಮಂಡನೆ ಸಂದರ್ಭದಲ್ಲಿ ಕೃಷಿ ಸಚಿವರು ತಿಳಿಸಿದ್ದಾರೆ.

ಕಾರ್ಪೆರೇಟ್ ಕಂಪನಿ ಪರ

ಈ ಮಸೂದೆಗಳು ರೈತ ವಿರೋಧಿ ಎನ್ನುವುದು ಶಿರೋಮಣಿ ಅಕಾಲಿ ದಳ, ಪ್ರತಿಪಕ್ಷಗಳು ಹಾಗೂ ರೈತ ಸಂಘಟನೆಗಳ ಆರೋಪವಾಗಿದೆ. ಕೃಷಿ ವಲಯದಲ್ಲಿ ಕಾರ್ಪೆರೇಟ್ ಕಂಪನಿಗಳು ಮೇಲುಗೈ ಪಡೆಯಲು ಅವು ನೆರವಾಗುತ್ತವೆ ಎಂದು ದೂರಿದ್ದಾರೆ. ಪಂಜಾಬ್​ನಲ್ಲಿ ಹಲವು ದಶಕಗಳ ಕಾಲ ರೈತರು ಶ್ರಮ ಪಟ್ಟು ಕೃಷಿ ಕ್ರಾಂತಿ ಮಾಡಿದ್ದಾರೆ. ಅವುಗಳ ಫಲವೆಲ್ಲ ಈ ಮಸೂದೆಗಳಿಂದಾಗಿ ಮಣ್ಣು ಪಾಲಾಗುತ್ತದೆ ಎಂದು ಲೋಕಸಭೆಯಲ್ಲಿ ಅಕಾಲಿ ದಳದ ನಾಯಕ ಸುಖಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.

ಗಸ್ತು ತಡೆಯಲು ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ

ಪೂರ್ವ ಲಡಾಖ್ ಪ್ರದೇಶದಲ್ಲಿ ಭಾರತೀಯ ಯೋಧರು ಗಸ್ತು ತಿರುಗುವುದನ್ನು ವಿಶ್ವದ ಯಾವುದೇ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ರಾಜ್ಯಸಭೆಯಲ್ಲಿ ಗುರುವಾರ ಹೇಳಿದರು. ಗಡಿ ಪ್ರದೇಶದಲ್ಲಿ ಕಳೆದ ಏಪ್ರಿಲ್​ನಲ್ಲಿ ಸೇನಾ ನಿಯೋಜನೆಯನ್ನು ಚೀನಾ ಹೆಚ್ಚಿಸಿತ್ತು. ಬಳಿಕ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತೀಯ ಸೇನೆಯ ಗಸ್ತನ್ನು ತಡೆಯಲು ಯತ್ನಿಸಿತ್ತು. ಕಳೆದ ಮೇ ತಿಂಗಳಲ್ಲಿ ವಾಸ್ತವ ಗಡಿ ರೇಖೆಯ ಸಮೀಪ ಹಲವು ಬಾರಿ ಗಡಿ ಉಲ್ಲಂಘನೆ ಮಾಡಲು ಚೀನಾ ಸೇನೆ ಯತ್ನಿಸಿತ್ತು. ದ್ವಿಪಕ್ಷೀಯ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲೇ ಕಳೆದ ಆಗಸ್ಟ್ 29, 30ರಂದು ಚೀನಾ ಸೇನೆ ಗಡಿಯಲ್ಲಿ ಪ್ರಚೋದನಾಕಾರಿಯಾಗಿ ವರ್ತಿಸಿತ್ತು. ಇದಕ್ಕೆ ಭಾರತೀಯ ಯೋಧರು ತಕ್ಕ ಉತ್ತರ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಒಪ್ಪಂದ ಉಲ್ಲಂಘನೆ

ದ್ವಿಪಕ್ಷೀಯ ಒಪ್ಪಂದಕ್ಕೆ ಚೀನಾ ಸೇನೆ ಗೌರವ ನೀಡುತ್ತಿಲ್ಲ. 1993 ಹಾಗೂ 1996ರ ಒಪ್ಪಂದವನ್ನು ಚೀನಾ ಉಲ್ಲಂಘನೆ ಮಾಡಿದೆ. ಗಡಿಯಲ್ಲಿ ಶಾಂತಿ ನೆಲೆಸುವಂತಾಗಲು ವಾಸ್ತವ ಗಡಿ ರೇಖೆಯನ್ನು ಗೌರವಿಸುವುದು ಅಗತ್ಯ ಎಂದು ರಾಜನಾಥ ಹೇಳಿದರು.

ಉದ್ವಿಗ್ನತೆಗೆ ಚೀನಾ ಕಾರಣ: ಚೀನಾದ ಯಾವುದೇ ಕಾರ್ಯಾಚರಣೆಗೆ ಉತ್ತರ ನೀಡಲು ಭಾರತ ಸಿದ್ಧವಿದೆ. ಚೀನಾ ಸೇನೆ ಕಾರಣದಿಂದಲೇ ಗಲ್ವಾನ್​ನಲ್ಲಿ ಯುದ್ಧಸ್ಥಿತಿ ನಿರ್ವಣವಾಯಿತು. ಭಾರತ ಶಾಂತಿ ಬಯಸುವ ದೇಶವಾಗಿದೆ. ಆದರೆ ದೇಶದ ರಕ್ಷಣೆ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆ ಇಲ್ಲ್ಲ ಎಂದು ರಾಜನಾಥ ಸಿಂಗ್ ಹೇಳಿದರು.

ಅಧಿವೇಶನದಲ್ಲಿ ಸರ್ಕಾರ ಹೇಳಿದ್ದು...

  • ಕಳೆದ ವರ್ಷ ಸೆಪ್ಟೆಂನರ್​ನಲ್ಲಿ ಅಮೆರಿಕದ ಹ್ಯೂಸ್ಟನ್​ನಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮಕ್ಕೆ ಭಾರತ ಸರ್ಕಾರ ಯಾವುದೇ ಖರ್ಚು ಮಾಡಿಲ್ಲ
  • ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಸ್ತರಣೆಗಾಗಿ ಭಾರತ ಇತರ ದೇಶಗಳೊಂದಿಗೆ ಸೇರಿ ಪ್ರಯತ್ನಗಳನ್ನು ಮುಂದುವರಿಸಿದೆ.
  • 3,20,422 ಕುಟುಂಬಗಳಿಗೆ ಸೌಭಾಗ್ಯ ಯೋಜನೆಯಡಿ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ.
  • 2021ರ ಆರಂಭದ ವೇಳೆಗೆ ಕರೊನಾ ಔಷಧ ಸಿದ್ಧವಾಗಿರುವ ಸಾಧ್ಯತೆಯಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net