ಕೇಂದ್ರ ಸರ್ಕಾರದ ಅಕ್ಕಿಯನ್ನು ರಾಜ್ಯ ಸರ್ಕಾರ ನಮ್ಮದೆಂದು ಹೇಳಿಕೊಳ್ಳುತ್ತಿದೆ / ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಗೆ ತಕ್ಕ ಪಾಠ ಕಲಿಸಬೇಕು / ಅರವಿಂದ ಲಿಂಬಾವಳಿ

Published on

ವಿಜಯವಾಣಿ ಸುದ್ದಿಜಾ ಕೋಲಾರ/ ಚಿಂತಾಮಣಿ
ಕೇಂದ್ರ ಸರ್ಕಾರದಿಂದ ಕೊಡುತ್ತಿರುವ ೫ ಕೆ.ಜಿ ಅಕ್ಕಿಯನ್ನು ಸಿದ್ದರಾಮಯ್ಯ ನಾವು ಕೊಡುತ್ತಿದ್ದೇವೆ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ, ಇಂತಹ ಸುಳ್ಳು ಹೇಳುವವರಿಗೆ ಈ ಲೋಕಸಭಾ ಚುನಾವಣೆಯಲ್ಲಿ ಬುದ್ದಿಕಲಿಸಬೇಕು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಕಾರ್ಯಕರ್ತರಿಗೆ ಕರೆ ನೀಡಿದರು.

ಚಿಂತಾಮಣಿ ನಗರದ ಕೆ.ಎಂಡಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕೋಲಾರ ಲೋಕಸಭಾ ವ್ಯಾಪ್ತಿಯ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು ದೇಶದ ರಕ್ಷಣೆ ವಿಚಾರದಲ್ಲಿ ಪಾಕಿಸ್ತಾನ, ಚೀನಾ ಸೇರಿದಂತೆ ಯಾವುದೇ ರಾಷ್ಟ್ರಗಳ ಜೊತೆ ರಾಜಿಯಾಗದೆ ದೇಶದ ರಕ್ಷಣೆ ಮಾಡುತ್ತಿರುವುದರಿಂದ ದೇಶದ ರಕ್ಷಣೆಗಾಗಿ ಈ ಚುನಾವಣೆ ದೇಶದಲ್ಲಿ ನಡೆಯುತ್ತಿದೆ ಎಂದರು.

ಕಳೆದ ೫೦೦ ವರ್ಷಗಳಿಂದ ರಾಮನ ಜನ್ಮ ಸ್ಥಳವನ್ನು ಪವಿತ್ರ ಸ್ಥಾನ ಮಾಡಲು ಹೋರಾಟ ಮಾಡಿಕೊಂಡು ಬರಬೇಕಾಯಿತು ಕೊನೆಗೆ ಮೋದಿ ಸರ್ಕಾರದಲ್ಲಿ ಅಯೋದ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಲಾಯಿತು. ಮೊದಲು ನಮ್ಮ ದೇಶದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ರವರು ವಿದೇಶಕ್ಕೆ ಹೋದಾಗ ವಿದೇಶದಲ್ಲಿ ನಮ್ಮ ಪ್ರಧಾನಿಗಳೇ ತಲೆ ತಗ್ಗಿಸಿ ನಡೆಯುತ್ತಿದ್ದರು, ಆದರೆ ಇದೀಗ ಭಾರತೀಯ ಸಾಮಾನ್ಯ ನಾಗರೀಕರು ವಿದೇಶಕ್ಕೆ ಹೋದಾಗ ಎದೆಯುಬ್ಬಿಸಿ ನಡೆಯುತ್ತಾರೆ, ಅಷ್ಟರ ಮಟ್ಟಿಗೆ ಬಾರತದ ಗೌರವ ವಿದೇಶದಲ್ಲಿ ಹೆಚ್ಚಾಗಿದೆ ಎಂದರು.

ಸಂಸದ ಎಸ್ ಮುನಿಸ್ವಾಮಿ ಮಾತನಾಡಿ, ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲಾಗಿದೆ, ಒಂದು ಕಡೆ ಕೆ.ಹೆಚ್ ಮುನಿಯಪ್ಪ ಬಣ ಇನ್ನೊಂದು ಬಣ ಕಿತ್ತಾಟದ ನಡುವೆ ಬೆಂಗಳೂರಿನ ವ್ಯಕ್ತಿಯನ್ನು ತಂದು ಅಭ್ಯರ್ಥಿ ಮಾಡಿದ್ದಾರೆ. ನಾಮ ಪತ್ರ ಸಲ್ಲಿಸುವಾಗಲೂ ಎರಡು ಗುಂಪುಗಳ ಜೊತೆ ಎರಡು ನಾಮಪತ್ರ ಸಲ್ಲಿಸಿದ್ದಾರೆ, ಈ ಎರಡೂ ಗುಂಪುಗಳ ನಡುವೆ ಕಾಂಗ್ರೆಸ್ ಅಭ್ಯರ್ಥಿ ಬಲಿಪಶುವಾಗುತ್ತಿದ್ದಾರೆ.
ಕೋಲಾರಕ್ಕೆ ಹಾಲು ಉತ್ಪಾದಕರ ಒಕ್ಕೂಟ ಆಗಲು ಪ್ರಮುಖ ಕಾರಣ ಮಲ್ಲೇಶ್ ಬಾಬು ರವರ ತಂದೆ ದಿವಂಗತ ಮುನಿಸ್ವಾಮಿ, ಮಲ್ಲೇಶ್ ಬಾಬು ರವರ ತಂದೆ ಜಿಲ್ಲಾಧಿಕಾರಿಯಾಗಿದ್ದರು ತಾಯಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದರು ಉತ್ತಮ ಹಿನ್ನಲೆಯಲ್ಲಿರುವ ಕುಟುಂಬದಿAದ ಬಂದಿರುವ ವ್ಯಕ್ತಿ ಮಲ್ಲೇಶ್ ಬಾಬು ಅದಕ್ಕಾಗಿ ಎಲ್ಲರೂ ಸಭ್ಯ ಕುಟುಂಬದ ವ್ಯಕ್ತಿ ಮಲ್ಲೇಶ್ ಬಾಬು ರವರಿಗೆ ಮತ ನೀಡಲು ಮನವಿ ಮಾಡಿದರು.

ಸಾವಿರಾರು ಕೋಟಿ ವೆಚ್ಚದಲ್ಲಿ ಕೋಲಾರ ಜಿಲ್ಲೆಗೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮಾಡಲು ಅನುದಾನ ಕೊಟ್ಟಿದ್ದು ಮೋದಿ ಸರ್ಕಾರ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಅರಣ್ಯ ಅಧಿಕಾರಿಗಳನ್ನು ಛೂ ಬಿಟ್ಟು ರೈತರ ಜಮೀನುಗಳನ್ನು ಕಬಳಿಸುತ್ತಿದ್ದಾರೆ. ರಾಮನ ಪ್ರತಿಷ್ಟಾಪನೆ ದಿನ ನಮ್ಮ ಗ್ರಾಮಗಳಲ್ಲಿ ರಾಮನ ಬಾವುಟ ಕಟ್ಟಲು ಹೋದಾಗ ಎಲ್ಲವನ್ನು ಕಿತ್ತುಹಾಕಿ ಕೇಸ್ ಗಳನ್ನು ಮಾಡಿದ ರಾಮ ವಿರೋಧಿ ಪಕ್ಷ ಕಾಂಗ್ರೆಸ್ ಆದ್ರೆ ಮುಸಲ್ಮಾನರಿಗೆ ಹತ್ತು ಸಾವಿರ ಕೋಟಿ ಅನುದಾನ ಕೊಟ್ಟು ಮುಸ್ಲೀಮರ ಪರ ನಿಂತಿದ್ದಾರೆ ಎಂದು ಹರಿಹಾಯ್ದರು.

ಶಾಸಕ ಸಮೃದ್ದಿ ಮಂಜುನಾಥ್ ಮಾತನಾಡಿ ಇಡೀ ಭಾರತ ದೇಶದಲ್ಲಿ ಅತೀ ದೊಡ್ಡ ಚುನಾವಣೆ ನಡೆಯುತ್ತಿದೆ, ಮೋದಿ ಪರ ಒಂದು ಬಳಗ, ಮೋದಿ ವಿರುದ್ದ ಇನ್ನೊಂದು ಬಳಗ ಈ ಎರಡೂ ಬಣಗಳ ನಡುವೆ ನಡೆಯುತ್ತಿರುವ ಜನ ಅಷ್ಟೇ.

ಕೋಲಾರ ಕಾಂಗ್ರೆಸ್ ನಲ್ಲಿ ನಿಜವಾದ ಗಂಡಸು ಇದ್ದಿದ್ರೆ ಆ ಗಂಡಸಿಗೆ ಲೋಕಸಭಾ ಟಿಕೆಟ್ ಕೊಡುತ್ತಿದ್ದರು ಅದರೆ ಕೋಲಾರ ಕಾಂಗ್ರೆಸ್ ನಲ್ಲಿ ಗಂಡಸರು ಇಲ್ಲದ ಕಾರಣ ಬೆಂಗಳೂರಿನಿAದ ತಂದು ನಿಲ್ಲಿಸಿದ್ದಾರೆ, ಈ ರಾಜ್ಯ ಸರ್ಕಾರದಲ್ಲಿ ಕುಡಿಯುವ ನೀರು ಕೊಡುವ ಗತಿ ಇಲ್ಲದ ಗತಿಗೆಟ್ಟ ಸರ್ಕಾರ ರಾಜ್ಯದಲ್ಲಿದೆ, ಈ ಸರ್ಕಾರದಲ್ಲಿ ನಾನು ಶಾಸಕನಾಗಿರುವುದಕ್ಕೆ ನನಗೆ ಹಿಂಸೆ ಆಗುತ್ತಿದೆ.

ಬಲಗೈ ಸಮುದಾಯಕ್ಕೆ ಟಿಕೆಟ್ ಕೊಟ್ಟಿಲ್ಲ ಅಂತ ಬೇಜಾರಾಗಬೇಡಿ ಮೊದಲು ಟಿಕೆಟ್ ಕೊಟ್ಟಿದ್ದು, ನನಗೆ ಆದರೆ ನಾನು ಟಿಕೆಟ್ ಬೇಡ ಎಂದು ಮಲ್ಲೇಶ್ ಬಾಬು ರವರಿಗೆ ಟಿಕೆಟ್ ಕೊಡಿಸಿದೆ ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಜಾತಿ, ಧರ್ಮ ಬಿಟ್ಟು ಮಲ್ಲೇಶ್ ಬಾಬು ರವರಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎ ನಾರಾಯಣಸ್ವಾಮಿ, ಮಾಜಿ ಶಾಸಕರಾದ ಜೆ.ಕೆ ಕೃಷ್ಣರೆಡ್ಡಿ, ನಂದೀಶ್ ರೆಡ್ಡಿ, ಕೆ.ಎನ್ ರಾಜಣ್ಣ, ಮುಖಂಡರಾದ ಚಿಂತಾಮಣಿ ವೇಣುಗೋಪಾಲ ರೆಡ್ಡಿ, ವಾಣಿ ಕೃಷ್ಣಾರೆಡ್ಡಿ, ಬಾಗೇಪಲ್ಲಿ ಮುನಿರಾಜು, ಶಿಡ್ಲಘಟ್ಟ ರಾಮಚಂದ್ರೇಗೌಡ ಸೇರಿದಂತೆ ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ, ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.

ಚಿತ್ರ ೦೫ ಕೆ.ಎಲ್.ಆರ್. ೦೩ : ಚಿಂತಾಮಣಿ ನಗರದ ಕೆ.ಎಂ.ಡಿ. ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಒಗ್ಗಟ್ಟು ಪ್ರದರ್ಶನ ಮಾಡಿರುವುದು.

ಚಿತ್ರ ೦೫ ಕೆ.ಎಲ್.ಆರ್. ೦೩ಎ : ಚಿಂತಾಮಣಿ ನಗರದ ಕೆ.ಎಂ.ಡಿ. ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net