ಕೇಂದ್ರ ರೈಲು ಪ್ರಯಾಣ ದರ ಏರಿಸಿಲ್ಲವೇ

CM Siddaramaiah (8)
Published on

ದಾವಣಗೆರೆ: ರಾಜ್ಯದಲ್ಲಿ ಈ ಹಿಂದೆ ಕುಮಾರಸ್ವಾಮಿ ಸಿಎಂ ಆಗಿದ್ದ, ಬಿಜೆಪಿ ಒಳಗೊಂಡು ಎಲ್ಲರ ಅವಧಿಯಲ್ಲೂ ಬಸ್ ದರ ಹೆಚ್ಚಾಗಿದೆ. ಕೇಂದ್ರ ಸರ್ಕಾರವೂ ರೈಲು ದರ ಏರಿಕೆ ಮಾಡಿಲ್ಲವೇ ಎಂದು ಸಿಎಂ ಸಿದ್ದರಾಮಯ್ಯ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಹೆಚ್ಚಳವನ್ನು ಸಮರ್ಥಿಸಿಕೊಂಡರು.

ಎಂಬಿಎ ಗ್ರೌಂಡ್ ಹೆಲಿಪ್ಯಾಡ್ ಆವರಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಾರಿಗೆ ನೌಕರರ ವೇತನ, ಡೀಸಲ್ ಬೆಲೆ ಏರಿಕೆ, ನೂತನ ಬಸ್‌ಗಳ ಖರೀದಿ ಸೇರಿ ಹಣದುಬ್ಬರ ಉಂಟಾಗಿದೆ. ವರ್ಷಗಳ ಹಿಂದೆ ದರ ಹೆಚ್ಚಿಸಲಾಗಿದ್ದು, ಸಾರಿಗೆ ನಿಗಮಗಳು ತೊಂದರೆಯಲ್ಲಿವೆ ಎಂಬ ಕಾರಣ ಹಾಗೂ ಬೇಡಿಕೆಯೂ ಇದ್ದುದ್ದರಿಂದಾಗಿ ಬೆಲೆ ಏರಿಸಲಾಗಿದೆ ಎಂದರು.

ವಿರೋಧ ಪಕ್ಷಗಳದ್ದು, ಆರೋಪಿಸುವುದೇ ಕೆಲಸವಲ್ಲ. ದಾಖಲೆಗಳ ಸಮೇತ ಸಾಬೀತು ಪಡಿಸಬೇಕು. ಆಧಾರವಿಲ್ಲದೆ, ಮಾಡಬಾರದೆಂದು ರಾಜ್ಯ ಸರ್ಕಾರ ಶೇ. 60ರಷ್ಟು ಕಮಿಷನ್ ಪಡೆಯುತ್ತಿದೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದರು.

ಕೆಪಿಸಿಸಿ ಅಧ್ಯಕ್ಷರ, ಸಿಎಂ ಬದಲಾವಣೆ ಪಕ್ಷದ ವರಿಷ್ಠರ ತೀರ್ಮಾನ. ಖಾಲಿ ಇರುವ ಸಚಿವ ಸ್ಥಾನ ಭರ್ತಿಗೂ ಹೈಕಮಾಂಡ್‌ನೊಂದಿಗೆ ಚರ್ಚಿಸಲಾಗುವುದು. ಇನ್ನೂ ಜಿಪಂ, ತಾಪಂ ಚುನಾವಣೆ ವಿಚಾರ ನ್ಯಾಯಾಲಯದ ಮುಂದಿದ್ದು, ಅಲ್ಲಿಯೇ ಇತ್ಯರ್ಥವಾಗಬೇಕು. ಚುನಾವಣೆ ನಡೆಸಲು ನಾವು ತಯಾರಿದ್ದೇವೆ ಎಂದರು.

ಒಳಮೀಸಲಾತಿಗೆ ಬದ್ಧ: ಒಳಮೀಸಲಾತಿ ನೀಡುವ ಸಂಬಂಧ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಜಾರಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜಕೀಯ ಚರ್ಚೆಯಲ್ಲ: ರಾಜಕಾರಣಿಗಳು ಒಂದೆಡೆ ಊಟಕ್ಕೆ ಸೇರಿದರೆ, ಬಣ್ಣ ಕಟ್ಟಲಾಗುತ್ತದೆ. ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಭೋಜನಕ್ಕಾಗಿ ಸಚಿವರು ಸೇರುವುದು ತಪ್ಪಾ ಎಂದು ಪ್ರಶ್ನಿಸಿದರು.

ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವ ಕುರಿತು ಪರಿಶೀಲಿಸಲಾಗುವುದು. ಮಾರ್ಚ್‌ನಲ್ಲಿ ಬಜೆಟ್ ಮಂಡಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net