

ಶಿರಸಿ: ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ-ಆಪರೇಟಿವ್ (ಕೆಡಿಸಿಸಿ) ಬ್ಯಾಂಕ್ ಚುನಾವಣೆ ನ. 11ರಂದು ನಡೆಯಲಿದ್ದು, ಇದು ರಾಜಕೀಯ ಪಕ್ಷಗಳ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಪುನರಾಯ್ಕೆ ಬಯಸಿದ ನಿರ್ದೇಶಕರ ವಿರುದ್ಧ ಹೊಸ ಅಭ್ಯರ್ಥಿಗಳು ತೊಡೆ ತಟ್ಟುತ್ತಿದ್ದು, ಭಾರಿ ಪೈಪೋಟಿ ಆರಂಭವಾಗಿದೆ.
ಬ್ಯಾಂಕ್ನ 11 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ 5 ಜಿಲ್ಲಾ ಮಟ್ಟದ ಸಂಸ್ಥೆಗಳು ಸೇರಿ 16 ಕ್ಷೇತ್ರಗಳಿಗೆ ನೂತನ ನಿರ್ದೇಶಕರ ಆಯ್ಕೆಗೆ ಕಸರತ್ತು ಆರಂಭವಾಗಿದೆ. ಒಟ್ಟು 287 ಮತದಾರರು ಬ್ಯಾಂಕ್ನ ಚುನಾವಣೆಯಲ್ಲಿ ಹಕ್ಕು ಚಲಾಯಿಸಲಿದ್ದಾರೆ. ಅ. 30ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ನಾಮಪತ್ರ ಸಲ್ಲಿಕೆಗೆ ನ. 3 ಕೊನೆಯ ದಿನವಾಗಿದೆ.
ಸಹಕಾರ ಭಾರತಿ ಎಂಟ್ರಿ: ಇದೇ ಮೊದಲ ಬಾರಿಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ನೇತೃತ್ವದಲ್ಲಿ 8ಕ್ಕೂ ಹೆಚ್ಚು ಸಹಕಾರಿಗಳು ಸ್ಪರ್ಧೆಗೆ ಉತ್ಸಾಹ ತೋರಿದ್ದು, ಸಹಕಾರ ಭಾರತಿ ರಾಜ್ಯಾಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಈಗಾಗಲೇ ಇದನ್ನು ಅಧಿಕೃತವಾಗಿ ಘೊಷಿಸಿದ್ದಾರೆ. ಸುರೇಶ್ಚಂದ್ರ ಹೆಗಡೆ, ಚಂದ್ರು ದೇವಾಡಿಗ ಎಸಳೆ, ಮೋಹನದಾಸ ನಾಯಕ, ಜಿ.ಎಂ. ಹೆಗಡೆ ಮುಳಖಂಡ,
ಆರ್.ವಿ. ಭಾಗವತ, ಶಿವಾನಂದ ಹೆಗಡೆ ಕಡತೋಕ, ಜಿ.ಟಿ. ಹೆಗಡೆ ತಟ್ಟೀಸರ, ಎಲ್.ಟಿ. ಪಾಟೀಲ ಸ್ಪರ್ಧೆ ಬಹುತೇಕ ಖಚಿತವಾಗಿದೆ.
ಇನ್ನು ಕಾಂಗ್ರೆಸ್ ಪರವಾಗಿ ಆರ್.ಎಂ. ಹೆಗಡೆ ಬಾಳೇಸರ, ಎಸ್.ಎಂ. ಹೆಗಡೆ ಮಾನೀಮನೆ, ಎಸ್.ಎಲ್. ಘೊಟ್ನೇಕರ, ಸತೀಶ ಸೈಲ್, ಮಂಕಾಳು ವೈದ್ಯ, ರಾಮಕೃಷ್ಣ ಹೆಗಡೆ ಕಡವೆ ಹಾಗೂ ಇತರ ಕೆಲವರ ಸ್ಪರ್ಧೆ ಅಂತಿಮವಾಗಿದೆ. ಭಾಸ್ಕರ ಹೆಗಡೆ ಕಾಗೇರಿ, ವಿನಾಯಕ ಹೆಗಡೆ, ಜಿ.ಆರ್. ಹೆಗಡೆ ಸೋಂದಾ ಅವರ ನಿಲುವು ತಿಳಿದುಬರಬೇಕಿದೆ. ಇವರಲ್ಲಿ ಬಹುತೇಕರು ಹಿಂದಿನ ನಿರ್ದೇಶಕರಾಗಿದ್ದು, ಪುನರಾಯ್ಕೆ ಬಯಸಿದ್ದಾರೆ.
5 ಕ್ಷೇತ್ರಕ್ಕೆ ತೀವ್ರ ಪೈಪೋಟಿ: ಬ್ಯಾಂಕ್ ಚುನಾವಣೆಯಲ್ಲಿ ಜಿಲ್ಲಾ ಮಟ್ಟವನ್ನು ಪ್ರತಿನಿಧಿಸುವ ತಾಲೂಕು ಕೃಷಿ ಹುಟ್ಟುವಳಿಗಳ ಮಾರಾಟಗಾರರ ಸಂಘ, ಗ್ರಾಹಕರ ಸಂಘ ಮತ್ತು ಸಂಸ್ಕರಣಾ ಸಹಕಾರಿ ಸಂಘ, ಔದ್ಯೋಗಿಕ ಸಹಕಾರಿ ಸಂಘ, ಅರ್ಬನ್ ಬ್ಯಾಂಕ್ಗಳು ಹಾಗೂ ಕೃಷಿಯೇತರ ಸಹಕಾರ ಸಂಘ, ಹಾಲು ಉತ್ಪಾದಕರ, ಕಾರ್ವಿುಕರ ಹಾಗೂ ಫಾರ್ವಿುಂಗ್ ಸಹಕಾರಿ ಸಂಘದ ಕ್ಷೇತ್ರಗಳಿಗೆ ತೀವ್ರ ಪೈಪೋಟಿ ಆರಂಭವಾಗಿದೆ. ಈ ಕ್ಷೇತ್ರಗಳಲ್ಲಿ ಹಾಲಿ ನಿರ್ದೇಶಕರ ವಿರುದ್ಧ ಹೊಸ ಮುಖಗಳು ಸ್ಪರ್ಧಿಸಲು ಭರದ ಸಿದ್ಧತೆ ನಡೆಸಿರುವುದು ಚುನಾವಣೆ ಕಣದ ರಂಗು ಹೆಚ್ಚಿಸಲಿದೆ.
ಮತದಾರರು: ಕಾರವಾರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 7, ಶಿರಸಿ 72, ಸಿದ್ದಾಪುರ 22, ಯಲ್ಲಾಪುರ 11, ಮುಂಡಗೋಡ 09, ಹಳಿಯಾಳ 11, ಅಂಕೋಲಾ 7, ಕುಮಟಾ 13, ಹೊನ್ನಾವರ 11, ಭಟ್ಕಳ 6, ಜೊಯಿಡಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ 08 ಹಾಗೂ ಜಿಲ್ಲೆ ಪ್ರತಿನಿಧಿಸುವ ತಾಲೂಕು ಕೃಷಿ ಹುಟ್ಟುವಳಿಗಳ ಮಾರಾಟಗಾರರ ಸಂಘದಲ್ಲಿ 6, ಗ್ರಾಹಕರ ಸಂಘಗಳು ಮತ್ತು ಸಂಸ್ಕರಣಾ ಸಹಕಾರಿ ಸಂಘ 11, ಔದ್ಯೋಗಿಕ ಸಹಕಾರಿ ಸಂಘ 14, ಅರ್ಬನ್ ಬ್ಯಾಂಕ್ಗಳು ಹಾಗೂ ಕೃಷಿಯೇತರ ಸಹಕಾರ ಸಂಘಗಳು 71, ಹಾಲು ಉತ್ಪಾದಕರ, ಕಾರ್ವಿುಕರ ಹಾಗೂ ಫಾರ್ವಿುಂಗ್ ಸಹಕಾರಿ ಸಂಘದ ಕ್ಷೇತ್ರಕ್ಕೆ 53 ಮತದಾರರಿದ್ದಾರೆ.
ನೂರು ವರ್ಷಗಳ ಇತಿಹಾಸವಿರುವ ಬ್ಯಾಂಕ್ನ ಚುನಾವಣೆಯಲ್ಲಿ ಹಳೆಯ ನಿರ್ದೇಶಕರ ಜತೆ ಹೊಸ ಅಭ್ಯರ್ಥಿಗಳು ಹುಮ್ಮಸ್ಸು ತೋರುತ್ತಿದ್ದಾರೆ. ಇದರಲ್ಲಿ ರಾಜಕೀಯವೂ ಪ್ರವೇಶಿಸಿದೆ. ಆದರೆ, ಯಾರೇ ಗೆಲುವು ಪಡೆದರೂ ಬ್ಯಾಂಕ್ನ ಘನತೆಗೆ ತಕ್ಕಂತೆ ಅಧಿಕಾರ ನಡೆಸುವ ಜತೆ ಪಾರದರ್ಶಕ ಆಡಳಿತ ನೀಡಲು ಶ್ರಮಿಸಬೇಕು.
| ಎಸ್.ಎಲ್. ಘೊಟ್ನೇಕರ, ನಿಕಟಪೂರ್ವ ಅಧ್ಯಕ್ಷ