

ಸಾಲಿಗ್ರಾಮ: ಜನರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಕೋಟ್ಯಂತರ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಿದೆ. ಆದರೆ ನಿರ್ವಹಣೆ ಇಲ್ಲದೆ ಜನರಿಗೆ ಶುದ್ಧ ಕುಡಿಯುವ ನೀರು ತಲುಪುತ್ತಿಲ್ಲ. ಹೀಗಾಗಿ ಸರ್ಕಾರದ ಹಣ ಪೋಲಾಗುತ್ತಿದೆ. ಸಾಲಿಗ್ರಾಮ ತಾಲೂಕಿನಲ್ಲಿ ಶುದ್ಧ ನೀರು ಕುಡಿಯುವ ಘಟಕಗಳ ಸಮಸ್ಯೆ ಹೇಳ ತೀರದಾಗಿದೆ.
ಸಾಲಿಗ್ರಾಮ ತಾಲೂಕಿನ ಮುಂಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಜನಹಳ್ಳಿ, ಅರಕೆರೆ, ಉದಯಗಿರಿ, ಗುಳುವಿನ ಅತ್ತಿಕುಪ್ಪೆ, ಕಾವಲು ಹೊಸೂರು, ಚಿಕ್ಕಭೇರ್ಯ, ಗೇರದಡ, ಬಸವನಪುರ, ಕೆಂಚನಹಳ್ಳಿ ಗ್ರಾಮಗಳು ಸೇರಲಿದ್ದು, ಈ ವ್ಯಾಪ್ತಿಯಲ್ಲಿ ಜನರು ಶುದ್ಧ ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದಾರೆ.
ಗುಳುವಿನ ಅತ್ತಿಕುಪ್ಪೆ, ಚಿಕ್ಕಭೇರ್ಯ, ಮಂಜನಹಳ್ಳಿ ಗ್ರಾಮಗಳಲ್ಲಿ 500 ಲೀಟರ್ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಸರ್ಕಾರದಿಂದ ನಿರ್ಮಿಸಲಾಗಿದೆ. ಆದರೆ ಚಿಕ್ಕಭೇರ್ಯದಲ್ಲಿ ನಿರ್ಮಿಸಿರುವ ಶುದ್ಧ ನೀರಿನ ಘಟಕ ಕೆಟ್ಟು 2 ವರ್ಷವಾಗಿದೆ. ಮುಂಜನಹಳ್ಳಿ ನೀರಿನ ಘಟಕ ಕೆಟ್ಟು 20 ದಿನಗಳಾಗಿದೆ. ಗುಳುವಿನ ಅತ್ತಿಕುಪ್ಪೆ ನೀರಿನ ಘಟಕ ಕೆಟ್ಟು ಸುಮಾರು 20 ದಿನಗಳಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ 9 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಇಲ್ಲದಂತಾಗಿದೆ. ಉಳಿದ 7 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕವೇ ಇಲ್ಲ. ಇದರಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಶುದ್ಧ ಕುಡಿಯುವ ನೀರಿಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅನೈರ್ಮಲ್ಯದಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.
500 ಲೀಟರ್ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಮಿಷನರಿಗಳ ವೆಚ್ಚ ಸುಮಾರು 5 ರಿಂದ 8 ಲಕ್ಷ ರೂ.ವರೆಗೆ ಖರ್ಚಾಗುತ್ತೆ. 1000 ಲೀಟರ್ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಲು ಮಿಷನರಿ ವೆಚ್ಚ ಸುಮಾರು 10 ಲಕ್ಷ ರೂ.ನಿಂದ 13 ಲಕ್ಷ ರೂ.ವರೆಗೆ ಆಗುತ್ತದೆ. ಗ್ರಾಮ ಪಂಚಾಯಿತಿಯಿಂದ ಘಟಕಕ್ಕೆ ಉಚಿತ ನೀರಿನ ವ್ಯವಸ್ಥೆ ಮಾಡಲಾಗಿದೆಯಾದರೂ ಘಟಕ ನಿರ್ವಹಣೆ ಮಾಡುವ ವ್ಯಕ್ತಿಗಳಿಗೆ ತಿಂಗಳಿಗೆ ಸುಮಾರು 3 ಸಾವಿರ ಸಬ್ಸಿಡಿಯನ್ನು ಸರ್ಕಾರವೇ ನೀಡುತ್ತದೆ. ನೀರಿಗಾಗಿ ಸಾರ್ವಜನಿಕರಿಂದ 1 ರೂ. ಮತ್ತು 5 ರೂ. ಕಾಯಿನ್ ಬಳಸಿ ಬರುವ ಆದಾಯ ವಿದ್ಯುತ್ ಬಿಲ್ ಮತ್ತು ಬಾಡಿಗೆದಾರರಿಗೆ ಸಿಗುತ್ತದೆ. ಆದರೂ ಅಧಿಕಾರಿಗಳ ನಿರ್ಲಕ್ಷೃದಿಂದ ನಿರ್ವಹಣೆ ಇಲ್ಲದೆ ಜನರಿಗೆ ಕುಡಿಯುವ ನೀರು ಸಿಗುತ್ತಿಲ್ಲ.
ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ 97 ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿದ್ದು, ಅಧಿಕಾರಿಗಳ ಮಾಹಿತಿಯಂತೆ ಆರೇಳು ದುರಸ್ತಿಯಲ್ಲಿವೆ. ಪ್ರತಿ 5 ವರ್ಷಕ್ಕೊಮ್ಮೆ ಶುದ್ಧ ಕುಡಿಯುವ ನೀರಿನ ಘಟಕದ ರೀಟೆಂಡರ್ ಆಗಬೇಕು. ಇಲ್ಲದಿದ್ದರೆ ನವೀಕೃತ ಆಗಬೇಕು. ಆದರೆ, ಟೆಂಡರ್ ಪಡೆದ ಗುತ್ತಿಗೆದಾರರ ನಿರ್ಲಕ್ಷೃದಿಂದ ಗ್ರಾಮಗಳಲ್ಲಿ ಎರಡು ವರ್ಷದಿಂದ ಕೆಟ್ಟು ನಿಂತಿರುವ ಘಟಕವನ್ನೇ ರಿಪೇರಿ ಮಾಡಿಸಿ ಜನರಿಗೆ ನೀರನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಆದರೂ, ಸರ್ಕಾರ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.
ಮುಂಗಾರು ಮಳೆ ಶುರುವಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ಶುದ್ಧ ನೀರಿನ ಘಟಕ ಕೆಟ್ಟು ನಿಂತಿರುವುದರಿಂದ ಹ್ಯಾಂಡ್‌ಪಂಪ್ ಬೋರ್ವೆಲ್ನಿಂದ ನೀರನ್ನು ತಂದು ಕುಡಿಯುವ ಪರಿಸ್ಥಿತಿ ಇದೆ. ಈ ಭಾಗದಲ್ಲಿ ಕೆಲವು ನೀರಿನ ಟ್ಯಾಂಕ್‌ಗಳು ಕೂಡ ದುರಸ್ತಿಯಲ್ಲಿವೆ. ನಲ್ಲಿಯಲ್ಲಿ ಬರುವ ನೀರು ತಳಮಟ್ಟದಲ್ಲಿ ಸುಣ್ಣದ ತಿಳಿ ಮತ್ತು ಕಬ್ಬಿಣದ ಪುಡಿ ಬರುತ್ತದೆ. ಜನರು ಸಂಬಂಧಪಟ್ಟ ಅಧಿಕಾರಿಗಳಿಗೆ ತೋರಿಸಿದರೂ ತಲೆಕೆಡಿಸಿಕೊಳ್ಳದೆ ನಿರ್ಲಕ್ಷೃ ತೋರಿದ್ದಾರೆ.
ಈಗಾಗಲೇ ಜ್ವರ, ಕೆಮ್ಮು ಸೇರಿದಂತೆ ಸಾಂಕ್ರಾಮಿಕ ರೋಗ ಹರಡುತ್ತಿರುವುದು ಕಣ್ಮುಂದೆ ಕಾಣುತ್ತಿದ್ದರೂ ಶುದ್ಧ ನೀರಿನ ಘಟಕವನ್ನು ರಿಪೇರಿ ಮಾಡಿಸಲು ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಶುದ್ಧ ಕುಡಿಯುವ ನೀರು ತರಲು 5 ಕಿ.ಮೀ. ಇರುವ ಭೇರ್ಯ ಗ್ರಾಮಕ್ಕೆ ಹೋಗಬೇಕಾಗಿದೆ. ಕೂಡಲೇ ಇದನ್ನು ಸರಿಪಡಿಸದಿದ್ದರೆ ಸಂಬಂಧಪಟ್ಟ ಇಲಾಖೆಯ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಜನರು ಎಚ್ಚರಿಕೆ ನೀಡುತ್ತಿದ್ದಾರೆ.
ಗುತ್ತಿಗೆದಾರರೊಂದಿಗೆ ಕೂಡಲೇ ಮಾತನಾಡುತ್ತೇನೆ. ಶೀಘ್ರದಲ್ಲೇ ಗುಳುವಿನ ಅತ್ತಿಕುಪ್ಪೆ, ಮುಂಜನಹಳ್ಳಿ, ಚಿಕ್ಕಭೇರ್ಯ ಮೂರು ಶುದ್ಧ ಕುಡಿಯುವ ನೀರಿನ ಘಟಕವನ್ನು ರಿಪೇರಿ ಮಾಡಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗುವುದು.
ರಾಜಾರಾಮ್
ಶುದ್ಧ ಕುಡಿಯುವ ನೀರಿನ ಘಟಕದ ತಾಲೂಕು ಕಾರ್ಯನಿರ್ವಹಣಾ ಅಧಿಕಾರಿ.
ಮುಂಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮೂರು ಶುದ್ಧ ನೀರಿನ ಘಟಕವನ್ನೂ ರಿಪೇರಿ ಮಾಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಜತೆಗೆ ಕೆಂಚನಹಳ್ಳಿ ಗ್ರಾಮಕ್ಕೆ ಹೊಸ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಲು ಮನವಿ ಮಾಡಿದ್ದೇನೆ.
ಉಮಾ ಮಾದೇವ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಗ್ರಾಮ ಪಂಚಾಯಿತಿಯಿಂದ ಶುದ್ಧ ಕುಡಿವ ನೀರಿನ ಘಟಕಕ್ಕೆ ಸಂಪೂರ್ಣ ನೀರಿನ ವ್ಯವಸ್ಥೆ ನಾವು ಮಾಡುತ್ತಿದ್ದೇವೆ. ಸಮಸ್ಯೆ ಆಗಿರುವುದು ಸಂಬಂಧಿಸಿದ ಅಧಿಕಾರಿಗಳು ಮತ್ತು ಟೆಂಡರ್‌ದಾರರಿಂದ. ಅವರು ವರ್ಷಕ್ಕೆ ಒಂದಿಷ್ಟು ತೆರಿಗೆ ಹಣ ಕಟ್ಟಿಕೊಡಬೇಕು. ಆದರೂ ಕಟ್ಟುತ್ತಿಲ್ಲ. ಕೂಡಲೇ ಸರಿಮಾಡಿಸುವಂತೆ ನಾನು ಒಮ್ಮೆ ಮಾತನಾಡುತ್ತೇನೆ.
ಪ್ರತಾಪ್, ಮುಂಜನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ