

ಪಿರಿಯಾಪಟ್ಟಣ: ಪಿರಿಯಾಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವೆಂಕಟೇಶ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ತಾಲೂಕಿನಾದ್ಯಂತ ಶನಿವಾರ ಮುಂಜಾನೆಯಿಂದಲೇ ಟಿವಿ ಮುಂದೆ ಕುಳಿತ ಕಾರ್ಯಕರ್ತರು ಫಲಿತಾಂಶಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದರು. ಮತ ಎಣಿಕೆಯ ಪ್ರತಿ ಸುತ್ತಿನಲ್ಲೂ ಕಾಂಗ್ರೆಸ್ ಅಭ್ಯರ್ಥಿ ಕೆ.ವೆಂಕಟೇಶ್ ಮುನ್ನಡೆ ಕಾಯ್ದುಕೊಂಡು, ಅಂತಿಮವಾಗಿ ವಿಜಯಿಯಾದ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ ಮನೆಯಿಂದ ಹೊರಬಂದು ಪಟಾಕಿ ಸಿಡಿಸಿ ಜೈಕಾರ ಕೂಗುತ್ತ ಸಂಭ್ರಮಿಸಿದರು.
ಪಟ್ಟಣದ ಬಸವೇಶ್ವರ ವೃತ್ತದ ಬಳಿ ಜಮಾಯಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುತ್ತ ಕೆ.ವೆಂಕಟೇಶ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ವರಿಷ್ಠರ ಪರ ಜೈಕಾರ ಕೂಗುತ್ತ ಶುಭಾಶಯ ವಿನಿಮಯ ಮಾಡಿಕೊಂಡರು.
ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಮುಖಂಡರು ಮತ್ತು ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಬಾವುಟ ಹಿಡಿದು ಕಾಲ್ನಡಿಗೆ ಹಾಗೂ ಬೈಕ್‌ಗಳಲ್ಲಿ ಸಾಗಿ ಪಕ್ಷದ ಮುಖಂಡರ ಪರ ಜಯಘೋಷ ಮೊಳಗಿಸಿದರು.
ಸಾರ್ವಜನಿಕರಿಗೆ ಉಚಿತ ಊಟ: ಕೆ.ವೆಂಕಟೇಶ್ ಗೆಲುವಿನ ಮಾಹಿತಿ ಹೊರಬರುತ್ತಿದ್ದಂತೆ ಪಟ್ಟಣದ ಬಸ್ ನಿಲ್ದಾಣದ ಮುಂಭಾಗವಿರುವ ಹರಿಪ್ರಿಯಾ ಹೋಟೆಲ್ ನಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಊಟ ವಿತರಿಸಲಾಯಿತು. ಕಾಂಗ್ರೆಸ್ ಮುಖಂಡ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಪಿ.ಎನ್.ಚಂದ್ರಶೇಖರ್, ಟಿಎಪಿಸಿಎಂಎಸ್ ಸದಸ್ಯ ಬಿ.ಮುಕೇಶ್ ಕುಮಾರ್, ಕಮಲ್ ಆಗ್ರೋ ಸೆಂಟರ್‌ನ ಮಾಲೀಕ ಬಿ.ಜೆ.ಬಸವರಾಜ್, ಎಸ್‌ಎಂಎಸ್ ಗ್ರೂಪ್ಸ್‌ನ ಮಲ್ಲಿಕಾರ್ಜುನ, ಸಾಗರ್ ಆಗ್ರೋ ಟ್ರೇಡರ್ಸ್ ಮಂಜುನಾಥ್ ಹಾಗೂ ಹರಿಪ್ರಿಯಾ ಹೋಟೆಲ್ ಮಾಲೀಕ ಕುಮಾರ್ ಊಟದ ವ್ಯವಸ್ಥೆಯನ್ನು ಮಾಡಿದ್ದು, ಸುಮಾರು 1200ಕ್ಕೂ ಹೆಚ್ಚು ಮಂದಿ ಊಟ ಮಾಡಿದರು.
ಶಾಸಕರ ಬೂತ್‌ನಲ್ಲಿಯೇ ಕಾಂಗ್ರೆಸ್‌ಗೆ ಲೀಡ್: ಶಾಸಕ ಕೆ.ಮಹದೇವ್ ಮತ್ತು ಅವರ ಕುಟುಂಬ ಮತದಾನ ಮಾಡುವ ಮತಗಟ್ಟೆ ಸಂಖ್ಯೆ 197ರಲ್ಲಿಯೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ವೆಂಕಟೇಶ್ ಅವರಿಗೆ ಜೆಡಿಎಸ್‌ಗಿಂತ ಹೆಚ್ಚಿನ ಮತಗಳು ಬಂದಿವೆ. ಕೆ.ಮಹದೇವ್ 261 ಮತಗಳನ್ನು ಗಳಿಸಿದ್ದರೆ ಅವರ ಪ್ರತಿಸ್ಪರ್ಧಿ ಕೆ.ವೆಂಕಟೇಶ್ 421 ಮತಗಳನ್ನು ಗಳಿಸುವ ಮೂಲಕ 160ಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದಾರೆ. ಪುರಸಭೆ ಮಾಜಿ ಅಧ್ಯಕ್ಷ ಪಿ.ಕೆ.ವೇಣುಗೋಪಾಲ್ ಚುನಾವಣೆ ಘೋಷಣೆಯಾದ ಬಳಿಕ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಒಂದು ಪ್ರಮುಖ ಕಾರಣವಾಗಿದೆ.