

‘ರೈತರು, ತೋಟಗಾರಿಕಾ ಬೆಳೆಗಾರರು ಆತಂಕಗೊಳ್ಳುವ ಪ್ರಮೇಯವಿಲ್ಲ’ ಎಂದು ರಾಜ್ಯ ಸರ್ಕಾರ ಮತ್ತೊಮ್ಮೆ ಅಭಯ ನೀಡಿರುವುದಷ್ಟೇ ಅಲ್ಲದೆ ಅದಕ್ಕೆ ಪೂರಕವಾಗಿ ಕ್ರಮಗಳನ್ನು ಪ್ರಕಟಿಸಿದೆ. ಕೃಷಿ ಉತ್ಪನ್ನ, ಹಣ್ಣು, ತರಕಾರಿಗಳ ಸಾಗಾಣಿಕೆ ವಾಹನಗಳನ್ನು ತಡೆಯುವುದಿಲ್ಲವೆಂದು ಈ ಮುಂಚೆಯೇ ಪ್ರಕಟಿಸಿದ್ದ ಸರ್ಕಾರ ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೂ ನಿರ್ದೇಶನ ನೀಡಿದೆ. ಬೆಳೆಗಾರರು ಹಲವೆಡೆ ಹಣ್ಣು, ತರಕಾರಿಗಳನ್ನು ಬೀದಿಗೆ ಎಸೆದು, ಬೇಸರ ಹೊರಹಾಕಿದ ಘಟನೆಗಳ ಬೆನ್ನಲ್ಲೇ ಇಂಥದ್ದೊಂದು ನಿರ್ಧಾರ ಹೊರಬಿದ್ದಿತ್ತು ಎಂಬುದು ಗೊತ್ತಿರುವಂಥದ್ದೇ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ತಳೆಯಲಾಗಿದೆ. ಹೂವು ಬೆಳೆಗಾರರು ಭಾರಿ ಪ್ರಮಾಣದ ನಷ್ಟ ಅನುಭವಿಸಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ನಷ್ಟವನ್ನು ಅಂದಾಜಿಸಲು ಮೊದಲು ಸಮೀಕ್ಷೆ ನಡೆಸಲಾಗುತ್ತದೆ ಮತ್ತು ಆ ಬಳಿಕ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವ ತೀರ್ಮಾನ ಹೂವು ಬೆಳೆಗಾರರಲ್ಲಿ ಭರವಸೆ ಮೂಡಿಸಿದೆ. ಹಾಗಾಗಿ, ರೈತರು ಇಂಥ ಹೊತ್ತಲ್ಲಿ ತಾಳ್ಮೆ, ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಭೂಮಿ ಅಕ್ರಮ-ಸಕ್ರಮದ ಚಿಂತೆಯೂ ರೈತರನ್ನು ಕಾಡುತ್ತಿತ್ತು. 94ಎ ಅಡಿ ಭೂಮಿ ಅಕ್ರಮ ಸಕ್ರಮ ಅರ್ಜಿ ಇತ್ಯರ್ಥ ಆಗುವ ತನಕ ಪ್ರಕರಣ ದಾಖಲಿಸದಿರಲು ನಿರ್ಧರಿಸಲಾಗಿದೆ. ಬೇಸಿಗೆ ಅಡಿಯಿಟ್ಟು, ಹಲವೆಡೆ ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಾಗಾಗಿ, ಕುಡಿಯುವ ನೀರಿಗಾಗಿ 49 ಬರಪೀಡಿತ ತಾಲೂಕುಗಳಿಗೆ ತಲಾ 1 ಕೋಟಿ ರೂಪಾಯಿ ಹಾಗೂ ಗ್ರಾಮೀಣ ಪಟ್ಟಣ ಪಂಚಾಯಿತಿಗಳಿಗೆ ತಲಾ 50 ಲಕ್ಷ ರೂಪಾಯಿ ಬಿಡುಗಡೆ ಮಾಡಲು ಸಂಪುಟ ಸಮ್ಮತಿಸಿದೆ. ಲಾಕ್ಡೌನ್ನಿಂದ ಬಡವರಿಗೆ ದಿನಸಿ ಸಮಸ್ಯೆ ಎದುರಾಗಿದೆ. ಈ ನಿಟ್ಟಿನಲ್ಲಿ, ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಿರುವ ಎರಡು ಲಕ್ಷ ಜನರಿಗೂ ಎರಡು ತಿಂಗಳ ಪಡಿತರ ಉಚಿತವಾಗಿ ಕಲ್ಪಿಸುತ್ತಿರುವುದು ಸ್ವಾಗತಾರ್ಹ.
ಇನ್ನು, ಕೇಂದ್ರ ಸರ್ಕಾರದ ಹಾದಿಯಲ್ಲಿ ಸಾಗಿರುವ ರಾಜ್ಯ ಸರ್ಕಾರ ಸಚಿವರು, ಶಾಸಕರು, ವಿಧಾನ್ ಪರಿಷತ್ ಸದಸ್ಯರ ಶೇಕಡ 30ರಷ್ಟು ವೇತನವನ್ನು ಕಡಿತ ಮಾಡಲು ನಿರ್ಧರಿಸಿದೆ. ಈ ಮೂಲಕ ಉಳಿತಾಯವಾಗುವ 15 ಕೋಟಿ 36 ಲಕ್ಷ ರೂಪಾಯಿ ಮೊತ್ತ ಕರೊನಾ ನಿಧಿಗೆ ಸಂದಾಯವಾಗಲಿದೆ. ಪ್ರಧಾನಿ, ಸಚಿವರು, ಸಂಸದರ ವೇತನದಲ್ಲಿಯೂ ಶೇಕಡ 30ರಷ್ಟು ಕಡಿತವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
ಜನರನ್ನು ಮುಖ್ಯವಾಗಿ ಕಾಡುತ್ತಿರುವ ಪ್ರಶ್ನೆ ಎಂದರೆ ಏಪ್ರಿಲ್ 14ಕ್ಕೆ ಸಾಮಾಜಿಕ ದಿಗ್ಬಂಧನ ಅಂತ್ಯಗೊಳ್ಳುತ್ತದೆಯೋ, ಇಲ್ಲವೋ ಎಂಬುದು. ಈಗಿನ ಸ್ಥಿತಿ ಮತ್ತು ಹೆಚ್ಚುತ್ತಿರುವ ಸೋಂಕು ಪ್ರಕರಣಗಳು ನೋಡುತ್ತಿದ್ದರೆ ಲಾಕ್ಡೌನ್ ಇನ್ನಷ್ಟು ಅವಧಿಗೆ ಮುಂದುವರಿಯುವ ಸಾಧ್ಯತೆ ಇದೆ. ಆದರೆ, 21 ದಿನಗಳ
ಲಾಕ್ಡೌನ್ ಅನ್ನು ಕೇಂದ್ರ ಸರ್ಕಾರವೇ ವಿಧಿಸಿರುವುದರಿಂದ, ಕೇಂದ್ರದ ಮುಂದಿನ ನಿರ್ಧಾರವನ್ನು ಅನುಸರಿಸಲು ಸಿಎಂ ಯಡಿಯೂರಪ್ಪ ಮುಂದಾಗಿದ್ದಾರೆ. ಒಟ್ಟಿನಲ್ಲಿ, ಈ ಸ್ಥಿತಿ ವಿರುದ್ಧ ಸರ್ಕಾರವಂತೂ ಹೋರಾಟ ನಡೆಸುತ್ತ, ಜನರ ಹಿತ ಕಾಯಲು ಆದ್ಯತೆ ನೀಡಿದೆ. ಜನರೂ ತಮ್ಮ ಜವಾಬ್ದಾರಿ ಅರ್ಥೈಸಿಕೊಂಡು ಕರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಸಹಕರಿಸಬೇಕು.