

ಚಿತ್ರದುರ್ಗ: ನಗರದ ವಿವಿಧೆಡೆ ಉಂಟಾಗಿರುವ ಕುಡಿವ ನೀರಿನ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಸಂಸದ ಗೋವಿಂದ ಎಂ. ಕಾರಜೋಳ ನಗರಸಭೆ ಆಯುಕ್ತೆ ಎಂ.ರೇಣುಕಾ ಅವರಿಗೆ ಸೂಚಿಸಿದರು.
ನಗರದ ಸಂಸದರ ಕಚೇರಿಯಲ್ಲಿ ಶುಕ್ರವಾರ ಕುಡಿವ ನೀರು ಮತ್ತಿತರ ಸಮಸ್ಯೆಗಳ ಕುರಿತಂತೆ ಸಭೆ ನಡೆಸಿದ ಅವರು, ಚಿತ್ರದುರ್ಗಕ್ಕೆ ವಿವಿ ಸಾಗರ ಮತ್ತು ದಾವಣಗೆರೆ ಜಿಲ್ಲೆ ಶಾಂತಿಸಾಗರದಿಂದ ಕುಡಿಯುವ ನೀರು ಸರಬರಾಜಾಗುತ್ತಿದೆ. ಹೀಗಿದ್ದೂ ಕೂಡ ಚಿತ್ರದುರ್ಗದ ವಾರ್ಡ್ ನಂ.2.3,4 ಮತ್ತು 5 ಇನ್ನಿತರ ಕಡೆಗಳಲ್ಲಿ ಕಳೆದೊಂದು ತಿಂಗಳಿಂದ ಕುಡಿಯುವ ನೀರು ಸರಬರಾಜಾಗುತ್ತಿಲ್ಲ. ಬೇಸಿಗೆಯಲ್ಲಿ ನೀರು ಕೊಡಲಾಗುತ್ತಿಲ್ಲ ಎಂದರೆ ಏನರ್ಥ? ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ತಾಕೀತು ಮಾಡಿದರು.
ಶಾಂತಿಸಾಗರದ ಬಳಿ ವಿದ್ಯುತ್ ಪರಿವರ್ತಕ ಸುಟ್ಟಿರುವುದರಿಂದ ಸಮಸ್ಯೆ ಬಿಗಡಾಯಿಸಿದೆ. ಒಂದು ಹೆಚ್ಚುವರಿ ಪರಿವರ್ತಕವಿಲ್ಲ. ಇದರಿಂದ ತೊಂದರೆಯಾಗಿದೆ ಎಂದು ಆಯ್ತುಕರು ಪ್ರತಿಕ್ರಿಯಿಸಿದರು. ಕೂಡಲೇ ಪರಿವರ್ತಕ ದುರಸ್ತಿಪಡಿಸಬೇಕು ಎಂದು ಸೂಚಿಸಿದರು.
ಈ ವೇಳೆ ಬಿಡಿ ರಸ್ತೆ ವ್ಯಾಪಾರಸ್ಥರು ಸಂಸದರಿಗೆ ಮನವಿ ಸಲ್ಲಿಸಿ, ಡಿವೈಡರ್‌ನಿಂದಾಗಿ ಮಳೆಗಾಲದಲ್ಲಿ ನೀರು ಅಂಗಡಿಗಳೊಳಗೆ ನುಗ್ಗುತ್ತಿದೆ ಎಂದರು. ಇದಕ್ಕೆ ಪರಿಹಾರವಾಗಿ ಅಂಗಡಿಗಳಿರುವ ಕಡೆ ಸಣ್ಣ ಪ್ರಮಾಣದ ಚರಂಡಿ ನಿರ್ಮಿಸಿ ಜತೆಗೆ ಡಿವೈಡರ್ ಕೆಳಭಾಗದಲ್ಲಿ 6-8 ಇಂಚು ಪೈಪ್‌ಗಳನ್ನು ಅಳವಡಿಸಿ ಸಮಸ್ಯೆ ಪರಿಹರಿಸಬೇಕೆಂದು ಸಂಸದರು ಸೂಚಿಸಿದರು.
ನಗರ ವ್ಯಾಪ್ತಿಯ ಬಹುತೇಕ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ಕೊಟ್ಟಿಲ್ಲ. ಈಗಾಗಲೇ ವಿತರಿಸಿರುವ ಹಕ್ಕುಪತ್ರಗಳು ನೋಂದಣಿಯಾಗುತ್ತಿಲ್ಲ ಹಾಗೂ ನೋಂದಣಾಧಿಕಾರಿ ಕಚೇರಿಗೆ ಕಳುಹಿಸುವ 750ಕ್ಕೂ ಹೆಚ್ಚು ಹಕ್ಕುಪತ್ರಗಳು ನಗರಸಭೆಯಲ್ಲಿ ಬಾಕಿ ಇವೆ ಎಂದು ನಗರಸಭೆ ಮಾಜಿ ಸದಸ್ಯ ನಾಗರಾಜ್ ಹೇಳಿದರು.
ಏಪ್ರಿಲ್ 5ರೊಳಗೆ ಸಮಸ್ಯೆ ಬಗೆಹರಿಸಿ ಎಲ್ಲರೂ ಸೇರಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸೋಣ ಎಂದು ಸಂಸದರು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರಳಿ, ಮಧುಗಿರಿ ಅಧ್ಯಕ್ಷ ಹನುಮಂತೇಗೌಡ, ಸಂಪತ್‌ಕುಮಾರ್, ನಗರಸಭೆ ಇಂಜಿನಿಯರ್ ಮುನಿಸ್ವಾಮಿ ಮತ್ತಿತರರು ಇದ್ದರು.
---