ಕುಡಿಯುವ ನೀರಿಗೆ ಹಣ ಮೀಸಲಿಡಿ

17skp purasabhe
ಶಿಕಾರಿಪುರ ಪುರಸಭೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷೆ ಶೈಲಾ ಮಡ್ಡಿ, ಉಪಾಧ್ಯಕ್ಷೆ ರೂಪಾ ಮಂಜುನಾಥ್, ಸ್ಥಾಯಿಸಮಿತಿ ಅಧ್ಯಕ್ಷ ರಮೇಶ್, ಮುಖ್ಯಾಧಿಕಾರಿ ಭರತ್, ವ್ಯವಸ್ಥಾಪಕ ರಾಜ್‌ಕುಮಾರ್ ಇತರರಿದ್ದರು.
Published on

ಶಿಕಾರಿಪುರ: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಬಜೆಟ್‌ನಲ್ಲಿ ಹೆಚ್ಚಿನ ಹಣ ಮೀಸಲಿಡಬೇಕು ಎಂದು ಮಂಗಳವಾರ ನಡೆದ ಪುರಸಭೆಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸದಸ್ಯರು ಒಕ್ಕೊರಲಿಂದ ಆಗ್ರಹಿಸಿದರು.

ಸಭೆ ಆರಂಭವಾಗುತ್ತಿದ್ದಂತೆ ಸದಸ್ಯರು ಕುಡಿಯುವ ನೀರಿನ ಬಗ್ಗೆ ಪ್ರಸ್ತಾಪಿಸಿ, ಮುಂಬರುವ ಬೇಸಿಗೆಯಲ್ಲಿ ಯಾವ ಕಾರಣಕ್ಕೂ ಕುಡಿಯುವ ನೀರಿನ ತೊಂದರೆ ಆಗಬಾರದು. ಟ್ಯಾಂಕ್‌ಗಳ ಸ್ವಚ್ಛತೆ, ಹೊಸ ಮೋಟಾರ್‌ಗಳನ್ನು ಖರೀದಿಸುವುದು ಮುಖ್ಯ. ಶಿಕಾರಿಪುರ ಪಟ್ಟಣದಲ್ಲಿಯೇ ಜನಸಂಖ್ಯೆ 43 ಸಾವಿರ ದಾಟಿದೆ. ಅಲ್ಲದೆ ಶಿರಾಳಕೊಪ್ಪಕ್ಕೂ ನೀರಿನ ಸರಬರಾಜು ಆಗಬೇಕು ಎಂದು ಒತ್ತಾಯಿಸಿದರು.

ಪುರಸಭೆ ಅಧ್ಯಕ್ಷೆ ಶೈಲಾ ಮಡ್ಡಿ ಮಾತನಾಡಿ, ಸ್ವಚ್ಛ, ಸುಂದರ ಶಿಕಾರಿಪುರ ನಮ್ಮ ಗುರಿ. ಎಲ್ಲರೂ ಪಕ್ಷಭೇದ ಮರೆತು ಶಿಕಾರಿಪುರದ ಅಭಿವೃದ್ಧಿಯತ್ತ ಗಮನಹರಿಸುವ ಸಂಕಲ್ಪ ಮಾಡಬೇಕು. ರಸ್ತೆ, ಬೀದಿದೀಪ, ಕುಡಿಯುವ ನೀರು, ಪರಿಸರ ಸೇರಿದಂತೆ ವಿವಿಧ ಮೂಲ ಸೌಕರ್ಯಗಳಿಗೆ ಮೊದಲ ಆದ್ಯತೆ ನೀಡಬೇಕಾಗಿದೆ ಎಂದರು.

ಶಿಕಾರಿಪುರದ ತಾಲೂಕು ಕಚೇರಿ ರಸ್ತೆ, ಜಯಶ್ರೀ ಟಾಕೀಸ್ ರಸ್ತೆ ಸೇರಿ ಹಲವು ರಸ್ತೆಗಳು ಜನ ಹಾಗೂ ವಾಹನ ದಟ್ಟಣೆಯಿಂದ ಸಾರ್ವಜನಿಕರು, ಶಾಲಾ ಮಕ್ಕಳು, ವೃದ್ಧರು ಸಂಚರಿಸುವುದೇ ದುಸ್ತರವಾಗಿದೆ. ಅಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಸೇರಿ ಅಲ್ಲಿರುವ ವ್ಯಾಪಾರಿಗಳಿಗೆ ಸೂಕ್ತ ಸ್ಥಳ ನಿಗದಿ ಮಾಡಬೇಕು ಎಂದು ಸದಸ್ಯರು ಗಮನಕ್ಕೆ ತಂದರು.

ಪುರಸಭೆ ಉಪಾಧ್ಯಕ್ಷೆ ರೂಪಾ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಗುಂಡ, ಮುಖ್ಯಾಧಿಕಾರಿ ಭರತ್, ವ್ಯವಸ್ಥಾಪಕ ರಾಜ್‌ಕುಮಾರ್, ಜೇಸಿ ಚಂದನ ಅಧ್ಯಕ್ಷ ಪ್ರಶಾಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net