ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ

oppo_2
oppo_2
Published on

ಮದ್ದೂರು: ತಾಲೂಕಿನಲ್ಲಿ ರಸ್ತೆಗಳು, ನೀರಾವರಿ ಯೋಜನೆಗಳು ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಲು ಹಗಲಿರುಳು ಶ್ರಮಿಸುತ್ತಿರುವುದಾಗಿ ಶಾಸಕ ಕೆ.ಎಂ.ಉದಯ್ ತಿಳಿಸಿದರು.

ತಾಲೂಕಿನ ಕೂಳಗೆರೆ ಗ್ರಾಮದಲ್ಲಿ ಭಾನುವಾರ ಕೂಳಗೆರೆ ಗ್ರಾಮದಿಂದ ಇಗ್ಗಲೂರು ಏತ ನೀರಾವರಿ ಯೋಜನೆಯವರೆಗೆ ಅಚ್ಚುಕಟ್ಟು ರಸ್ತೆ ಮತ್ತು ಬನ್ನಹಳ್ಳಿ ಏತ ನೀರಾವರಿ ಯೋಜನೆಗಳಿಗೆ 5 ಕೋಟಿ ರೂ.ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ತಾಲೂಕಿನಲ್ಲಿ ಸಮಗ್ರ ಅಭಿವೃದ್ಧಿ ಮಾಡಬೇಕು ಎಂಬ ಉದ್ದೇಶದಿಂದ ಕೋಟ್ಯಂತರ ರೂ.ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿತ್ತಿದ್ದೇನೆ. ತಾಲೂಕಿಗೆ ವಿಶೇಷ ಅನುದಾನ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರುವ ಜತೆಗೆ ಅಭಿವೃದ್ಧಿಗೆ ಹಾಗೂ ರಾಜ್ಯದ ಜನರ ಹಿತಕ್ಕಾಗಿ ನಿರಂತರವಾಗಿ ಶ್ರಮಿಸಲಾಗುತ್ತಿದೆ. ಬೇಸಿಗೆಗೆ ತಾಲೂಕಿನಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಕೆರೆಗಳಿಗೆ ನೀರು ತುಂಬಿಸುವುದು, ಅಗತ್ಯವಿದ್ದಡೆ ಬೋರ್‌ವೆಲ್ ಕೊರೆಸುವುದು ಸೇರಿದಂತೆ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಮದ್ದೂರು ತಾಲೂಕಿನ ಬನ್ನಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ 2 ತಿಂಗಳೊಳಗಾಗಿ ಪೂರ್ಣಗೊಳ್ಳಲಿದ್ದು ಈ ಭಾಗದ ರೈತರ ಬಹುದಿನದ ಕನಸು ಈಡೇರಲಿದೆ. ಬಳಿಕ ಪೈಪ್‌ಲೈನ್ ಕಾಮಗಾರಿ ಕೈಗೊಂಡು ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಒತ್ತು ನೀಡಲಿದ್ದು, ಕೆರೆ ಭರ್ತಿಯಾಗಿ ಈ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಮನ್‌ಮುಲ್ ನಿರ್ದೇಶಕ ಹರೀಶ್ ಬಾಬು, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಗ್ರಾಪಂ ಸದಸ್ಯ ಕೆ.ಎಲ್. ಜಯರಾಂ, ಮುಖಂಡರಾದ ಗುಂಡ ಹೊನ್ನಪ್ಪ, ಆರ್.ಸಿ.ಮಹೇಶ್, ತಿಮ್ಮೇಗೌಡ, ಯೋಗೇಶ್, ಕುಮಾರ್, ರಾಮಕೃಷ್ಣ, ಮಹದೇವ್, ವೆಂಕಟೇಶ್, ಸಿದ್ದರಾಜು, ಉಮೇಶ್, ಸುರೇಶ್, ಅಪ್ಪಾಜಿ ಜಯರಾಮ್, ಕರಿಗುಂಡೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net