ಕುಡಿದ ಅಮಲಿನಲ್ಲಿ ಸ್ನೇಹಿತನ ಕೊಲೆ

Published on

ಹುಣಸೂರು: ತಾಲೂಕಿನ ಗಾವಡಗೆರೆ ಹೋಬಳಿ ಹರವೆ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ.


ಗ್ರಾಮದ ಸಣ್ಣಸ್ವಾಮಿ ನಾಯಕ (48) ಕೊಲೆಯಾದವ. ಅದೇ ಗ್ರಾಮದ ಕುಮಾರ ಎಂಬಾತ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಸಣ್ಣಸ್ವಾಮಿ ನಾಯಕ ಮತ್ತು ಕುಮಾರ್ ಆಪ್ತ ಸ್ನೇಹಿತರಾಗಿದ್ದು ಇಬ್ಬರೂ ಎಳನೀರು ಕೀಳುವ ಕೆಲಸದ ಜತೆಗೆ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಭಾನುವಾರ ರಾತ್ರಿ 9 ಗಂಟೆ ಸುಮಾರಿನಲ್ಲಿ ಕುಡಿದ ಮತ್ತಿನಲ್ಲಿದ್ದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ತಾರಕಕ್ಕೇರುತ್ತಿರುವುದನ್ನು ಮನಗಂಡು ಸಣ್ಣಸ್ವಾಮಿನಾಕನ ಪತ್ನಿ ಸ್ಥಳಕ್ಕೆ ಬಂದು ಪತಿಯನ್ನು ಮನೆಗೆ ಕರೆದುಕೊಂಡು ಹೋಗಿ ಕೂಡಿ ಹಾಕಿದ್ದಾರೆ. ಇದರಿಂದ ಕೋಪಗೊಂಡ ಸಣ್ಣಸ್ವಾಮಿ ನಾಯಕ ಕೋಣೆಯಿಂದ ಹೊರಬಂದು ಪತ್ನಿಗೆ ಹೊಡೆದು ಸ್ನೇಹಿತನನ್ನು ಹುಡುಕಿಕೊಂಡು ಹೋಗಿದ್ದಾನೆ. ಮತ್ತೆ ಸ್ನೇಹಿತ ಬಂದು ಗಲಾಟೆ ಮಾಡಲು ಮುಂದಾದಾಗ ಕೋಪಗೊಂಡ ಕುಮಾರ ಚಾಕುವಿನಿಂದ ಸಣ್ಣಸ್ವಾಮಿನಾಯಕನ ಕುತ್ತಿಗೆ ಮತ್ತು ಭುಜಕ್ಕೆ ಬಲವಾಗಿ ಚುಚ್ಚಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕುಮಾರ ಪರಾರಿಯಾಗಿದ್ದಾನೆ.


ಸ್ಥಳಕ್ಕೆ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ರವಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net