ಕೀಟಭಾದೆ ಮತ್ತು ಬೆಲೆ ಕುಸಿತದಿಂದ ನಷ್ಟ ಅನುಭವಿಸುತ್ತಿರುವ ರೈತರಿಂದ ಮಾವಿನ ಮರಗಳಿಗೆ ಕೊಡಲಿ ಏಟು / ಮಾವಿಗೆ ಸತತ ಬೆಲೆ ಕುಸಿತ / ಪರ್ಯಾಯ ಬೆಳೆ ಮಾಡಲು ಮುಂದಾಗಿರುವ ರೈತರು

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ನಿರಂತರವಾಗಿ ಕಾಡುತ್ತಿರುವ ಕೀಟಭಾದೆ, ಸತತ ಬೆಲೆ ಕುಸಿತದಿಂದ ಕಂಗಾಲಾಗಿರುವ ಮಾವು ಬೆಳೆಗಾರರು ನಷ್ಟ ಅನುಭವಿಸುವುದಕ್ಕಿಂತ ಜಮೀನು ಖಾಲಿ ಇರುವುದು ವಾಸಿ ಎಂದು ಮಾವಿನ ಮರಗಳಿಗೆ ಕೊಡಲಿ ಏಟು ನೀಡಲು ಮುಂದಾಗಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳು ಇಲ್ಲದೇ ಇರುವುದರಿಂದ ವಾರ್ಷಿಕ ಬೆಳೆಯಾದ ಮಾವನ್ನು ಹೆಚ್ಚಾಗಿ ಬೆಳೆಯುತ್ತಾರೆ. ಸುಮಾರು ೫೦ ಸಾವಿರ ಹೆಕ್ಟೇರ್ ಪ್ರದೇಶಕ್ಕಿಂತ ಹೆಚ್ಚಾಗಿ ಜಿಲ್ಲೆಯಲ್ಲಿ ಮಾವನ್ನು ಬೆಳೆಯುತ್ತಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಒಂದರಲ್ಲಿಯೇ ೩೦ ಸಾವಿರಕ್ಕಿಂತ ಹೆಚ್ಚಾಗಿ ಮಾವನ್ನು ಬೆಳೆಯುತ್ತಿದ್ದಾರೆ.

ಕಳೆದ ೫ ವರ್ಷಗಳಿಂದ ಸತತವಾಗಿ ಮಾವಿಗೆ ಬೆಲೆ ಇಲ್ಲದೆ ನಷ್ಟ ಅನುಭವಿಸುತ್ತಲೇ ಬರುತ್ತಿದ್ದಾರೆ. ಒಂದು ಟನ್ ಮಾವು ಬೆಳೆಯಬೇಕಾದರೆ ರೈತನಿಗೆ ೧೫ ಸಾವಿರ ರೂ.ಗಳು ಖರ್ಚು ಬರುತ್ತಿದ್ದು, ಈ ಬಾರಿ ಮಾರುಕಟ್ಟೆಯಲ್ಲಿ ಒಂದು ಟನ್ ಮಾವು ೨೫೦೦ ಸಾವಿರದಿಂದ ೩೦೦೦ ಸಾವಿರದ ತನಕ ಮಾರಾಟವಾಗಿದೆ. ಇತ್ತೀಚೆಗೆ ಕೊನೆಯಲ್ಲಿ ಸರ್ಕಾರ ೪ ರೂ.ಗಳ ಬೆಂಬಲ ಬೆಲೆ ನೀಡಿತ್ತು. ಆದರೆ ಅದು ಕೆಲವು ರೈತರಿಗೆ ಮಾತ್ರ ಸೀಮಿತವಾಗಿದೆ. ಸರ್ಕಾರದ ಬೆಂಬಲ ಬೆಲೆ ಘೋಷಣೆ ಮಾಡುವ ಮೊದಲೇ ಶೇ.೭೦ ರಷ್ಟು ಮಾವು ಮಾರಾಟವಾಗಿತ್ತು. ಆದ್ದರಿಂದ ಎಲ್ಲ ರೈತರಿಗೂ ಬೆಂಬಲ ಬೆಲೆ ಸಿಗಲಿಲ್ಲ.

ಮಾವಿನಲ್ಲಿ ಶೇ.೭೫ ರಷ್ಟು ಭಾಗ ತೋತಾಪುರಿ ಮಾವನ್ನು ಬೆಳೆಯುತ್ತಿದ್ದು, ಈ ಬಾರಿ ಈ ಮಾವಿಗೆ ಬೆಲೆ ಕುಸಿತದಿಂದ ರೈತರು ಕಂಗಾಲಾದರು. ಪ್ರತಿವರ್ಷ ಬೇನಿಷ ಮತ್ತು ಬಾದಾಮಿ ತಳಿಗಳು ಸ್ವಲ್ಪ ಮಟ್ಟಿಗೆ ಬೆಲೆ ಇರುತ್ತಿತ್ತು. ಆದರೆ ಈ ಬಾರಿ ಈ ಎರಡೂ ತಳಿಗಳಿಗೂ ಬೆಲೆ ಇಲ್ಲದೆ ಕುಸಿಯಿತು. ಮಲ್ಲಿಕ ತಳಿ ಬೆಳೆದ ರೈತರಿಗೆ ಮಾತ್ರ ಸ್ವಲ್ಪ ಮಟ್ಟಿಗೆ ಬಂದ ಹಣ ಬಿಟ್ಟರೆ ಬೇರೆ ಯಾವ ತಳಿಗಳಿಗೂ ಬೆಲೆ ಇಲ್ಲದೆ ನಷ್ಟ ಅನುಭವಿಸುವಂತೆ ಆಯಿತು.

ಇದರಿಂದ ರೋಸಿಹೋಗಿರುವ ಬೆಳೆಗಾರರು ಕೀಟಭಾದೆ ಮತ್ತು ರೋಗಗಳಿಂದ ಫಸಲನ್ನು ರಕ್ಷಿಸಿಕೊಳ್ಳುವುದು ಕಷ್ಟದ ಪರಿಸ್ಥಿತಿ ಇರುವಾಗ ಬೆಲೆಯೂ ಕುಸಿತ ಆಗಿರುವಾಗ ಮರಗಳನ್ನು ಇಟ್ಟುಕೊಂಡು ಪ್ರವೇಜನವೇನು ಎಂದು ಇರುವ ಮರಗಳನ್ನು ಕಟಾವು ಮಾಡಿ, ಖಾಲಿ ಜಮೀನಿನಲ್ಲಿ ರಾಗಿ, ಹುರುಳಿಯಾದರೂ ಬೆಳೆದುಕೊಳ್ಳಬಹುದೆಂದು ಮರಗಳನ್ನು ಕಟಾವು ಮಾಡಲು ಮುಂದಾಗಿದ್ದಾರೆ.

ಶ್ರೀನಿವಾಸಪುರ ತಾಲ್ಲೂಕಿನ ಕಸಬಾ ಹೋಬಳಿ ಚಲ್ದಿಗಾನಹಳ್ಳಿ, ಮಗಿಲಹಳ್ಳಿ ಮುಂತಾದ ಗ್ರಾಮಗಳಲ್ಲಿ ಈಗಾಗಲೇ ರೈತರು ಮರಗಳನ್ನು ಕಟಾವು ಮಾಡಲು ಮುಂದಾಗಿದ್ದಾರೆ. ಮಾವಿನ ಫಸಲಿಗೂ ಬೆಲೆ ಇಲ್ಲ. ಮರಗಳಿರುವ ಜಮೀನಿನಲ್ಲಿ ಟಮೆಟೋ ಸೇರಿದಂತೆ ಇತರೆ ತರಕಾರಿ ಬೆಳೆಗಳನ್ನು ನೀರಾವರಿ ಹೊಂದಿರುವವರು ಬೆಳೆಯುತ್ತಿದ್ದರು. ಮಾವಿಗೆ ಕೀಟಭಾದೆ ಮತ್ತು ರೋಗ ರುಜಿನಗಳು ಹೆಚ್ಚಾಗಿರುವ ಕಾರಣ ಇತರೆ ಬೆಳೆಗಳು ಬೆಳೆಯಲು ಸಾಧ್ಯವಾಗುತ್ತಿಲ್ಲ. ಮಾವು ಒಂದನ್ನೇ ನಂಬಿದರೆ ಜೀವನ ಸಾಗಿಸಲು ಕಷ್ಟವಾಗಿದೆ. ಈ ರೀತಿ ಬೆಲೆ ಸತತವಾಗಿ ಕುಸಿಯುತ್ತಿರುವುದರಿಂದ ಮರಗಳನ್ನು ಇಟ್ಟುಕೊಂಡು ಏನು ಮಾಡುವುದು ಎಂಬುದು ರೈತರ ಅಭಿಪ್ರಾಯವಾಗಿದೆ.

ಕೋಟ್

ಮಾವಿನ ಬೆಲೆ ಕುಸಿತದಿಂದಾಗಿ ಉಳುಮೆ, ಔಷಧಿ, ಗೊಬ್ಬರ ಮತ್ತು ಕಾಯಿ ಕೀಳುವ ಕೂಲಿ ಬಾರದೆ ಇರುವಾಗ ಮರಗಳನ್ನು ಇಟ್ಟುಕೊಂಡು ಏನು ಪ್ರಯೋಜನ. ನನ್ನ ೫ ಎಕರೆ ಮಾವಿನ ತೋಟದಲ್ಲಿ ತೋತಾಪುರಿ, ಬೇನಿಷ ತಳಿಯ ಮರಗಳನ್ನು ಕಟಾವು ಮಾಡಿಸಲಾಗುತ್ತಿದೆ. ೩೦ ವರ್ಷದ ಮರಗಳಾಗಿವೆ. ೧೦ ವರ್ಷಗಳಿಂದ ಬೆಲೆ ಇಲ್ಲದೆ ನಷ್ಟ ಅನುಭವಿಸುತ್ತಲೇ ಇದ್ದೇವೆ. ಮಾವಿನ ಮರಗಳು ಇರುವ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಈ ಬಾರಿ ಮರಗಳಲ್ಲಿಯೇ ಮಾವು ಉದುರಿ ಕೊಳೆತಿರುವುದರಿಂದ ಜಮೀನಿನಲ್ಲಿ ಕೀಟಭಾದೆಗಳು ಹೆಚ್ಚಾಗಿವೆ. ಸರ್ಕಾರದ ಬೆಂಬಲ ಬೆಲೆಯಿಂದ ಯಾವುದೇ ಪ್ರಯೋಜನೆವಿಲ್ಲ.

-ಶಿವಪ್ರಸಾದ್, ರೈತ, ಚಲ್ದಿಗಾನಹಳ್ಳಿ.

ಕೋಟ್

ಕಳೆದ ೮ ವರ್ಷಗಳಿಂದ ಬರಗಾಲದ ಸಂದರ್ಭದಲ್ಲಿ ಮರಗಳು ಒಣಗಿ ಹೋದ ಕಾರಣ ರೋಣೂರು ಹೋಬಳಿಯಲ್ಲಿ ೧೦೦ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ಮರಗಳನ್ನು ಕಟಾವು ಮಾಡಿಸಿದರು. ಈ ವರ್ಷ ಬೆಲೆ ಇಲ್ಲದ ಕಾರಣ ಹಾಗೂ ಸತತವಾಗಿ ೧೦ ವರ್ಷಗಳಿಂದ ಮಾವಿಗೆ ಸರಿಯಾದ ಬೆಲೆ ಸಿಗದ ಕಾರಣ ರೋಸಿ ಹೋಗಿರುವ ರೈತರು ಮರಗಳನ್ನು ಕಟಾವು ಮಾಡಲು ಮುಂದಾಗಿದ್ದಾರೆ. ಇನ್ನೂ ಫಸಲು ಇದೆ. ಫಸಲು ಕಿತ್ತುಕೊಂಡ ನಂತರ ಇನ್ನಷ್ಟು ರೈತರು ಮರಗಳನ್ನು ಕಟಾವು ಮಾಡುವ ಸಾಧ್ಯತೆ ಇದೆ. ನೀರಾವರಿ ಇಲ್ಲದ ಜಿಲ್ಲೆಯಲ್ಲಿ ರೈತರು ಮಾವನ್ನು ಬೆಳೆದು ಜೀವನೋಪಾಯ ಮಾಡುತ್ತಿದ್ದರು. ಇತ್ತೀಚೆಗೆ ಮಾವು ಬೆಳೆಗಾರರ ಸಂಖ್ಯೆಯೂ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡುವಲ್ಲಿ ವಿಫಲವಾಗಿದೆ. ಆದ್ದರಿಂದ ಬೆಲೆಯೂ ಕುಸಿಯತೊಡಗಿದೆ. ಬೆಳೆಗಾರರಿಗೆ ಸರ್ಕಾರ ಜ್ಯೂಸ್ ಫ್ಯಾಕ್ಟರಿಗಳು, ಶೀಥಲ ಗೃಹಗಳು ತೆರೆಯದೇ ಇರುವುದೇ ರೈತರು ನಷ್ಟ ಅನುಭವಿಸಲು ಕಾರಣವಾಗಿದೆ. ಸರ್ಕಾರ ಗ್ಯಾರಂಟಿ ಯೋಜನೆಗಳನ್ನೇ ಮುಂದುವರೆಸಿದರೆ ಅದನ್ನೇ ನಂಬಿ ಜೀವನ ಸಾಗಿಸಬಹುದು. ಕಷ್ಟ ಬಿದ್ದು, ಬೆಳೆ ಬೆಳೆದು ನಷ್ಟ ಅನುಭವಿಸುವುದು ಏಕೆ? ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗದಂತೆ ಆಗಿದೆ.

-ಚಿನ್ನಪ್ಪರೆಡ್ಡಿ, ಮಾವು ಬೆಳೆಗಾರರ ಜಿಲ್ಲಾಧ್ಯಕ್ಷ.

ಚಿತ್ರ ೨೧ ಕೆ.ಎಲ್.ಆರ್. ೦೧ : ಚಲ್ದಿಗಾನಹಳ್ಳಿ ಸಮೀಪ ರೈತ ಮಾವಿನ ಮರಗಳನ್ನು ಕಟಾವು ಮಾಡಿಸುತ್ತಿರುವುದು.

ಚಿತ್ರ ೨೧ ಕೆ.ಎಲ್.ಆರ್. ೦೧ಎ : ಶಿವಪ್ರಸಾದ್, ರೈತ, ಚಲ್ದಿಗಾನಹಳ್ಳಿ ರವರ ಭಾವಚಿತ್ರ

ಚಿತ್ರ ೨೧ ಕೆ.ಎಲ್.ಆರ್. ೦೧ಬಿ : ಚಿನ್ನಪ್ಪರೆಡ್ಡಿ, ಮಾವು ಬೆಳೆಗಾರರ ಜಿಲ್ಲಾಧ್ಯಕ್ಷ ರವರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net